ಹೊಸದಿಲ್ಲಿ: ಭಾರತೀಯ ರೈಲ್ವೇಯಲ್ಲಿ ಉದ್ಯೋಗಿಗಳಾಗಿರುವ, ಎರಡು ಬಾರಿಯ ಏಶ್ಯನ್ ಗೇಮ್ಸ್ ಪದಕ ವಿಜೇತೆ ಸ್ಟಿಪಲ್‌ಚೇಸರ್ ಸುಧಾ ಸಿಂಗ್ ಹಾಗೂ ರಾಷ್ಟ್ರೀಯ ಕುಸ್ತಿ ಕೋಚ್ ಕುಲ್‌ದೀಪ್ ಅವರಿಗೆ ಭಡ್ತಿ ನೀಡಲಾಗಿದೆ. ರೈಲ್ವೇ ಇಲಾಖೆಯಲ್ಲಿ ಕ್ರೀಡಾಪಟುಗಳು ಹಾಗೂ ಅವರ ಮಾರ್ಗದರ್ಶಕರನ್ನು ಉತ್ತೇಜಿಸುವ “ಉದಾರೀಕರಣ’ ನಿಯಮದ ಅಡಿಯಲ್ಲಿ ಭಡ್ತಿ ನೀಡಿದೆ.
ಈ ಬಾರಿ ಕಾಮನ್ವೆಲ್ತ್ ಗೇಮ್ಸ್‌ನ ಪದಕ ವಿಜೇತರ ಅಭಿನಂದನಾ ಕಾರ್ಯಕ್ರಮದಲ್ಲಿ ಈ ನಿಯಮವನ್ನು ಜಾರಿಗೆ ತಂದಿದ್ದು, ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಹಾಗೂ ಕೋಚ್‌ಗಳಿಗೆ ಉದ್ಯೋಗದಲ್ಲಿ ಭಡ್ತಿ ನೀಡುವ ಭರವಸೆ ನೀಡಲಾಗಿತ್ತು. ಒಲಿಂಪಿಕ್ ಗೇಮ್ಸ್‌ನಲ್ಲಿ ಭಾರತವನ್ನು ಕನಿಷ್ಠ 2 ಬಾರಿ ಪ್ರತಿನಿಧಿಸಿದ ಕ್ರೀಡಾಪಟುಗಳಿಗೂ ಈ ನಿಯಮ ಅನ್ವಯವಾಗುತ್ತದೆ.
“ಈ ನಿಯಮದ ಮೊದಲ ಫಲಾನುಭಮಿ ಭಾರತೀಯ ವನಿತಾ ಕುಸ್ತಿಪಟುಗಳ ಪ್ರಮುಖ ಕೋಚ್ ಆಗಿರುವ ಕುಲ್‌ದೀಪ್ ಸಿಂಗ್ ಉತ್ತರ ರೈಲ್ವೇಯ ಸಹಾಯಕ ಕಮರ್ಷಿಯಲ್ ನಿರ್ದೇಶಕ ಹುದ್ದೆಗೆ ಭಡ್ತಿ ನೀಡಲಾಗಿದೆ ಹಾಗೂ ಸುಧಾ ಸಿಂಗ್ ಅವರಿಗೆ ಭಾರತೀಯ ರೈಲ್ವೇಯಲ್ಲಿ ಅಧಿಕಾರಿ ದರ್ಜೆಗೆ ಭಡ್ತಿ ನೀಡಲಾಗಿದೆ’ ಎಂದು ರೈಲ್ವೇ ನ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ತಿಳಿಸಿದೆ.
ಕುಲ್‌ದೀಪ್ ಸಿಂಗ್, ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಹಾಗೂ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಪೋಗಟ್ ಅವರ ಮಾರ್ಗದರ್ಶಕರೂ ಕೂಡ ಹೌದು. ಇವರಿಬ್ಬರೂ ರೈಲ್ವೇ ಉದ್ಯೋಗಿಗಳಾಗಿದ್ದಾರೆ.
ಈ ಬಾರಿಯ ಏಶ್ಯನ್ ಗೇಮ್ಸ್‌ನಲ್ಲಿ ಸುಧಾ ಸಿಂಗ್ ಬೆಳ್ಳಿ ಪದಕ ಜಯಿಸಿದ್ದರು. ಇದಕ್ಕೂ ಮುನ್ನ 2010ರಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆದರೆ ಸುಧಾ ಸಿಂಗ್ ರಾಜ್ಯ ಸರಕಾರದ ಕ್ರೀಡಾ ವಿಭಾಗದಲ್ಲಿ ನೌಕರಿ ಬೇಕೆಂದು ಬೇಡಿಕೆಯಿಟ್ಟಿದ್ದಾರೆ.