ಮುನಿಗಳು ಹಾಗೂ ವಿಪ್ರರು ಸೂತಮುನಿಗಳನ್ನು ಕಾಣಲು ಹೋದಾಗ ಬೇಡತಿ ನದಿ ದಾಟಿದ ಪ್ರಸ್ತಾಪ ಸಹ್ಯಾದ್ರಿ ಕಾಂಡದಲ್ಲಿದೆ. ನದಿಗೆ ಬೇಡ್ತಿ ಎಂಬ ಹೆಸರು ಬಂದಿದ್ದು ಏಕೆ? ಈ ಪ್ರಶ್ನೆಗೆ ಉತ್ತರವಾಗಿ ಜನಪದರಲ್ಲಿ ಅರಸು ಯುಗದ ಕತೆಯಿದೆ. ಸೋದೆಯ ಅರಸು ಬೇಟೆಗೆ ಹೋದನು, ಬೇಡರ ಮಹಿಳೆಗೆ ಮನ ಸೋತನು. ಅವಳ ಸಂಗ ಬಯಸಿದನು. ದೊರೆಯ ಆಹ್ವಾನಕ್ಕೆ ಒಪ್ಪದ ಆ ಮಹಿಳೆ, ಸಾಮ್ರಾಜ್ಯ ಪತನವಾಗಲೆಂದು ಶಾಪವಿತ್ತು, ನದಿಗೆ ಹಾರಿ ಪ್ರಾಣ ತೆತ್ತಳು. ಅಂದಿನಿಂದ ನದಿಗೆ ಬೇಡತಿ ಎಂಬ ಹೆಸರು ಬಂತು ಎನ್ನುತ್ತಾರೆ.
Advertisement
ಧಾರವಾಡದ ಸೋಮೇಶ್ವರ ದೇಗುಲದ ಸನಿಹ ಜನಿಸುವ ಶಾಲ್ಮಲೆ, ಹುಬ್ಬಳ್ಳಿಯ ಮೂಲಕ ಹರಿವ ಹೊಳೆಯನ್ನು ಕಲಘಟಗಿಯಲ್ಲಿ ಸೇರಿ ಬೇಡ್ತಿಯಾಗುತ್ತಾಳೆ. ನದಿ ಮೂಲದಿಂದ ಉತ್ತರ ಕನ್ನಡದ ಅಂಕೋಲಾದ ಸಾಗರ ಸಂಗಮದವರೆಗೆ 152ಕಿಲೋ ಮೀಟರ್ ಪಯಣ, ಇದರಲ್ಲಿ 86 ಕಿ.ಲೋ ಮೀಟರ್ ಅರಣ್ಯ ಜಿಲ್ಲೆಯಾದ ಉತ್ತರ ಕನ್ನಡದಲ್ಲಿದೆ. ಬಯಲುಸೀಮೆಯ ಎರೆ ಹೊಲದ ಹತ್ತಿ, ಜೋಳ, ಮೆಣಸಿನ ಸೀಮೆ ಸುತ್ತಾಡಿ, ಬೆಲೆ ಬಾಳುವ ತೇಗದ ಕಾಡಲ್ಲಿ ನುಸುಳಿ ಮಲೆನಾಡು, ಕರಾವಳಿಯ ಅಡಿಕೆ, ಭತ್ತದ ನೆಲೆಯಲ್ಲಿ ಸಾಗುತ್ತದೆ ಬೇಡ್ತಿ ನದಿ.
