ಬೆಂಗಳೂರು: 20 ಕೋಟಿ ರೂ. ವೆಚ್ಚದಲ್ಲಿ ನಗರದ 20 ಕೆರೆಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ. ನಗರದ ಕೆರೆಗಳು ಕಲುಷಿತಗೊಳ್ಳುವುದು ಹಾಗೂ ಒತ್ತುವರಿಯಾಗುತ್ತಿರುವ ಬಗ್ಗೆ ಪಾಲಿಕೆ ಸಭೆಯಲ್ಲಿ ಹಲವಾರು ಸದಸ್ಯರು ದೂರಿದ್ದರು. ಆ ಹಿನ್ನೆಲೆಯಲ್ಲಿ ನಗರದ 20 ಕೆರೆಗಳ ಅಭಿವೃದ್ಧಿಗೆ ಟೆಂಡರ್ ಆಹ್ವಾನಿಸಲಾಗಿದೆ.
ಅದರಂತೆ ಪ್ರತಿಯೊಂದು ಕೆರೆ ಅಭಿವೃದ್ಧಿಗೆ ಒಂದು ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದ್ದು, 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಟೆಂಡರ್‌ನಲ್ಲಿ ಸೂಚಿಸಲಾಗಿದೆ. ಅದರಂತೆ ಪ್ರತಿಯೊಂದು ಕೆರೆಯ ಬಂಡುದಾರಿ, ತಂತಿಬೇಲಿ, ಆವರಣ ಅಭಿವೃದ್ಧಿ ಹಾಗೂ ಕೆರೆಗೆ ಕಲುಷಿತ ಅಥವಾ ತ್ಯಾಜ್ಯ ನೀರು ಸೇರದಂತೆ ಕ್ರಮಕೈಗೊಳ್ಳಬೇಕಾಗುತ್ತದೆ.
ನಗರದ ಕೆರೆಗಳು ನೂರಾರು ಎಕರೆ ವಿಸ್ತೀರ್ಣ ಹೊಂದಿರುವುದರಿಂದ ಕೇವಲ ಒಂದು ಕೋಟಿ ರೂ.ಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ. ಆ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಕೆರೆ ಒತ್ತುವರಿಯಾಗದಂತೆ ತಂತಿಬೇಲಿ ಹಾಗೂ ತ್ಯಾಜ್ಯ ನೀರು ಕೆರೆ ಪ್ರವೇಶಿಸದಂತೆ ಕ್ರಮಕೈಗೊಳ್ಳಲಾಗುತ್ತದೆ. ಆ ಹಿನ್ನೆಲೆಯಲ್ಲಿ ಪ್ರಸಕ್ತ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಕೋರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಅಭಿವೃದ್ಧಿಯಾಗಲಿರುವ ಕೆರೆಗಳು: ಉತ್ತರಹಳ್ಳಿ, ಕೊಡಿಗೆ ಸಿಂಗಸಂದ್ರ, ಸೋಮಸುಂದರಪಾಳ್ಯ, ಸಾದರಮಂಗಲ, ಗರುಡಾಚಾರಪಾಳ್ಯ, ಹಲಸೂರು, ಬಸಪುರ, ದೊಡ್ಡಕನ್ನೇನಹಳ್ಳಿ, ಉಳ್ಳಾಲ, ಕೋನೇನ ಅಗ್ರಹಾರ, ಕೊತ್ತನೂರು, ಹೇರೋಹಳ್ಳಿ, ದೇವರಕೆರೆ, ಬೈಯಪ್ಪನಕುಂಟೆ, ಕಮ್ಮಗೊಂಡನಹಳ್ಳಿ, ದೇವರಬೀಸನಹಳ್ಳಿ, ಸುಬ್ರಮಣ್ಯಪುರ, ವಿಭೂತಿಪುರ, ಮಂಗನಮ್ಮನಪಾಳ್ಯ ಕೆರೆ.