Advertisement

Archana Kottige ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು

04:58 PM Aug 11, 2023 | Team Udayavani |

ಅರ್ಚನಾ ಕೊಟ್ಟಿಗೆ ಹೀಗಂದರೆ ಯಾರಂತ ನಿಮಗೆ ನೆನಪಾಗದೇ ಇರಬಹುದು. ಆದರೆ, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಸ್ಕೂಲ್ ಪುಟ್ಟಿ ಅಥವಾ ಚಿನ್ನಿ ಎಂದಾಕ್ಷಣ ನಿಮ್ಮೆಲ್ಲರಿಗೂ ಆಕೆ ನೆನಪಾಗ್ತಾರೆ. ನಿಮ್ಮ ಕಣ್ಣಮುಂದೆ ಬಂದು ನಿಲ್ತಾರೆ. ಹೌದು, ಆಕೆನೇ ಅರ್ಚನಾ ಕೊಟ್ಟಿಗೆ. ಸ್ಯಾಂಡಲ್‍ವುಡ್ ಅಂಗಳದಲ್ಲಿ ಭರವಸೆ ಮೂಡಿಸಿರುವ ನಟಿ.

Advertisement

ಸಿನಿಮಾ ಕುಟುಂಬದ ಹಿನ್ನಲೆಯಿಲ್ಲದೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಸ್ವಂತ ಪ್ರತಿಭೆಯಿಂದಲೇ ಗುರ್ತಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಬಂದು ಅತೀ ಕಡಿಮೆ ಸಮಯದಲ್ಲಿ ಸರಿಸುಮಾರು 18 ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಅದರಲ್ಲಿ ಹತ್ತಾರು ಸಿನಿಮಾಗಳು ಈಗಾಗಲೇ ಬಿಡುಗಡೆಗೊಂಡಿದ್ದು, ನಾಯಕಿಯಾಗಿ ನಟಿ ಅರ್ಚನಾ ಬೆಳ್ಳಿಭೂಮಿ ಮೇಲೆ ಮೆರವಣಿಗೆ ಹೋಗಿ ಬಂದಿದ್ದಾರೆ. ಇತ್ತೀಚೆಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಿಂದ ಸ್ಕೂಲ್ ಪುಟ್ಟಿಯಾಗಿ, ಚಿನ್ನಿಯಾಗಿ ಗುರ್ತಿಸಿಕೊಂಡಿದ್ದಾರೆ. ವಿಶೇಷ ಅಂದರೆ ಈ ಸಿನಿಮಾದಿಂದ ಪಡ್ಡೆಹುಡುಗರ ಪ್ರೀತಿ ಜೊತೆಗೆ ಕೊಂಚ ಖ್ಯಾತಿನೂ ಸಿಕ್ಕಿದೆ. ಹೀಗಾಗಿ ನಟಿ ಅರ್ಚನಾ ಫುಲ್ ಖುಷಿಯಲ್ಲಿದ್ದಾರೆ. ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳ ಬಿಡುಗಡೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ನಟಿ ಅರ್ಚನಾ 2018ರಲ್ಲಿ ಚಂದನವನಕ್ಕೆ ಬಲಗಾಲಿಟ್ಟು ಬಂದರು. `ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರು. `ಅರಣ್ಯಕಾಂಡ’ ಹೆಸರಿನ ಸಿನಿಮಾದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯಗೊಂಡರು. ಅನಂತರ ಈಕೆ ಹಿಂತಿರುಗಿ ನೋಡಿದ್ದೇ ಇಲ್ಲ. ಬೇರೆಯವರ ಥರ ಒಂದೋ, ಎರಡೋ ಚಿತ್ರಕ್ಕೆ ಸ್ಟಾರ್ ಹೀರೋಯಿನ್ ಆಗುವಂತಹ ಚಾನ್ಸ್ ಸಿಗದೇ ಇರಬಹುದು ಆದರೆ ಭರಪೂರ ಅವಕಾಶಗಳಂತೂ ಈಕೆಯನ್ನೂ ಅರಸಿಕೊಂಡು ಬಂದಿವೆ. ಯೆಲ್ಲೋ ಗ್ಯಾಂಗ್ಸ್, ಮೇಡ್ ಇನ್ ಬೆಂಗಳೂರು, ಡಿಯರ್ ಸತ್ಯ, ಕಟ್ಟಿಂಗ್ ಶಾಪ್, ಹೊಂದಿಸಿ ಬರೆಯಿರಿ, ವಿಜಯಾನಂದ, ತ್ರಿಬಲ್ ರೈಡಿಂಗ್, ಸೇರಿದಂತೆ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಮಿಂಚು ಹರಿಸುವ ಚಾನ್ಸ್ ದಕ್ಕಿದೆ.