Related Articles
Advertisement
ಬೇಸಿಗೆಯಲ್ಲಿ ನದಿ ಒಣಗುವ ನೋಟವನ್ನೂ ಆತ ದಾಖಲಿಸಿದ್ದಾನೆ. ಕ್ರಿ.ಶ 1,796ರಲ್ಲಿ ಮಲಬಾರಿನ ನಾಟಾ ವರ್ತಕನೊಬ್ಬ ಪ್ರಪಂಚದಲ್ಲಿ ಎಲ್ಲಿಯೂ ನೋಡದ ದೊಡ್ಡ ತೇಗದ ಮರಗಳನ್ನು ಸೋಂದಾ, ಬನವಾಸಿ ಕಾಡಿನಲ್ಲಿ ಕಂಡಿದ್ದಾಗಿ ಇಂಗ್ಲೀಷರಿಗೆ ಪತ್ರ ಬರೆಯುತ್ತಾನೆ. ತೇಗವೆಂಬ ರಾಜವೃಕ್ಷಕ್ಕೆ ಮನಸೋತ ಬ್ರಿಟೀಷರು ಕ್ರಿ.ಶ 1863ರ ನಂತರದಲ್ಲಿ ನದಿ ಕಣಿವೆಯ ಅಂಕೋಲಾ ಅರೆಬೈಲು ಘಟ್ಟ ಪ್ರದೇಶದಲ್ಲಿ ತೇಗದ ನೆಡುತೋಪು ಬೆಳೆಸಲು ಮುಂದಾಗುತ್ತಾರೆ. ಕಾಳು ಮೆಣಸಿನ ನಂತರದಲ್ಲಿ ತೇಗ ವಿದೇಶಿಗರನ್ನು ಸೆಳೆಯುತ್ತದೆ.
ನದಿ ಮೂಲದಿಂದ ಸಾಗರ ಸಂಗಮದವರೆಗೆ ಯಾವ ಅಡೆತಡೆಯಿಲ್ಲದೇ ಹರಿವು. ಕೃಷಿ, ಮೀನುಗಾರಿಕೆಗೆ ನೆರವು. ದೀಪಾವಳಿ ಹಬ್ಬಕ್ಕೆ ಮುಂಚೆ ಗಂಗಾಷ್ಠಮಿಯ ನಸುಕಿನಲ್ಲಿ ದೇಗುಲ ಹಾಗೂ ಮನೆ ಮನೆಗಳ ಸಂಭ್ರಮದ ಗಂಗಾಪೂಜೆ ಜನಜೀವನ ಸಂಸ್ಕೃತಿಯ ಭಾಗವಾಗಿದೆ. ಯಲ್ಲಾಪುರ, ಶಿರಸಿ, ಅಂಕೋಲಾದ ಕಗ್ಗಾಡು, ಕಣಿವೆ, ಕರಾವಳಿಯಲ್ಲಿ ಕೃಷಿಯ ಚೆಂದದ ಚಿತ್ರಗಳಿವೆ. ಹವ್ಯಕ, ಸಿದ್ದಿ, ಕರೆಒಕ್ಕಲಿಗ, ಹಾಲಕ್ಕಿ, ಮರಾಠಿ, ಕುಣಬಿ, ನಾಡವ, ಹರಿಕಾಂತ, ಹಸಲರು..ಇವರೆಲ್ಲಾ ಸೋಲುತ್ತ ಗೆಲ್ಲುತ್ತ ಹೊಸ ನಾಳೆಗಳಿಗಾಗಿ ಕಷ್ಟಸಹಿಷ್ಣುಗಳಾಗಿ ನಿಂತವರು.
ಅಬ್ಬರದ ಮಳೆಯ ಸಂಕಷ್ಟ, ಸವಾಲುಗಳ ಮಧ್ಯೆಯೇ ಬೆಳೆದವರು. ಕಾಡೊಳಗಿನ ಕತ್ತಲ ಕೃಷಿ ನೆಲೆಯಲ್ಲಿ ಘಟ್ಟವೇರಿದ ಸಾಹಸಿಗರು. ಮರ ಬಳ್ಳಿಗಳಲ್ಲಿ ಪರಿಸರ ಜೀವನ ಶಾಲೆ. ಕಾಟಾಕ್ವಯ್, ಕುಂಬತ್ತೋಡ್, ಕಟ್ರಿಕಿಮಿಯಾವ್, ಕರಿಕುಂಚು, ಸಾತಾಡೆ, ಕೊನೆY ವನವಾಸಿ ಸಿದ್ಧಿಯರ ಪರಿಸರ ನಿಘಂಟಿನಲ್ಲಿ ಇನ್ನೂ ಹೊರಜಗತ್ತು ಅರಿಯದ ನಿಗೂಢಗಳಿವೆ. ಚಂಪಾಷಷ್ಠಿಗೆ ಕೂಲಿ ಕೆಲಸಕ್ಕೆ ಮುದ್ದಾಂ ಬಿಡುವು ನೀಡಿ ಕಾಡಿಗೆ ಬೇಟೆಗೆ ಹೊಕ್ಕುವ ಕುವರರಿಗೆ ಅಂದು ಉಡಗಳು ತತ್ತಿಯಿಡುವ ನಿಖರತೆ ತಿಳಿದಿದೆ.
