Advertisement

ನಗರ ಭಾಗದಲ್ಲಿದೆ ಪ್ರಚಾರದ ಅಬ್ಬರ; ಎಲ್ಲೆಡೆ ಚುನಾವಣೆ ಸುದ್ದಿ

04:26 PM May 07, 2018 | |

ಮಂಗಳೂರು: ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ನಗರ ಭಾಗದಲ್ಲಿ ಚುನಾವಣೆಯ ಅಬ್ಬರ ಆರಂಭಗೊಂಡಿದ್ದು, ಪ್ರಚಾರದ ವಾಹನಗಳು ನಗರದಲ್ಲೆಲ್ಲ ಸಂಚರಿಸಿ ಜನರಿಗೆ ಚುನಾವಣೆಯನ್ನು ನೆನಪಿಸುವ ಕಾರ್ಯ ಮಾಡುತ್ತಿವೆ. ಜನರ ಬಾಯಲ್ಲಿ ಚುನಾವಣೆಯ ಸುದ್ದಿ ಹರಿದಾಡುತ್ತಿದ್ದು, ಈ ಬಾರಿ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

Advertisement

ಬಂಟ್ವಾಳ ಕ್ಷೇತ್ರದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಂಟ್ವಾಳ, ಬಿ.ಸಿ. ರೋಡ್‌, ಕೈಕಂಬ, ಮೆಲ್ಕಾರ್‌ ಭಾಗಗಳಲ್ಲಿ ಉದಯವಾಣಿ ತಂಡ ಆಯ್ದ ಮತದಾರರನ್ನು ಮಾತಾಡಿಸಿದಾಗ ಈ ವಾತಾವರಣ ಸ್ಪಷ್ಟವಾಯಿತು. ಚುನಾವಣೆ ಎಂದರೆ ಹಿಂದಿನಂತೆ ಅಬ್ಬರ ಕಂಡುಬರುವುದಿಲ್ಲ. ಪ್ರಚಾರ ಕಾರ್ಯ ಎರಡೂ ಪ್ರಮುಖ ಪಕ್ಷಗಳಿಂದಲೂ ನಡೆಯುತ್ತಿದೆ.

ಹಿಂದೆ ಚುನಾವಣೆ ಎಂದರೆ ನಗರದೆಲ್ಲೆಡೆ ಬ್ಯಾನರ್‌, ಬಂಟಿಂಗ್‌ಗಳು ಕಂಡುಬರುತ್ತಿದ್ದವು. ಗೋಡೆಗಳಲ್ಲಿ ಭಿತ್ತಿಪತ್ರ, ಜತೆಗೆ ಪೈಂಟ್‌ನಿಂದ ಪಕ್ಷದ ಚಿಹ್ನೆ ಬಿಡಿಸುತ್ತಿದ್ದರು. ಈಗ ಅಂತಹ ಅಬ್ಬರ ಕಂಡುಬರುತ್ತಿಲ್ಲ. ಆದರೆ ವಾಹನಗಳ ಮೂಲಕ ಮೈಕ್‌ ಪ್ರಚಾರ ನಡೆಯುತ್ತಿದೆ. ಆಗ ಮಾತ್ರ ಚುನಾವಣೆ ಎಂಬುದು ನೆನಪಾಗುತ್ತದೆ ಎಂದು ಹಿರಿಯರೊಬ್ಬರು ಅಭಿಪ್ರಾಯಪಟ್ಟರು.