ಅಷ್ಟಕ್ಕೂ, ನಾನು ನಾಯಕಿಯಾಗಬೇಕು, ಬೆಳ್ಳಿತೆರೆ ಮೇಲೆ ಮಿಂಚಬೇಕು ಇದ್ಯಾವ ಕನಸು ಅರ್ಚನಾಗಿರಲಿಲ್ಲವಂತೆ. ಬಿಕಾಂ ಮುಗಿದ್ಮೇಲೆ ಸಿಎ ಮಾಡ್ಕೊಂಡು ಚಾರ್ಟೆಂಡ್ ಅಕೌಂಟೆಂಟ್ ಆಗಬೇಕೆಂದುಕೊಂಡಿದ್ದರು. ಆದರೆ, ಈ `ಮೈಸೂರ್ ಪಾಕ್’ ನಟಿ ಅರ್ಚನಾ ಲೈಫ್‍ನ ಬದಲಾಯಿಸಿಬಿಡ್ತಂತೆ. ಇದೇನಿದು ಮೈಸೂರು ಪಾಕ್ ಕಥೆ ಅಂತೀರಾ? ಸ್ಕೂಲ್ ಪುಟ್ಟಿ ಬಿಚ್ಚಿಟ್ಟ ಸ್ಟೋರಿನಾ ನಿಮ್ಮ ಮುಂದೆ ಬಿಚ್ಚಿಡ್ತೀವಿ ನೋಡಿ. ನಟಿ ಅರ್ಚನಾ ಆಗಿನ್ನೂ ಪಿಯುಸಿ ಓದುತ್ತಿದ್ದರು. ಯೂನಿಫಾರ್ಮ್ ತೊಟ್ಟು ಎಂದಿನಂತೆ ಕಾಲೇಜ್‍ಗೆ ಹೋಗಿದ್ದರು. ಬ್ರೇಕ್ ಸಮಯದಲ್ಲಿ ಸ್ನೇಹಿತರಿಂದ ಒಂದು ಕರೆ ಬರುತ್ತೆ. ಈ ಮಯ್ಯಾಸ್‍ನವರು `ಮೈಸೂರ್ ಪಾಕ್’ ಆ್ಯಡ್ ಶೂಟ್ ಮಾಡ್ತಿದ್ದಾರೆ. ಅವರಿಗೆ ಹೋಮ್ಲಿ ಲುಕ್ ಇರುವ ಒಂದು ಹುಡುಗಿ ಬೇಕಂತೆ. ನೀನು ಹೇಗೂ ನೋಡೋದಕ್ಕೆ ಪಕ್ಕದ್ಮನೆ ಹುಡುಗಿ ಥರಾನೇ ಇದ್ದೀಯಾ. ಆ್ಯಕ್ಟ್ ಮಾಡಿದರೆ ಚೆನ್ನಾಗಿರುತ್ತೆ, ಕೈಗೊಂದಿಷ್ಟು ದುಡ್ಡು ಸಿಗುತ್ತೆ ಅಂತ ಹೇಳ್ತಾರೆ. ಜಾಹೀರಾತೊಂದ್ರಲ್ಲಿ ನಟಿಸೋಕೆ ಚಾನ್ಸ್ ಸಿಗ್ತು ಎನ್ನೋದಕ್ಕಿಂತ ಅವರು ಕೊಡುವ ದುಡ್ಡು ಪಾಕೆಟ್ ಮನಿಗಾಗುತ್ತೆ ಅಂತ ಅರ್ಚನಾ ಹೈ ಸ್ಪೀಡ್‍ನಲ್ಲಿ ಶೂಟಿಂಗ್ ಸ್ಪಾಟ್‍ಗೆ ಹೋಗಿ `ಮಯ್ಯಾಸ್ ಮೈಸೂರ್ ಪಾಕ್’ ಆ್ಯಡ್‍ಗೆ ಬಣ್ಣ ಹಚ್ಚಿದ್ದರು. ಅಲ್ಲಿಂದ ಶುರುವಾಯ್ತು ನೋಡಿ ಬಣ್ಣದ ನಂಟು.