ಭತ್ತದ ಕೊಯ್ಲು ಮುಗಿದು ಪಕ್ಷಿಗಳು ಖುಷಿ ಪಡುವ ಮಕರ ಸಂಕ್ರಾಂತಿಯೂ ವನವಾಸಿಗರನ್ನು ಕರೆಯುತ್ತದೆ. ಮೇಣದ ಕೋಲು ಹಿಡಿದು ಸಂಗೋಳಿ ಮರದ ತುದಿಯಲ್ಲಿ ಮುಂಜಾನೆ ಐದಕ್ಕೆ ಕೂಡ್ರುವ ವನವಾಸಿಗರಿಗೆ ಹಕ್ಕಿ ಸಂಕ್ರಾಂತಿಯ ಸುಗ್ಗಿಯಿದೆ. ನದಿ ದಂಡೆಯ ಬೆಸ್ತರ ಬದುಕಿನ ಖುಷಿಗೆ ಗಂಗಾವಳಿ ಮೀನಿನ ಪ್ರಭಾವಳಿಯಿದೆ. ಮಾಗೋಡ್ ಕಣಿವೆಯ ಮೂಲೆಯಿಂದ, ಶಿವಗಂಗಾ ಜಲಪಾತದ ತಪ್ಪಲಿಂದ, ಜೇನುಕಲ್ ಗುಡ್ಡದ ತಗ್ಗಿನಿಂದ ನದಿ ಆಸುಪಾಸಿನ ಜೇನು-ಮೀನಿನ ಕತೆಗಳ ಲೆಕ್ಕ ಇಟ್ಟವರಿಲ್ಲ! ಅಡಿಕೆ ಬೆಳೆದು ಬೇರು ಬಿಟ್ಟ ಕಣಿವೆಯ ಹವ್ಯಕರಿಗೆ ಶತಮಾನಗಳ ಹಿಂದೆ ಪೇಟೆ ಬಹುದೂರ.
ಸುತ್ತಲಿನ ಕಾಡು ಗಿಡಗಳ ಬೇರು, ಚಿಗುರು, ತೊಗಟೆ, ಫಲಗಳಲ್ಲಿ ಕಷಾಯ-ತಂಬುಳಿಯ ಆರೋಗ್ಯ ಅಸ್ತ್ರ ದೊರಕಿದೆ. ಕಾಸಿನ ಖರ್ಚಿಲ್ಲದ ಅಡವಿ ಆಹಾರದ ಸರಳ ಬದುಕಿನ ಸೂತ್ರ ಸಿಕ್ಕಿದೆ. ದಪ್ಪಾಪಿ, ಚಾಲೂ ದಪ್ಪಾಪಿ, ತೋವುಂಚಿ, ತೋವುಂಚಿ ಮಾರ್ವಾಡಿ ಬಾರ್ 1, ತೋವುಂಚಿ ಮಾರ್ವಾಡಿ ಬಾರ್ 2, ಜಾಡಿ ಆಫಿ ಹೀಗೆ ಯಲ್ಲಾಪುರದ ಪುಟ್ಟ ಅಡಿಕೆ ಮಾರುಕಟ್ಟೆಯಲ್ಲಿ ವಿಶೇಷ ಆಫಿ ಅಡಿಕೆ ಸುಮಾರು 32 ವಿಧಗಳಾಗಿ ವಿಂಗಡನೆಯಾಗಿ ಕಲ್ಕತ್ತಾ, ರಾಜಸ್ಥಾನ್, ನಾಗಪುರ ಸೇರಿದಂತೆ ದೇಶದ ವಿವಿಧ ಮಾರುಕಟ್ಟೆ ತಲುಪುವಲ್ಲಿ ನದಿ ನಾಡಿನ ಕೃಷಿ ಕೌಶಲವಿದೆ.