ಬೆಟ್ಟಿಂಗ್‌ ಇದೆ
ನಗರ ಭಾಗದಲ್ಲಿ ಚುನಾವಣೆ ಪ್ರಚಾರದ ಜತೆಗೆ ಬೆಟ್ಟಿಂಗ್‌ನ ಮಾತುಗಳೂ ಕೇಳಿಬರುತ್ತಿವೆ. ಲಕ್ಷದಲ್ಲಿ 50 ಪೈಸೆ, 60 ಪೈಸೆ ಎಂಬ ಪೈಸೆ ಲೆಕ್ಕಾಚಾರಗಳೂ ಇವೆ. ಈ ಭಾಗದಲ್ಲಿ ಬಿಜೆಪಿ-ಕಾಂಗ್ರೆಸನ್ನು ಬಿಟ್ಟರೆ ಬೇರೆ ಯಾವ ಅಭ್ಯರ್ಥಿಯ ಪ್ರಚಾರವೂ ನಡೆದಿಲ್ಲ. ಉಳಿದ ಅಭ್ಯರ್ಥಿಗಳು ಯಾರು ಎಂಬುದೂ ನಮಗೆ ಗೊತ್ತಿಲ್ಲ ಎನ್ನುತ್ತಾರೆ ಮತದಾರರು.

ಅಭಿವೃದ್ಧಿಯ ವಿಚಾರಕ್ಕೆ ಬಂದಾಗ ಅಭಿವೃದ್ಧಿಯಾಗಿದೆ ಎಂದು ಒಂದಷ್ಟು ಮಂದಿ ಅಭಿಪ್ರಾಯಪಟ್ಟರೆ, ಮತ್ತೂಂದಷ್ಟು ಮಂದಿ ಅಭಿವೃದ್ಧಿ ಏನೂ ಸಾಲದು ಎಂದು ಹೇಳುತ್ತಾರೆ. ಬಂಟ್ವಾಳ ಪೇಟೆ, ಪುರಸಭೆಯ ಡ್ರೈನೇಜ್‌ ವ್ಯವಸ್ಥೆ, ನೇತ್ರಾವತಿ ಮಲಿನಗೊಳ್ಳುವುದು ಮತದಾರರ ಚರ್ಚೆಯ ವಿಷಯವಾಗಿತ್ತು.

Advertisement

ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಚೇರಿಗಳು ಬಿ.ಸಿ. ರೋಡಿನಲ್ಲೇ ಇರುವುದರಿಂದ ಆ ಭಾಗದಲ್ಲಿ ಕೊಂಚ ಹೆಚ್ಚಿನ ಅಬ್ಬರ ಕಾಣಿಸುತ್ತಿದೆ. ದಿನಸಿ ಅಂಗಡಿಗಳು, ಮೊಬೈಲ್‌ ಶಾಪ್‌ಗಳು, ಹೋಟೆಲ್‌ಗ‌ಳಲ್ಲಿ ಇಲ್ಲಿ ಈ ಬಾರಿ ಯಾರು, ರಾಜ್ಯದಲ್ಲಿ ಸಮ್ಮಿಶ್ರವೋ, ಸ್ವತಂತ್ರವೋ ಎಂಬ ಮಾತುಕತೆ ಬಿರುಸಾಗಿ ಚಾಲ್ತಿಯಲ್ಲಿದೆ.

ರಾಹುಲ್‌ ಗಾಂಧಿ ಬಂಟ್ವಾಳಕ್ಕೆ ಬಂದು ಒಂದಷ್ಟು ಬದಲಾವಣೆಯಾಗಿದೆ, ಮೋದಿ ಜಿಲ್ಲೆಗೆ ಬಂದಿರುವುದರಿಂದ ಜಿಲ್ಲೆಯಲ್ಲಿ ಮೋದಿ ಅಲೆ ಇದೆ ಎಂಬ ಚರ್ಚೆಗಳೂ ಜೋರಾಗಿಯೇ ನಡೆಯುತ್ತಿದೆ. ಆದರೆ ಕೆಲವು ಮಂದಿ ರಾಜಕೀಯ ಮಾತನಾಡಿದರೂ, ತಮ್ಮ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ತಮ್ಮ ಬೆಂಬಲ ಯಾರಿಗೆ ಎಂದು ತೋರಿಸಿಕೊಳ್ಳದೆ ಜಾಣ್ಮೆ ಪ್ರದರ್ಶಿಸಿದರು.

