Advertisement

ಮನೆಬಾಗಿಲಿಗೆ ಇಂದು ಕಂದಾಯ ದಾಖಲೆ: ಡಿಸಿ

02:53 PM Mar 12, 2022 | Team Udayavani |

ಬಳ್ಳಾರಿ: ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಮಹತ್ವದ ಯೋಜನೆಯಾದ “ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಯು ಮಾ.12ರಂದು ಶನಿವಾರ ಬೆಳಗ್ಗೆ 11ಕ್ಕೆ ನಗರದ ಅಂದ್ರಾಳ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ತಾಲೂಕುಗಳಲ್ಲಿ ಆಯಾ ಶಾಸಕರು ಚಾಲನೆ ನೀಡಲಿದ್ದು, ಇದೇ ವೇಳೆ ಎಲ್ಲ ಗ್ರಾಮಗಳಲ್ಲೂ ರೈತರ ಮನೆಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ತಮ್ಮ ಕಂದಾಯ ದಾಖಲೆ ಹೊಂದುವುದು ಅವರ ಹಕ್ಕಾಗಿದ್ದು, ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳಿಗೆ ಸಂಬಂಧಿ ಸಿದ ವ್ಯವಹಾರಗಳಿಗ ದಾಖಲೆಗಳ ಅವಶ್ಯಕತೆ ಇರುತ್ತದೆ. ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದು ತುಂಬಾ ದುಸ್ತರವಾಗಿರುವುದರಿಂದ, ಅವರ ಮನೆಬಾಗಿಲಿಗೆ ಅವರ ಕಂದಾಯ ದಾಖಲೆ ತಲುಪಿಸುವುದರಿಂದ ಅಲೆದಾಟ ತಪ್ಪಿಸಿದಂತಾಗುತ್ತದೆ ಎಂಬ ಸದುದ್ದೇಶದಿಂದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಇಂತಹ ಮಹತ್ತರ ಯೋಜನೆ ಜಾರಿಗೆ ತಂದಿದ್ದಾರೆ. ಬಳ್ಳಾರಿ ಜಿಲ್ಲೆಯ ಎಲ್ಲ ರೈತರಿಗೆ ಅವರ ಜಮೀನಿಗೆ ಸಂಬಂಧಿಸಿದ ಪಹಣಿ ಪತ್ರಿಕೆ ಹಾಗೂ ನಕಾಶೆ, ಇದರೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸಲು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 1,95,670 ಪಹಣಿ ಮತ್ತು 96,172 ನಕ್ಷೆಗಳು ಮತ್ತು 1,98,144 ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಸೇರಿದಂತೆ ಒಟ್ಟು 4,89,986 ದಾಖಲೆಗಳು ಮುದ್ರಣಗೊಂಡು ಆಯಾ ತಾಲೂಕು ಕಚೇರಿಗಳಿಗೆ ಪೂರೈಕೆ ಮಾಡಲಾಗಿದೆ. ಅದರಂತೆ ಜಿಲ್ಲೆಯ ಎಲ್ಲ ತಹಶೀಲ್ದಾರರು ಸರ್ಕಾರದ ನಿರ್ದೇಶನದಂತೆ ನಿಗದಿಪಡಿಸಿದ ಲಕೋಟೆಗಳಲ್ಲಿ ಸರ್ಕಾರದ ಸಾಧನಗಳ ಮಾಹಿತಿಯುಳ್ಳ ಕಿರುಹೊತ್ತಿಗೆಯೊಂದಿಗೆ, ಈ ದಾಖಲೆಗಳನ್ನು ಇಟ್ಟು, ರೈತರ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ. ಮಾ.12ರಂದು ಬೆಳಗ್ಗೆ 11ಕ್ಕೆ ನಗರ ಹೊರವಲಯದ ಅಂದ್ರಾಳ್‌ ಬಳಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದು, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಎತ್ತಿನಬೂದಿಹಾಳ್‌ದಲ್ಲಿ ಸ್ಥಳೀಯ ಶಾಸಕರು ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಸರ್ಕಾರದ “ಕಂದಾಯ ದಾಖಲೆ ಮನೆ ಬಾಗಿಲಿಗೆ’ ಕಾರ್ಯಕ್ರಮದಿಂದ ರೈತರಿಗೆ ತಮ್ಮ ಜಮೀನಿನ ಪೂರ್ಣ ಮಾಹಿತಿ ಸ್ಥಳದಲ್ಲೇ ಲಭಿಸಿದಂತಾಗುತ್ತದೆ. ಉಚಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಿಂದಾಗಿ ಅವರ ಹಾಗೂ ಅವರ ಮಕ್ಕಳಿಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಹಕಾರಿಯಾಗಿರುತ್ತದೆ. ಕಿಸಾನ್‌ ಸಮ್ಮಾನ್‌ ಯೋಜನೆ ದಾಖಲೆಗಳಿಂದ ಈ ಎಲ್ಲ ಮಾಹಿತಿ ಪಡೆದುಕೊಂಡು ರೈತರಿಗೆ ಗ್ರಾಮಗಳಲ್ಲಿ ಗ್ರಾಮಲೆಕ್ಕಿಗ ಮತ್ತು ಸಹಾಯಕರ ಮೂಲಕ ವಿತರಿಸಲು ಉದ್ದೇಶಿಸಲಾಗಿದೆ. ದಿನಗಳಲ್ಲಿ ರೈತರ ಮನೆಬಾಗಿಲಿಗೆ ತಲುಪಿಸಲಾಗುವುದ. ಕಂದಾಯ ದಾಖಲೆಗಳು ಪಡೆಯದವರು ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ವಾರದೊಳಗೆ ಉಚಿತವಾಗಿ ಪಡೆದುಕೊಳ್ಳಬಹುದು ಎಂದರು. ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ್‌ ಇದ್ದರು.

