Advertisement

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡಿ

10:12 AM Jul 01, 2019 | Team Udayavani |

ಗಜೇಂದ್ರಗಡ: ಪದವಿ ವಿದ್ಯಾರ್ಹತೆ ಹಾಗೂ ಸೇವಾ ಅನುಭವ ಇರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಸದಸ್ಯರು ಶಾಸಕ ಕಳಕಪ್ಪ ಬಂಡಿ ಅವರಿಗೆ ರವಿವಾರ ಮನವಿ ಸಲ್ಲಿಸಿದರು.

Advertisement

6ರಿಂದ 8ನೇ ತರಗತಿಗೆ ಬೋಧನೆ ಮಾಡುವ ಅರ್ಹತೆ ಇರುವ 82 ಸಾವಿರ ಜನ ಶಿಕ್ಷಕರು ರಾಜ್ಯದಲ್ಲಿದ್ದಾರೆ. ಇವರಿಗೆ ಬಡ್ತಿ ನೀಡುವ ಬದಲು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಕಳೆದ 14 ವರ್ಷ ಸೇವೆ ಸಲ್ಲಿಸಿರುವ ಅನುಭವಿ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಅನುಭವ ಹಾಗೂ ಅರ್ಹತೆ ಇರುವವರು ಅವಕಾಶ ವಂಚಿತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ನಾಗರಿಕ ಸೇವಾ (ಕೆಸಿಎಸ್‌ಆರ್‌) ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಪದವೀಧರ ಪ್ರಾಥಮಿಕ ಶಾಲಾ ಅರ್ಹ ಶಿಕ್ಷಕರಿಗೆ ಬಡ್ತಿ ನೀಡದೆ ಶಿಕ್ಷಣ ಇಲಾಖೆ ಅನ್ಯಾಯ ಎಸಗುತ್ತಿದೆ. ಹೊಸ ನೇಮಕಾತಿ ಆರಂಭಿಸಿದ ನಂತರ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲಾಗಿದೆ. ಆದರೂ ಯಾರೊಬ್ಬರೂ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಈ ಹಿಂದೆ ಇಲಾಖೆಯ ಮುಖ್ಯಸ್ಥರು ಮತ್ತು ಸಚಿವರಿಗೂ ಮನವಿ ಮಾಡಲಾಗಿದೆ. ಆದರೂ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ಶಿಕ್ಷಕರಿಗೆ ನ್ಯಾಯ ನೀಡಬೇಕು. ನಮ್ಮ ನ್ಯಾಯಯುತ ಹೋರಾಟಕ್ಕೆ ಶಾಸಕರು ಕೈಜೋಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಟ್ಟಣದ ತಮ್ಮ ನಿವಾಸದಲ್ಲಿ ಶಾಸಕ ಕಳಕಪ್ಪ ಬಂಡಿ ಮನವಿ ಸ್ವೀಕರಿಸಿ ಮಾತನಾಡಿ, ಶಿಕ್ಷಕರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದು. ಜೊತೆಗೆ ಶಿಕ್ಷಕರ ಬಡ್ತಿ ನೀಡುವ ಕುರಿತು ಜುಲೈ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಸಮಸ್ಯೆ ಬಗೆಹರಿಸಲು ಸಚಿವರಿಗೆ ಆಗ್ರಹ ಮಾಡಲಾಗುವುದು ಎಂದು ಭರವಸೆ ನೀಡಿದರು. ಆರ್‌.ಕೆ. ಕವಡಿಮಟ್ಟಿ, ಬಿ.ಸಿ. ಅಂಗಡಿ, ಐ.ಎ. ರೇವಡಿ, ಪಿ.ಪಿ. ಅಂಬೋರೆ, ಬಿ.ಎಂ. ಹಿರೇಮಠ, ಎಸ್‌.ಎಸ್‌. ಪಟ್ಟೇದ, ಎಸ್‌.ಎಸ್‌. ಶಿವಶಿಂಪಗೇರಿ, ಎಸ್‌.ಬಿ. ಜೂಲಗುಡ್ಡ, ಆರ್‌.ಕೆ. ನೆಲ್ಲೂರ, ಎಸ್‌.ಆರ್‌. ನೀಲೂರ, ಎಂ.ಎಫ್‌. ಬುಟ್ಟಾರ, ಪಿ.ಎನ್‌. ಗಂಜಿ, ಟಿ.ಜಿ. ಮುದಗಲ್ಲ, ಆರ್‌.ಜಿ. ಮ್ಯಾಕಲ್ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next