Advertisement

ಅಂದಹಾಗೆ, ಕಳೆದ ಐದು ವರ್ಷಗಳಿಂದ ನಟಿ ಅರ್ಚನಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಒಂದಾದ್ಮೇಲೊಂದರಂತೆ ಸಿನಿಮಾಗಳನ್ನೂ ಮಾಡ್ತಿದ್ದಾರೆ. ಆದರೆ, ನಿರೀಕ್ಷಿತ ಮಟ್ಟದ ನೇಮು, ಫೇಮು ಮಾತ್ರ ಸಿಕ್ಕಿಲ್ಲ. ಡಿಮ್ಯಾಂಡಿಂಗ್ ನಟಿಯಾಗಿ ಮಿಂಚುವ ಅದೃಷ್ಟ ಈಕೆಗಿನ್ನೂ ಒದಗಿಬಂದಿಲ್ಲ. ಅದಕ್ಕೇನು ಬೇಜಾರಿಲ್ಲ ಎನ್ನುವ ಈ ನಟಿ, ಹೊಂದಿಸಿ ಬರೆಯಿರಿ ಸಿನಿಮಾ ನೋಡಿವರು ನನ್ನ `ಸೀನಿಯರ್ ಬಾನು’ ಪಾತ್ರದಿಂದ ಗುರ್ತಿಸ್ತಾರೆ. `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರ ನೋಡಿದವರು ಸ್ಕೂಲ್ ಪುಟ್ಟಿ, ಚಿನ್ನಿ ಅಂತ ಕೂಗ್ತಾರೆ ಸದ್ಯಕ್ಕೆ ಇಷ್ಟು ಸಾಕು ಅಂತಾರೇ. ಅಷ್ಟಕ್ಕೂ, ನಂಗೆ ಸ್ಟಾರ್ ಹೀರೋಯಿನ್ ಪಟ್ಟಕ್ಕೇರಿ ಕುಳಿತುಕೊಳ್ಳಬೇಕೆನ್ನುವ ಆಸೆಯೇನೂ ಇಲ್ಲ. ಜನ ನನ್ನನ್ನ ಅದ್ಭುತ ನಟಿ ಅಂತ ಒಪ್ಪಿಕೊಂಡರೆ ಅಷ್ಟೇ ಸಾಕೆನ್ನುವ ಅರ್ಚನಾ ಕೊಟ್ಟಿಗೆ ಬಹುಭಾಷಾ ನಟಿ ಊರ್ವಶಿಯಂತೆ ಅಭಿನಯಿಸೋದನ್ನ ಕಲಿಬೇಕು. `ರಾಮ ಶ್ಯಾಮ ಭಾಮ’ ದಲ್ಲಿ ಊರ್ವಶಿಯವರಿಗೆ ಸಿಕ್ಕಂತಹ ಪಾತ್ರ ನಂಗೂ ಸಿಗಬೇಕು. ಆ ತರಹ ಕ್ಯಾರೆಕ್ಟರ್ ಯಾರಾದ್ರೂ ಡೈರೆಕ್ಟರ್ ನನಗಾಗಿ ಸೃಷ್ಟಿ ಮಾಡಿದರೆ ಕಣ್ಣಿಗೆ ಹೊತ್ಕೊಂಡು ಆ್ಯಕ್ಟ್ ಮಾಡ್ತೀನಿ ಅಂತಾರೆ.

ಸದ್ಯಕ್ಕೆ ಅರ್ಚನಾ ಕೈಲಿ ಶೂಟಿಂಗ್ ಹಂತದಲ್ಲಿರೋದು ಒಂದೇ ಸಿನಿಮಾ. ಆದರೆ, ರಿಲೀಸ್ ಆಗ್ಬೇಕಾಗಿರೋದು ಹತ್ತಕ್ಕೂ ಹೆಚ್ಚು ಸಿನಿಮಾಗಳಿವೆ. 2019ರಿಂದ 2022 ರವೆಗೆ ಚಿತ್ರೀಕರಣಗೊಂಡ ಬಹುತೇಕ ಚಿತ್ರಗಳು ಈಗ ಬಿಡುಗಡೆ ಹಂತದಲ್ಲಿವೆ. ಅದರಲ್ಲಿ, ಪ್ರಮುಖವಾಗಿ ಎಲ್ಲರ ಕಾಲೆಳೆಯುತ್ತೆ ಕಾಲ, ಬಯಲು ಸೀಮೆ, ಜುಗಲ್‍ಬಂಧಿ, ಶೇಷ ಸಿನಿಮಾಗಳು ಬೆಳ್ಳಿತೆರೆಗೆ ಲಗ್ಗೆ ಇಡಲು ರೆಡಿಯಾಗಿವೆ. ‘ಹಣೆಬರಹ ಬದಲಾಗೋಕೆ ಒಂದು ಸಿನಿಮಾ, ಒಂದು ಪಾತ್ರ, ಒಂದು ಫ್ರೈಡೇ ಸಾಕು. ಹೀಗಾಗಿ, ನಾನು ಕುತೂಹಲದಿಂದ ಕಾಯ್ತಿದ್ದೇನೆ. ರಿಷಬ್, ರಕ್ಷಿತ್, ರೋಹಿತ್, ಹೇಮಂತ್ ರಾವ್, ರಾಜ್ ಬಿ ಶೆಟ್ಟಿಯವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸೋಕೆ ಎದುರುನೋಡ್ತಿದ್ದೇನೆ’ ಎಂದು ಹೇಳಿಕೊಳ್ತಾರೆ. ಪ್ರತಿಭಾವಂತ ನಟಿಮಣಿಯರಿಗೆ ಶೆಟ್ರ ಗ್ಯಾಂಗ್‍ನಲ್ಲಿ ಅವಕಾಶಗಳು ಸಿಕ್ಕಿವೆ. ಸೋ ಕನ್ನಡತಿ ಅರ್ಚನಾಗೂ ಕರಾವಳಿ ಬಳಗದಲ್ಲಿ ಅವಕಾಶ ಸಿಗುತ್ತಾ? ಕಾದುನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next