ಬೆಂಗಳೂರು: ಬಡ್ತಿ ಮೀಸಲಾತಿ ಸಂಬಂಧಿಸಿದ ಅರ್ಜಿ ವಿಚಾರಣೆ ಮಾರ್ಚ್ 20ರಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಈ ಮಧ್ಯೆ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸಲು ಇನ್ನೂ ಆರು ತಿಂಗಳು ಕಾಲಾವಕಾಶ ಬೇಕೆಂದು ಕೋರಿ ಶನಿವಾರ ದಿಢೀರ್ ಮನವಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.
ಮಾ.15 ರೊಳಗೆ ಎಲ್ಲ ಇಲಾಖೆಗಳ ಜೇಷ್ಠತಾ ಪಟ್ಟಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಈ ಹಿಂದಿನ ತೀರ್ಪಿನಲ್ಲಿ ತಿಳಿಸಲಾಗಿತ್ತು. ಮಾ. 20ರಂದು ಸರ್ಕಾರ ನ್ಯಾಯಾಲಯಕ್ಕೆ ಹಿಂಬಡ್ತಿ ಹಾಗೂ ಮುಂಬಡ್ತಿ ಪಟ್ಟಿ ಸಮೇತ ಸಲ್ಲಿಸಬೇಕಿತ್ತು. ಆದರೆ, ಇನ್ನೂ ಆರು ತಿಂಗಳು ಕಾಲಾವಕಾಶ ಕೋರಿ ಮನವಿ ಸಲ್ಲಿಸಿದ್ದು, ವಿಧಾನಸಭೆ ಚುನಾವಣೆವರೆಗೂ ಪ್ರಕರಣ ತಳ್ಳುವ ಲೆಕ್ಕಾಚಾರ ಎಂದೇ ಹೇಳಲಾಗುತ್ತಿದೆ. ಮಾ.20ರಂದು ನ್ಯಾಯಾಲಯ ಯಾವ ನಿರ್ದೇಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಆಕ್ರೋಶ: ಈ ಮಧ್ಯೆ, ರಾಜ್ಯ ಸರ್ಕಾರದ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ “ಅಹಿಂಸಾ’ ಸಂಘಟನೆ ಅಧ್ಯಕ್ಷ ಎಂ.ನಾಗರಾಜ್, ನ್ಯಾಯಾಲಯದ ಆದೇಶ ಉಲ್ಲಂ ಸಿದರೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹೊಣೆಗಾರರಾಗಬೇಕಾಗುತ್ತದೆ. ನ್ಯಾಯಾಲಯವು ರಾಜ್ಯಪಾಲರ ಮೂಲಕ ತನ್ನ ಆದೇಶ ಪಾಲನೆಗೂ ಮುಂದಾಗಬಹುದು ಎಂದು ಹೇಳಿದ್ದಾರೆ.
“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೆಲವು ಇಲಾಖೆಗಳಲ್ಲಿ ಇನ್ನೂ ಜೇಷ್ಠತಾ ಪಟ್ಟಿ ಸಿದ್ಧಪಡಿಸಿಲ್ಲ. ಇನ್ನೂ ಕೆಲವು ಇಲಾಖೆಗಳಲ್ಲಿ ಹಿಂಬಡ್ತಿಯಿಂದ ಖಾಲಿಯಾಗುವ ಹುದ್ದೆಗಳಿಗೆ ಮುಂಬಡ್ತಿ ಯಾರಿಗೆ ಕೊಡಬೇಕು ಎಂಬುದರ ಪಟ್ಟಿಯನ್ನೂ ಸಿದ್ಧಪಡಿಸಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಚ್ 15 ರೊಳಗೆ ಜೇಷ್ಠತಾ ಪಟ್ಟಿ ಸಿದ್ಧಪಡಿಸಿಕೊಡಿ ಎಂದರೂ ಕೇಳದೇ ನ್ಯಾಯಾಲಯಕ್ಕೆ ಸಡ್ಡು ಹೊಡೆಯುವ ಕೆಲಸ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸದಿದ್ದರೆ, 12 ಲಕ್ಷ ನೌಕರರು ಹಾಗೂ ಅವರ ಕುಟುಂಬದವರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವಿರುದ್ಧವಾಗಿ ಮತ ಚಲಾಯಿಸಬೇಕೆಂದು ಸಂಘದ ಸಮಾವೇಶದಲ್ಲಿ ನಿರ್ಣಯವಾಗಿದೆ ಎಂದರು.
63 ಇಲಾಖೆ, 130 ನಿಗಮ ಮತ್ತು ಮಂಡಳಿಗಳಲ್ಲಿ ಜೇಷ್ಠತಾ ಪಟ್ಟಿ ಮಾಡಬೇಕಿದೆ. ಸರಿಯೋ ತಪ್ಪೋ ಬಹುತೇಕ ಇಲಾಖೆಗಳಲ್ಲಿ ಶೇ. 90ರಷ್ಟು ಮುಗಿದಿದೆ. ಆದರೆ, ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಯ ಪಟ್ಟಿ ಅಪೂರ್ಣವಾಗಿದೆ. ರಾಜ್ಯ ಸರ್ಕಾರ ಏನೇ ಮಾಡಿದರೂ ನಾವು ಮಾತ್ರ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.