ಕುತೂಹಲ ಇದೆ
ದಿನದಿಂದ ದಿನಕ್ಕೆ ಚುನಾವಣೆ ಚರ್ಚೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬ ಕುತೂಹಲ ಜತೆಗೆ ಇಲ್ಲಿ ಯಾರು ಎಂಬ ಪ್ರಶ್ನೆಯೂ ಇದೆ. ಎರಡೂ ಪಕ್ಷಗಳ ನಾಯಕರೂ ಗೆಲ್ಲುವ ಲೆಕ್ಕಾಚಾರ ನೀಡುತ್ತಿರುವುದರಿಂದ ನಮ್ಮಲ್ಲೂ ಒಂದಷ್ಟು ಕುತೂಹಲ ಹೆಚ್ಚಾಗಿದೆ ಎನ್ನುತ್ತಾರೆ ಬಿ.ಸಿ. ರೋಡ್‌ನ‌ ಚಂದ್ರಶೇಖರ್‌ ಆಚಾರ್ಯ.

ಹಿಂದಿನ ಅಬ್ಬರ ಇಲ್ಲ
ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷದವರು ಜೋರಾಗಿ ಪ್ರಚಾರ ನಡೆಸುತ್ತಿದ್ದು, ಮೂರನೇ ಅಭ್ಯರ್ಥಿಯ ಸುಳಿವಿಲ್ಲ. ಪ್ರಸ್ತುತ ಹಿರಿಯರಲ್ಲಿ ಚುನಾವಣೆಯ ಆಸಕ್ತಿ ಕಡಿಮೆಯಾಗಿದ್ದು, ಯುವಜನಾಂಗ ಉತ್ಸುಕರಾಗಿದ್ದಾರೆ. ಆದರೆ ನಗರ ಭಾಗದಲ್ಲಿ ಎಲ್ಲೂ ಚುನಾವಣೆಯ ಹಿಂದಿನ ಅಬ್ಬರ ಎಲ್ಲೂ ಕಂಡುಬರುತ್ತಿಲ್ಲ ಎನ್ನುತ್ತಾರೆ ಮಹಮ್ಮದ್‌ ಮೆಲ್ಕಾರ್‌.

ತಮ್ಮವರ ಸಮರ್ಥನೆ
ಪ್ರತಿಯೊಬ್ಬರೂ ಯಾವ ವಿಚಾರ ಮಾತನಾಡುವಾಗಲೂ ಚುನಾವಣೆಯ ವಿಚಾರ ಬಂದೇ ಬರುತ್ತದೆ. ಭಿನ್ನ ಪಕ್ಷಗಳ ಮುಖಂಡರು ಎದುರಾದಾಗ ಒಂದಷ್ಟು ಚರ್ಚೆಗಳೂ ನಡೆಯುತ್ತವೆ. ತಮ್ಮ ತಮ್ಮ ಅಭ್ಯರ್ಥಿಗಳನ್ನು ಸಮರ್ಥನೆ ಮಾಡಿಕೊಂಡು ಗೆಲುವಿನ ಲೆಕ್ಕಾಚಾರ ಹಾಕುತ್ತಾರೆ ಎನ್ನುತ್ತಾರೆ ಯೋಗೀಶ್‌ ಬೈಪಾಸ್‌, ಬಂಟ್ವಾಳ.

ಎರಡು ಪಕ್ಷಗಳ ಪ್ರಚಾರ
ಬಂಟ್ವಾಳದಲ್ಲಿ ಎರಡು ಪಕ್ಷಗಳು ಪ್ರಚಾರ ಮಾತ್ರ ಕಾಣುತ್ತಿದ್ದು, ಮನೆ ಮನೆ ಭೇಟಿ ಮಾಡುತ್ತಿದ್ದಾರೆ. ಚುನಾವಣೆ ವಿಶೇಷ ವಾತಾವರಣ ಏನೂ ಕಂಡುಬರುವುದಿಲ್ಲ. ಪ್ರಚಾರ ವಾಹನಗಳು ಆಗಾಗ ಕೈಕಂಬ ಭಾಗದಲ್ಲಿ ಸಂಚರಿಸುತ್ತಿದೆ ಎನ್ನುತ್ತಾರೆ ಕೈಕಂಬದ ಸುಭಾರೈ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next