ಚಿಂಚೋಳಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪುತ್ತಿದ್ದು, ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಬಡ್ಡಿ ರಹಿತ ಸಾಲ ಕೊಡಿಸುವ ಮೂಲಕ ಸೇಡಂ ಶಾಸಕ ರಾಜಕುಮಾರ ಪಾಟೀಲ ರೈತರ ಕಾಳಜಿ ವಹಿಸುತ್ತಿದ್ದಾರೆ ಎಂದು ಸಂತೋಷಿರಾಣಿ ಪಾಟೀಲ ತೇಲ್ಕೂರ ಹೇಳಿದರು.
ತಾಲೂಕಿನ ಗಣಾಪುರ, ಭಕ್ತಂಪಳ್ಳಿ, ಗರಗಪಳ್ಳಿ ಗ್ರಾಮಗಳಲ್ಲಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸೇಡಂ ಶಾಸಕರ ಪರಿಶ್ರಮದಿಂದ ಕಾಗಿಣಾ ನದಿಯಿಂದ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಲು ಬಿಜೆಪಿ ಸರ್ಕಾರ ಐತಿಹಾಸಿಕವಾಗಿ 639ಕೋಟಿ ರೂ. ಅನುದಾನ ಮಂಜೂರಿಗೊಳಿಸಿದೆ. ಕಾಂಗ್ರೆಸ್ ಪಕ್ಷದಿಂದ 15 ವರ್ಷ ಶಾಸಕರಾಗಿದ್ದವರು ಕೇವಲ ಕೇವಲ ಕುತಂತ್ರ ರಾಜಕಾರಣ ಮತ್ತು ಹಣದ ಬಲ ಪ್ರದರ್ಶಿಸುತ್ತಿದ್ದರು. ಅಭಿವೃದ್ಧಿಯೇ ಆಗಿರಲಿಲ್ಲ ಎಂದರು.
ಸೇಡಂ ತಾಲೂಕಿನ ಗ್ರಾಮಗಳಲ್ಲಿ ಮೂಲ ಸೌಕರ್ಯಗಳಿಗಾಗಿ ಗ್ರಾಪಂಗಳಿಗೆ 2ಕೋಟಿ ರೂ. ಅನುದಾನ ನೀಡಲು ಶಾಸಕರು ನಿರ್ಧರಿಸಿದ್ದಾರೆ. ಡಿಸಿಸಿ ಬ್ಯಾಂಕ್‌ನಿಂದ ಮಹಿಳೆಯರಿಗೋಸ್ಕರ ಹೈನುಗಾರಿಕೆ, ಕೋಳಿಸಾಕಾಣಿಕೆ, ಸ್ವಯಂ ಉದ್ಯೋಗಕ್ಕಾಗಿ ಸಾಲ ಕೊಡಲಾಗುತ್ತಿದೆ ಎಂದು ಹೇಳಿದರು.
ಕರ್ಚಖೇಡ ಮತ್ತು ಗರಗಪಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗರಗಪಳ್ಳಿ, ಕರ್ಚಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪರದಾರ ಮೋತಕಪಳ್ಳಿ, ಗರಗಪಳ್ಳಿ, ಭಕ್ತಂಪಳ್ಳಿ, ಇರಗಪಳ್ಳಿ, ಬುರುಗಪಳ್ಳಿ, ಚತ್ರಸಾಲ, ಕರ್ಚಖೇಡಗಳಲ್ಲಿ ಸೇಡಂ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಹೀಗಾಗಿ ಮತದಾರರು ಬಿಜೆಪಿಯತ್ತ ಒಲವು ತೋರಿದ್ದಾರೆ ಎಂದರು. ಮುಖಂಡರಾದ ಪಿತಾಂಬರ, ಶಿವಶರಣಪ್ಪ ಕುಂಬಾರ, ರೇವಣಸಿದ್ಧಪ್ಪ ಹಾಗೂ ಮಹಿಳೆಯರು ಇದ್ದರು.