ನದಿ ಬದುಕು ಜಲವಿದ್ಯುತ್ ಯೋಜನೆಗೆ ಹೊರಟ ಕತೆ ಎಲ್ಲೆಡೆಯಿದೆ. ಬೇಡ್ತಿಯದು ಇಂಥದೇ ವ್ಯಥೆ. ಜಲವಿದ್ಯುತ್ ಯೋಜನೆಯ ಪ್ರಸ್ತಾಪ 1972ರಲ್ಲೇ ಶುರುವಾಗಿದೆ. ಇದು ಬೃಹತ್ ಜಲ ವಿದ್ಯುತ್ ಯೋಜನೆಯ ಅಂತಿಮ ರೂಪಪಡೆದು ಕ್ರಿ,ಶ 1979ರಲ್ಲಿ ಅಬ್ಬರದ ಕಾರ್ಯಾರಂಭ. ಸಂಕಷ್ಟಗಳ ಸರಮಾಲೆಯಲ್ಲಿ ಬದುಕು ಕಟ್ಟಿದ ಕಣಿವೆ ಹಳ್ಳಿಗರು ಮುಳುಗಡೆಯ ಭಯದಿಂದ ಸಂಘಟಿತರಾದರು. ಸ್ವರ್ನವಲ್ಲಿ ಶ್ರೀ ಸರ್ವಜ್ಞೆàಂದ್ರ ಸರಸ್ವತಿ ಸ್ವಾಮಿಗಳು, ಶಾಸಕಿ ಅನುಸೂಯಾ ಶರ್ಮಾ ನೇತ್ರತ್ವದಲ್ಲಿ ಪರಿಸರ ಹೋರಾಟಕ್ಕೆ ಕಾಡಿನೂರು ಎದ್ದು ನಿಂತಿತು.
ಬೃಹತ್ ಜಲ ವಿದ್ಯುತ್ ಯೋಜನೆ ಕುರಿತು ಜನಜಾಗೃತಿ ಮೂಡಿಸುವ ಮೂಲಕ ದೇಶದ ಗಮನ ಸೆಳೆದ ಕ್ಷಣವದು. ಕ್ರಿ,ಶ 1981ರಲ್ಲಿ 60ಕ್ಕೂ ಹೆಚ್ಚು ಪ್ರಖ್ಯಾತ ವಿಜಾnನಿಗಳ ಸಭೆ ಸೇರಿಸಿ ಜಲ ವಿದ್ಯುತ್ ಯೋಜನೆಯ ಕಾಡು ಕಡಿತಕ್ಕೆ ಪ್ರಬಲ ವಿರೋಧ ನಡೆದಿದೆ. ಅಲ್ಲಿಂದ ನಮ್ಮ ದೇಶದಲ್ಲಿ ಅಮೂಲ್ಯ ಕಾಡು ಮುಳುಗಿಸಿ ಯೋಜನೆ ರೂಪಿಸುವ ಸರಕಾರೀ ನಡೆಯನ್ನು ಪ್ರಶ್ನಿಸುವ ಹೋರಾಟಗಳು ಶುರುವಾಗಿವೆ. ಕರ್ನಾಟಕ ಪರಿಸರ ಚಳುವಳಿ ಇತಿಹಾಸದಲ್ಲಿ ಕ್ರಿ,ಶ 1832ರಲ್ಲಿ ಬ್ರಿಟೀಷರ ಅರಣ್ಯ ನೀತಿ ವಿರೋಧಿಸಿದ ಯಲ್ಲಾಪುರದ ರೈತ ಕೂಟದ ಸಭೆ ಮುಖ್ಯವಾದುದು.
