Advertisement

ಪ್ರಾಜೆಕ್ಟ್ ಚೀತಾ: ಚೀತಾಗಳ ಸಾವಿಗೆ ಕಾರಣವಾದರೂ ಏನು?

11:31 PM Jul 21, 2023 | Team Udayavani |

ಏನಿದು ಪ್ರಾಜೆಕ್ಟ್ ಚೀತಾ?

Advertisement

ಭಾರತದಲ್ಲಿ ಕಟ್ಟಕಡೆಯದಾಗಿ ಚೀತಾಗಳು ಕಾಣಿಸಿಕೊಂಡಿದ್ದು 1947ರಲ್ಲಿ. ಇದಾದ ಅನಂತರ ದೇಶದಲ್ಲಿ ಒಂದೇ ಒಂದು ಚೀತಾ ಇರಲಿಲ್ಲ. ಅಂದರೆ 1947ರಲ್ಲಿ ಛತ್ತೀಸ್‌ಗಢ ರಾಜ್ಯದಲ್ಲಿನ ಕೊರಿಯಾ ಜಿಲ್ಲೆಯ ಸಾಲ್‌ ಅರಣ್ಯದಲ್ಲಿದ್ದ ಕಡೆಯ ಮೂರು ಚೀತಾಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಚೀತಾಗಳ ಸಾವಿಗೆ ಪ್ರಮುಖ ಕಾರಣವೇ ಬೇಟೆ, ವಾಸಸ್ಥಾನದ ಬದಲಾವಣೆ. ಹೀಗಾಗಿ 1952ರಲ್ಲಿ ಕೇಂದ್ರ ಸರಕಾರ ಚೀತಾಗಳು ಸಂಪೂರ್ಣವಾಗಿ ನಾಶವಾಗಿವೆ ಎಂಬುದಾಗಿ ಘೋಷಣೆ ಮಾಡಿತ್ತು.

ಹೀಗಾಗಿ ಈಗ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದಲ್ಲಿ ಮತ್ತೆ ಚೀತಾಗಳ ಸಂತತಿ ಬೆಳೆಸಬೇಕು ಎಂಬ ಉದ್ದೇಶದಿಂದ ಪ್ರಾಜೆಕ್ಟ್ ಚೀತಾ ಯೋಜನೆ ಶುರು ಮಾಡಿತು. ನಮೀಬಿಯಾ ಸರಕಾರದ ಜತೆ ಒಪ್ಪಂದ ಮಾಡಿಕೊಂಡು, ಅಲ್ಲಿಂದ ಚೀತಾ ತರಿಸಿಕೊಳ್ಳಲು ನಿರ್ಧಾರ ಮಾಡಿತು. ಅಲ್ಲದೆ ಮುಂದಿನ 10 ವರ್ಷಗಳ ಕಾಲ ಪ್ರತೀ ವರ್ಷವೂ 5-10 ಚೀತಾಗಳನ್ನು ಭಾರತಕ್ಕೆ ತಂದು ಅವುಗಳ ಸಂತತಿ ಬೆಳೆಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಯಿತು. ವಿಶೇಷವೆಂದರೆ ದಕ್ಷಿಣ ಆಫ್ರಿಕಾ, ನಮೀಬಿಯಾದಲ್ಲಿ ಚೀತಾಗಳನ್ನು ಬೇಲಿಯನ್ನು ಒಳಗೊಂಡ ಅರಣ್ಯದಲ್ಲಿ ಸಾಕುತ್ತಿದ್ದರೆ. ಭಾರತದಲ್ಲಿ ಬೇಲಿ ಇಲ್ಲದ ಅರಣ್ಯದಲ್ಲಿ ಸಾಕಲು ತೀರ್ಮಾನ ಮಾಡಿ, ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಯಿತು.

ನಮೀಬಿಯಾದಿಂದ ಆಗಮನ

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಮೊದಲ ಬ್ಯಾಚ್‌ನಲ್ಲಿ ಎಂಟು ಚೀತಾಗಳನ್ನು ತರಲಾಗಿತ್ತು. ಇದೇ ವರ್ಷದ ಫೆಬ್ರವರಿಯಲ್ಲಿ ಮತ್ತೆ 12 ಚೀತಾಗಳು ಭಾರತಕ್ಕೆ ಬಂದವು. ಇವುಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಯಿತು. ಅಂದರೆ ಮೊದಲಿಗೆ ಇವುಗಳನ್ನು ಏಕಾಂತವಾಗಿ ಇರಿಸಿ, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡಿ, ಬಳಿಕ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡುವ ನಿರ್ಧಾರ ಮಾಡಲಾಯಿತು. ಅದರಂತೆಯೇ ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಡುಗಡೆ ಮಾಡುತ್ತಾ ಹೋಗಲಾಯಿತು.

