ಹೊನ್ನಾವರ: ಹಿಂದೂಸ್ಥಾನಿ ಸಂಗೀತದ ಪ್ರಚಾರ, ಪ್ರೋತ್ಸಾಹ, ಪೋಷಣೆಯ ಉದ್ದೇಶದಿಂದ ಆರಂಭಗೊಂಡ ಸಪ್ತಕ ಸಂಸ್ಥೆ ಒಂದು ದಶಕದಲ್ಲಿ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರ ಕಾರ್ಯಕ್ರಮವನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಉಚಿತವಾಗಿ ನೀಡಿದೆ.
ಕಲಾವಿದರಿಗೆ, ಕಲಾವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಶಿಷ್ಯವೇತನ, ಉಚಿತ ಸಂಗೀತೋಪಕರಣ ವಿತರಣೆ ಮೊದಲಾದ ಚಟುವಟಿಕೆ ನಡೆಸುತ್ತಾ ಬಂದ ಸಪ್ತಕದ ರೂವಾರಿಗಳಾದ ಜಿ.ಎಸ್. ಹೆಗಡೆ ಅಲ್ಪ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಿದ ನಂತರ ಸೀಮೋಲ್ಲಂಘನ ಮಾಡಿದ್ದು, ಮುಂಬೈಯಲ್ಲಿ ಸೆ. 9ರಂದು ಕಾರ್ಯಕ್ರಮ ಆಯೋಜಿಸಲಾಗಿದೆ.
ಸಪ್ತಸ್ವರ ಸಂಗೀತ ಸಭಾ ಶಿವಮೊಗ್ಗ ಅರ್ಪಿಸುವ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಸೆ. 30ರಂದು 6ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಜಿ.ಎಸ್. ಹೆಗಡೆ ಹಾಗೂ ಗೀತಾ ಹೆಗಡೆ ದಂಪತಿಯನ್ನು ಶಾಸಕ ಕೆ.ಎಸ್. ಈಶ್ವರಪ್ಪ ಸನ್ಮಾನಿಸುವರು. ಧನಂಜಯ ಹೆಗಡೆ ಇವರ ಗಾಯನಕ್ಕೆ ರೇಖಾ ಅರುಣ ಹಂಪಿಹೊಳಿ ಹಾರ್ಮೋನಿಯಂ, ಶ್ರೀಧರ ಮಾಂಡ್ರೆ ಸಾಥ್ ನೀಡುವರು.
ಸಪ್ತಕ ಬೆಂಗಳೂರು ಮತ್ತು ಮ್ಯೂಸಿಕ್ ಕ್ಲಬ್ ಇವರ ಸ್ವರಧಾರಾ ಕಾರ್ಯಕ್ರಮ ಸೆ. 9ರಂದು 5ಕ್ಕೆ ವ್ಯಾಲಿ ಆಫ್ ಫ್ಲವರ್ಸ್ ಕ್ಲಬ್, ಕಾಂಡಿವಿಲಿ ಪೂರ್ವ ಮುಂಬೈಯಲ್ಲಿ ನಡೆಯಲಿದ್ದು, ಪಂ| ಶಶಿಕಾಂತ ಮೂಳೆ ಹಾಗೂ ಪಂ| ಓಂಕಾರ ಗುಲ್ವಾಡಿ ಇವರಿಂದ ಶ್ರೋತೃಗಳೊಂದಿಗೆ ಸಂವಾದ, ಪೂರ್ಣಿಮಾ ಕುಲಕರ್ಣಿ ಗಾಯನಕ್ಕೆ ಪಂ| ಓಂಕಾರ ಗುಲ್ವಾಡಿ ತಬಲಾ ಹಾಗೂ ಹಷಲ್ ಕಡತರೆ ಹಾರ್ಮೋನಿಯಂ ಸಾಥ್ ನೀಡುವರು.
ಸಪ್ತಕ ಬೆಂಗಳೂರು ಅರ್ಪಿಸುವ ಸ್ವರಧಾರಾ ಸಂಗೀತ ಕಾರ್ಯಕ್ರಮ ಅ. 6ರಂದು ಸಂಜೆ 5:30ಕ್ಕೆ ಶ್ರೀ ವಿದ್ಯಾಧಿರಾಜ ಕಲಾಕ್ಷೇತ್ರ ಶಿರಸಿಯಲ್ಲಿ ಮತ್ತು ಅ. 7ರಂದು 5:30ಕ್ಕೆ ಲೋಕಮಾನ್ಯ ರಂಗಮಂದಿರ ಕೋನವಾಳ ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮನು ಶ್ರೀವಾಸ್ತವ್ ಗಾಯನಕ್ಕೆ ಪಂ| ಭರತ ಕಾಮತ ತಬಲಾ, ಗುರುಪ್ರಸಾದ ಹೆಗಡೆ ಮತ್ತು ಡಾ| ಸುಧಾಂಶು ಕುಲಕರ್ಣಿ ಹಾರ್ಮೋನಿಯಂ ಸಾಥ್ ನೀಡಲಿದ್ದು, ಪಂ| ಯೋಗೇಶ ಸಂಶಿ ತಬಲಾ ಸೋಲೋಗೆ ಗುರುಪ್ರಸಾದ ಗಾಂಧಿ ಲೆಹರಾ ಸಾಥ್ ನೀಡಲಿದ್ದಾರೆ.
ಕರ್ನಾಟಕ ಬ್ಯಾಂಕ್ ಉದ್ಯೋಗದಿಂದ ನಿವೃತ್ತರಾದ ಮೇಲೆ ಪೂರ್ಣಾವಧಿ ಸಂಗೀತ ಸಂಘಟಕರಾಗಿ ದುಡಿಯುತ್ತಿರುವ ಜಿ.ಎಸ್. ಹೆಗಡೆ ಅವರಿಗೆ ಅವರ ಪತ್ನಿ ಗೀತಾ ಹಿಂದೂಸ್ಥಾನಿ ಹಾಡುಗಾರ್ತಿ ಸಾಥ್ ನೀಡುತ್ತಿದ್ದಾರೆ. ಮಗ ಧನಂಜಯ ಬ್ಯಾಂಕ್ ಉದ್ಯೋಗ ಬಿಟ್ಟು ಪೂರ್ಣಾವಧಿ ಸಂಗೀತಗಾರರಾಗಿ ಖ್ಯಾತಿ ಗಳಿಸಿದ್ದಾರೆ. ತಮ್ಮ ಮನೆ ಮಹಡಿಯನ್ನು ಪುಟ್ಟ ಸಭಾಗೃಹವನ್ನಾಗಿ ಪರಿವರ್ತಿಸಿಕೊಂಡಿರುವ ಜಿ.ಎಸ್. ಹೆಗಡೆ ಕುಟುಂಬ ಹಿಂದೂಸ್ಥಾನಿ ಸಂಗೀತ ಸೇವೆಗೆ ಸಮರ್ಪಿತವಾಗಿದೆ. ಭೇದ ಎಣಿಸದೆ ನಾಡಿನ ಎಲ್ಲ ಕಲಾವಿದರಿಗೆ ಅವಕಾಶ ಕಲ್ಪಿಸುತ್ತಿರುವ ಇವರು ಮೂಲತಃ ಹೊನ್ನಾವರದ ಗುಣವಂತೆಯವರು.