ಸ್ವಾತಂತ್ರ್ಯ ಚಳವಳಿಯ ಘಟ್ಟದಲ್ಲಿ ಕಂಡ ಜಂಗಲ್ ಕಾಯ್ದೆ ಭಂಗ, ಜಂಗಲ್ ಮಹಲ್, ಮುಡೆಬಳ್ಳಿ ಉಳಿಸಿ ಹೋರಾಟಗಳು 1905-1945ರ ಕಾಲಘಟ್ಟದಲ್ಲಿ ನಡೆದಿವೆ. ಜಲ ವಿದ್ಯುತ್ ಯೋಜನೆ ವಿರುದ್ಧ 1991ರಲ್ಲಿ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ನೇತ್ರತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ 30,000ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಪರಿಸರ ಹೋರಾಟ ಚರಿತ್ರೆಯಲ್ಲಿಯೇ ವಿಶೇಷ ದಾಖಲೆ. ಕೌತುಕದ ಸಂಗತಿಯೆಂದರೆ ಬಹುತೇಕ ಚಳವಳಿಗಳು ಬೇಡ್ತಿ ನದಿ ಕಣಿವೆಯಲ್ಲಿ ಜನಿಸಿವೆ. ಇಂದಿಗೂ ರಾಜ್ಯದ ಪರಿಸರ, ಕೃಷಿ , ನೆಲ ಜಲ ಸಂರಕ್ಷಣೆಗಳ ಪ್ರಮುಖ ಚರ್ಚೆಗಳು ಇಲ್ಲಿಂದಲೇ ಶುರುವಾಗುತ್ತವೆ.
ಪರಿಸರ ಜಾಗೃತಿ, ನದಿ ಸಂರಕ್ಷಣೆಯ ಪ್ರಜ್ಞೆ ಎಲ್ಲೆಡೆಗಿಂತ ಮುಖ್ಯವಾಗಿ ಬೇಡ್ತಿಯಲ್ಲಿ ನಡೆಯಲು ಪರಂಪರೆ ಕಲಿಸಿದ ಹೋರಾಟದ ಬದುಕು ಮುಖ್ಯವಾಗಿದೆ. ಜನಜೀವನಕ್ಕೆ ಶತ ಶತಮಾನಗಳಿಂದ ಜೈನ, ಮಾಧ್ವ, ವೀರಶೈವ, ಹವ್ಯಕ ಶಕ್ತಿ ಪೀಠಗಳ ಮಾರ್ಗದರ್ಶನವಿದೆ. ಸುಧಾಪುರದೊಳ್ ಭಟ್ಟಾಕಳಂಕ ಸ್ವಾಮಿಗಳ್ ಶಾಸ್ತ್ರಗಳೆಲ್ಲವಂಕಲ್ತು ಮಹಾ ವಿದ್ವಾಂಸರೆನಿಸಿ ಷಡಾºಷಾ ಕವಿಗಳಾಗಿ ಕರ್ನಾಟಕ ವ್ಯಾಕರಣಮಮ್ ರಚಿಸಿ ಕೀರ್ತಿಯಂ ಪಡೆದರ್ ಎಂಬುದು ನಾಡು ನುಡಿಗೆ ನದಿ ನಾಡಿನ ಬೆಳಕಾಗಿದೆ. ಬೆಳವಡಿಯ ಮಲ್ಲಮ್ಮ ಶಸ್ತ್ರವಿದ್ಯೆ ಕಲಿತು ವೀರ ವನಿತೆಯಾದ ಚಾರಿತ್ರಿಕ ನೆಲೆಯಿದು.