Advertisement

ಒಂದರ ಹಿಂದೆ ಒಂದು ಸಾವು

ವಾರದ ಹಿಂದೆ ಸೂರ್ಯ ಎಂಬ ಚೀತಾ ಸಾವನ್ನಪ್ಪಿತು. ಇದಾದ ಎರಡೇ ದಿನದಲ್ಲಿ ತೇಜಸ್‌ ಎಂಬ ಮತ್ತೂಂದು ಚೀತಾ ಕೂಡ ಮೃತಪಟ್ಟಿತು. ತೇಜಸ್‌ ಸಾವಿಗೆ ಹೆಣ್ಣು ಚೀತಾವೊಂದು ದಾಳಿ ಮಾಡಿದ್ದು ಕಾರಣ ಎಂಬುದು ಅಧಿಕಾರಿಗಳ ಮಾತು. ಅಂದರೆ ಇದು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ನೀಡುವುದರ ಒಳಗಾಗಿ ಸಾವನ್ನಪ್ಪಿತು ಎಂದು ಹೇಳುತ್ತಾರೆ. ಅಲ್ಲದೆ  ಇದಕ್ಕೂ ಕುತ್ತಿಗೆಯಲ್ಲಿ ಗಾಯಗಳಾಗಿದ್ದವು.  ಮೇ ತಿಂಗಳಲ್ಲಿ ಮೂರು ಮರಿಗಳು ಸತ್ತಿವೆ. ಇದಕ್ಕೆ ಅತಿಯಾದ ಬಿಸಿ ಮತ್ತು ಪೌಷ್ಟಿಕಾಂಶ ಕೊರತೆ ಕಾರಣ ಎಂಬ ಪಟ್ಟಿ ಮಾಡಲಾಗಿದೆ. ದಕ್ಷ ಎಂಬ ಚೀತಾ, ಅರಣ್ಯದ ಬೇರೆ ಪ್ರಾಣಿಗಳೊಂದಿಗೆ ಗುದ್ದಾಡಿ ಮೃತಪಟ್ಟಿದೆ. ಸಾಶಾ ಮತ್ತು ಉದಯ್‌ ಕೂಡ ಬೇರೆ ಬೇರೆ ಆರೋಗ್ಯದ ಸಮಸ್ಯೆಗಳಿಂದ ಸತ್ತಿವೆ. ಹೀಗಾಗಿ ಪ್ರಾಜೆಕ್ಟ್ ಚೀತಾ ವಿಫ‌ಲವಾಗಿದೆಯೇ ಎಂಬ ಅನುಮಾನಗಳು ಟೀಕಾಕಾರದಿಂದ ಕೇಳಿಬರಲಾರಂಭಿಸಿವೆ.

ಕನಿಷ್ಠ 50 ಚೀತಾ ಇರಬೇಕು

ಭಾರತದಲ್ಲಿ ಚೀತಾಗಳ ಸಂಖ್ಯೆ ವೃದ್ಧಿಯಾಗಬೇಕು ಎಂದಾದರೆ ಕನಿಷ್ಠ 50 ಚೀತಾಗಳು ಇರಬೇಕು ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ದೇಶಗಳಿಂದ ತಂದಿರುವ 20ರಲ್ಲಿ 5 ಸಾವನ್ನಪ್ಪಿದ್ದು, ಇಲ್ಲಿ ಹುಟ್ಟಿದ ಮೂರು ಮರಿಗಳೂ ಸಾವನ್ನಪ್ಪಿವೆ. ಜತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ತರಿಸಿಕೊಳ್ಳಬೇಕು. ಕನಿಷ್ಠ 50 ಚೀತಾಗಳು ಬಂದ ಮೇಲೆ ಸಂಖ್ಯೆಯಲ್ಲಿ ಸ್ಥಿರತೆ ಕಾಣಬಹುದು ಎಂಬುದು ಕೇಂದ್ರ ಸರಕಾರ ನೇಮಕ ಮಾಡಿದ್ದ ತಜ್ಞರ ಸಮಿತಿಯ ವಾದವಾಗಿದೆ. ಈ ಮಧ್ಯೆ ಪ್ರಾಜೆಕ್ಟ್ ಚೀತಾದ ಪರ ವಾದ ಮಾಡುವ ತಜ್ಞರು ಹೇಳುವುದೇ ಬೇರೆ. ಈ ಯೋಜನೆ ವರ್ಷದ ಹಿಂದಷ್ಟೇ ಆರಂಭವಾಗಿದೆ. ಇದು ಯಶಸ್ವಿಯೋ ಅಥವಾ ವಿಫ‌ಲವೋ ಎಂಬುದನ್ನು ನೋಡುವುದಕ್ಕೆ ಇನ್ನೂ ಕಾಲಾವಕಾಶ ಬೇಕಾಗಿದೆ. ಈಗಲೇ ಅಂತಿಮ ನಿರ್ಧಾರಕ್ಕೆ ಬರಬೇಕಾಗಿಲ್ಲ ಎಂದು ದಿ ಸ್ಟೋರಿ ಆಫ್ ಇಂಡಿಯಾಸ್‌ ಚೀತಾಸ್‌ ಪುಸ್ತಕದ ಲೇಖಕ ದಿವ್ಯಾಬಾನುಸಿ ಹೇಳುತ್ತಾರೆ.