 

Advertisement

19ಕ್ಕೆ ಮೇಯರ್‌-ಉಪಮೇಯರ್‌ ಚುನಾವಣೆ; ನಿಷೇಧಾಜ್ಞೆ ಜಾರಿ

ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್‌, ಉಪ-ಮೇಯರ್‌ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ಮಾ.19ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ದಿನದಂದುಮಹಾನಗರ ಪಾಲಿಕೆ ಸುತ್ತಮುತ್ತ 500 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ಧಿಕಾರಿ ಪವನಕುಮಾರ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ. ಚುನಾವಣೆ  ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಚುನಾವಣೆ ನಡೆಸುವ ಹಿತದೃಷ್ಟಿಯಿಂದ ಸಿಆರ್‌ಪಿಸಿ ಕಾಯ್ದೆ 1973 ಕಲಂ 144ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಬಳ್ಳಾರಿ ಮಹಾನಗರ ಪಾಲಿಕೆ ಸುತ್ತಮುತ್ತಲಿನ ಸುಮಾರು 500 ಮೀಟರ್‌ ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಅನಧಿಕೃತ ಲೇಔಟ್‌ಗಳ ವಿರುದ್ಧ ಕ್ರಮ: ಮಾಲಪಾಟಿ

ಬಳ್ಳಾರಿ: ಕೃಷಿ ಜಮೀನನ್ನು ಸಂಬಂಧಪಟ್ಟ ಭೂ ಮಾಲೀಕರು ಭೂ ಪರಿವರ್ತನೆ ಆದೇಶ ಹಾಗೂ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೇ ಲೇಔಟ್‌ಗಳನ್ನು ಅಭಿವೃದ್ಧಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಯಾವುದೇ ಕೃಷಿ ಜಮೀನನ್ನು ಸಂಬಂಧಪಟ್ಟ ಭೂ ಮಾಲೀಕರು ಕೃಷಿಯೇತರ ಉದ್ದೇಶಕ್ಕೆ ಬಳಸುವ ಮುನ್ನ, ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ (95)ರ ಪ್ರಕಾರ ಭೂ ಪರಿವರ್ತನೆ ಆದೇಶ ಪಡೆದು, ತದನಂತರ ಸಂಬಂಧಪಟ್ಟ ಯೋಜನಾ ಪ್ರಾಧಿಕಾರದಿಂದ, ಗ್ರಾಪಂ ಕಡೆಯಿಂದ ವಿನ್ಯಾಸ ಅನುಮೋದನೆ, ಅನುಮತಿ ಪಡೆದು ಲೇಔಟ್‌ಗಳನ್ನು ಅಭಿವೃದ್ಧಿಪಡಿಸಬೇಕಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಆದರೆ ಎಲ್ಲ ತಾಲ್ಲೂಕುಗಳಲ್ಲಿ ಕೆಲವೊಂದು ಕೃಷಿ ಜಮೀನುಗಳಲ್ಲಿ ಭೂ ಪರಿವರ್ತನೆ ಆದೇಶ ಹಾಗೂ ಸಂಬಂಧಪಟ್ಟ ಯೋಜನಾ ಪ್ರಾ ಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೇ ಲೇಔಟಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಕೃಷಿ ಜಮೀನಿನ ಮಾಲೀಕರಿಗೆ ತಿಳಿಯಪಡಿಸುವುದೇನೆಂದರೆ ಭೂ ಪರಿವರ್ತನೆ ಆದೇಶ ಹಾಗೂ ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೇ ಕೃಷಿ ಜಮೀನುಗಳನ್ನು ಲೇಔಟ್‌ಗಳಾಗಿ ಅಭಿವೃದ್ಧಿಪಡಿಸಿರುವ, ಪಡಿಸುತ್ತಿರುವವರು ಕೂಡಲೇ ಈ ರೀತಿಯ ಅನಧಿಕೃತ ಲೇಔಟ್‌ಗಳನ್ನು ತೆರುವುಗೊಳಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ. ಇಲ್ಲವಾದಲ್ಲಿ ಸಂಬಂಧಪಟ್ಟ ಯೋಜನಾ ಪ್ರಾಧಿಕಾರದಿಂದ ಇಂತಹ ಅನಧಿಕೃತ ಲೇಔಟ್‌ಗಳನ್ನು ತೆರೆವುಗೊಳಿಸಲು ಮತ್ತು ಸಂಬಂಧಪಟ್ಟ ಮಾಲೀಕರ ವಿರುದ್ಧ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅನಧಿಕೃತ ಲೇಔಟ್‌ಗಳಲ್ಲಿ ಜನರು ಕೂಡ ನಿವೇಶನಗಳನ್ನು ಖರೀದಿ ಮಾಡಬಾರದು. ನೋಂದಣಿಯಾಗುವುದಿಲ್ಲ ಮತ್ತು ಸಮಸ್ಯೆಗಳ ಸುಳಿಗೆ ಸಿಲುಕಿದಂತೆ ಎಂದು ಜನರಿಗೆ ತಿಳಿಸಿರುವ ಜಿಲ್ಲಾಕಾರಿ ಅವರು ಅಧಿಕೃತ ಲೇಔಟ್‌ಗಳಲ್ಲಿ ನಿವೇಶನ ಖರೀದಿಸಿ ಎಂದು ಸಲಹೆ ನೀಡಿದ್ದಾರೆ. ಅನಧಿಕೃತ ಲೇಔಟ್‌ಗಳ ಕುರಿತು ಮಾಹಿತಿಗಳು ಇದ್ದಲ್ಲಿ ಜಿಲ್ಲಾಕಾರಿಗಳ ಕಚೇರಿಗೆ ತಿಳಿಸಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next