ಮಣ್ಣಿನ ಗುಣ ಹೀಗಿರುವುದರಿಂದಲೇ ನದಿ ಕಣಿವೆಯ ಹೋರಾಟ ಶಕ್ತಿಯುತವಾಗಿದೆ. ಹಿಮಾಲಯದ ತಪ್ಪಲಲ್ಲಿ ಶುರುವಾದ ಚಿಪೋ›ಚಳವಳಿ ಅಪ್ಪಿಕೋ, ಚಳವಳಿಯಾಗಿ ಜನಿಸಿದ್ದು ಇಲ್ಲಿಯೇ ! ಸುಂದರಲಾಲ್ ಬಹುಗುಣ, ಡಾ.ಮಾಧವ ಗಾಡ್ಗಿàಳ್, ಡಾ.ಶಿವರಾಮ ಕಾರಂತ ಹೀಗೆ ನಾಡಿನ ಜನಮನದಲ್ಲಿ ಪರಿಸರ ಪ್ರಜ್ಞೆಯ ಬೀಜ ಬಿತ್ತಿದ ತಜ್ಞರೆಲ್ಲ ಬೇಡ್ತಿ ನದಿ ಕಣಿವೆಯ ಗೆಳೆಯರು. ಕ್ರಿ,ಶ 1911ರಲ್ಲಿ ನದಿಯಂಚಿನ ಕಾಡು ಸಂರಕ್ಷಣೆಗೆ ನಿಯಮ ರೂಪಿಸಿದ ಕಾರ್ಯ ಯೋಜನೆಗಳಿಂದ ಶುರುವಾಗಿ ಶಾಲ್ಮಲಾ ನದಿ ಕಣಿವೆಯ ಸಂರಕ್ಷಿತ ವಲಯ ಗುರುತಿಸುವರೆಗೆ ಸಾಗಿ ಬಂದ ಚರ್ಚೆ,
ಚಳವಳಿ, ಆಂದೋಲನ, ಪ್ರತಿಭಟನೆ, ಅಧ್ಯಯನ, ದಾಖಲಾತಿಗಳಿಗೆ ಲೆಕ್ಕವಿಲ್ಲ. ವಿಶ್ರಾಂತಿಗೆ ಬಿಡುವಿಲ್ಲ, ಈಗಲೂ ಹೋರಾಟಗಳು ಸಾಗಿವೆ. ಅರಣ್ಯ, ನೀರು ಕುರಿತ ಪರಿಸರ ಸಾಕ್ಷರತೆಯಲ್ಲಿ ಇಡೀ ರಾಜ್ಯವೇ ಗಮನಿಸಬೇಕಾದ ಪಾಠಗಳು ಇಲ್ಲಿವೆ. ಇಷ್ಟಾಗಿಯೂ ಮಳೆ ಕೊರತೆ, ಅರಣ್ಯ ನಾಶದ ಪ್ರಹಾರಕ್ಕೆ ನೀರ ನೆಲೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಹುಬ್ಬಳ್ಳಿಯ ಮಹಾನಗರದ ಹೊಲಸು ನೀರು ನದಿಗುಂಟ ಹರಿದು ಬಂದು ಜೀವಜಲದ ಮನುಕುಲದ ಕಾಳಜಿಗೆ ಸಾಕ್ಷಿಯಾಗಿದೆ.
ಕೊಳಚೆ ನೀರನ್ನು ಪುನಃ ಶುದ್ಧೀಕರಿಸಿ ಯಲ್ಲಾಪುರ ನಗರಕ್ಕೆ ಒಯ್ಯುವ ಸರಕಾರೀ ಯಂತ್ರದ ಮೂರ್ಖ ಪ್ರಯೋಗಗಳು ಕೋಟಿ ಕೋಟಿ ಹಣವನ್ನು ಹೊಳೆಗೆಸೆದು ಸೋತಿವೆ. ಬಿದಿರಕ್ಕಿ, ಬಾಳೆಕಾಯಿ, ಹಲಸು, ಗೆಣಸು ತಿನ್ನುತ್ತ ಕಷ್ಟದ ಕಣಿವೆಯಲ್ಲಿ ಕೃಷಿ ಬೆಳೆಸಿದ ಹಳೆಯ ತಲೆಮಾರು ಈಗ ಯುವಕರ ನಗರ ವಲಸೆಯ ಪ್ರಹಾರಕ್ಕೆ ಸೊರಗಿದೆ, ನೀರು ನಂಬಿ ಊರು ಕಟ್ಟುವ ಪ್ರಶ್ನೆಗಳು ಜನಿಸಿವೆ. ಒಂದು ಮರ ಕಡಿದರೂ ಸುದ್ದಿಯಾಗುವ ಜಾಗೃತ ನೆಲೆಯಲ್ಲಿ ಬೇರಿಳಿಸಿ ಬದುಕಿದವರಲ್ಲಿ ಹೊಸ ಹೊಸ ಸಂಕಟಗಳು ಕಾಡುತ್ತಿದೆ.
* ಶಿವಾನಂದ ಕಳವೆ