ಎಂಟು ಚೀತಾಗಳ ಸಾವು

ಸದ್ಯ ನಮೀಬಿಯಾದಿಂದ ತರಲಾಗಿದ್ದ 20ರಲ್ಲಿ ಐದು ಚೀತಾಗಳು ಸಾವನ್ನಪ್ಪಿದೆ. ಹಾಗೆಯೇ ಇಲ್ಲಿ ಬಂದ ಮೇಲೆ ಜನ್ಮ ತಾಳಿದ್ದ ಮೂರು ಮರಿಗಳೂ ಸತ್ತಿವೆ. ಒಟ್ಟಾರೆಯಾಗಿ 8 ಚೀತಾಗಳು ಮೃತಪಟ್ಟಂತಾಗಿದೆ. ಇಷ್ಟು ಚೀತಾಗಳು ಸಾವನ್ನಪ್ಪಿದ ಮೇಲೆ, ಈ ಯೋಜನೆ ಬಗ್ಗೆ ಟೀಕೆಗಳೂ ಆರಂಭವಾಗಿವೆ. ಈ ಚೀತಾಗಳಿಳು ಭಾರತದ ಪರಿಸರಕ್ಕೆ ಹೊಂದಿಕೊಳ್ಳುತ್ತಿಲ್ಲ. ಹಾಗೆಯೇ ಸಂಪೂರ್ಣವಾಗಿ ಅಧ್ಯಯನ ನಡೆಸದೇ ತರಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಸದ್ಯ ಕುನೋದಲ್ಲಿಯೇ 11 ಚೀತಾಗಳಿದ್ದು, ಇವುಗಳ ಮೇಲೆ ನಿಗಾ ಇಡಲಾಗಿದೆ.

ರೇಡಿಯೋ ಕಾಲರ್‌ ಐಡಿ ಕಾರಣವೇ?

ಕಳೆದ ವಾರವಷ್ಟೇ ಸೂರ್ಯ ಎಂಬ ಹೆಸರಿನ ಚೀತಾವೊಂದು ಸಾವನ್ನಪ್ಪಿದೆ. ಇದರ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಅದರ ಕುತ್ತಿಗೆ ಬಳಿ ಗಾಯಗಳು ಕಂಡು ಬಂದಿವೆ. ಅಲ್ಲದೆ ಈ ರೇಡಿಯೋ ಕಾಲರ್‌ ಐಡಿ ಇರುವ ಜಾಗದಲ್ಲಿ ಆಗಿರುವ ಗಾಯದಲ್ಲಿ ಹುಳುಗಳೂ ಕಂಡು ಬಂದಿವೆ. ಹೀಗಾಗಿ ಈ ಕಾಲರ್‌ ಐಡಿಗಳಿಂದಾಗಿಯೇ ಚೀತಾಗಳು ದುರ್ಬಲವಾಗಿದ್ದು, ಸಾವನ್ನಪ್ಪಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಕಾಲರ್‌ ಐಡಿಯನ್ನು ಚೀತಾಗಳ ಚಲನವಲನವನ್ನು ಗಮನಿಸುವ ಸಲುವಾಗಿ ಹಾಕಲಾಗಿದೆ. ಜತೆಗೆ ಕುತ್ತಿಗೆ ಜಾಗದಲ್ಲಿ ಗಾಯವಾಗಿರುವುದರಿಂದ ಅವುಗಳು ತನ್ನಿಂತಾನೇ ವಾಸಿ ಮಾಡಿಕೊಳ್ಳಲು ಆಗಿಲ್ಲ. ಅಂದರೆ ಸಾಮಾನ್ಯವಾಗಿ ಕಾಡು ಪ್ರಾಣಿಗಳು ಗಾಯವಾದರೆ ಆ ಜಾಗವನ್ನು ನಾಲಗೆಯಿಂದ ನೆಕ್ಕಿ ವಾಸಿ ಮಾಡಿಕೊಳ್ಳುತ್ತವೆ. ಆದರೆ ಭಾರತೀಯ ಅರಣ್ಯಾಧಿಕಾರಿಗಳು ಬೇರೆಯೇ ಹೇಳುತ್ತಾರೆ. ಭಾರತದಲ್ಲಿ ನಾವು ಹುಲಿ, ಸಿಂಹ, ಚಿರತೆ, ಆನೆಗಳಿಗೂ ರೇಡಿಯೋ ಕಾಲರ್‌ ಐಡಿ ಬಳಕೆ ಮಾಡುತ್ತೇವೆ. ಅವುಗಳಿಗೆ ಇಂಥ ಗಾಯಗಳಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next