ಬೆಳಗಾವಿ/ಹಿರೇಬಾಗೇವಾಡಿ: ರೈತರ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರೈತರ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸ ಮತ್ತು ಕಚೇರಿಗೆ ಮುತ್ತಿಗೆ ಹಾಕಲು ತೆರಳುತ್ತಿದ್ದ ರೈತ ಸಂಘಟನೆಯ ರೈತರನ್ನು ಬುಧವಾರ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡರು.
ಬೆಳಗಾವಿಯಿಂದ ಶಿಗ್ಗಾಂವಿಯತ್ತ ತೆರಳುವ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಪೊಲೀಸರು, ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿ 4ರ ಟೋಲ್ ನಾಕಾ ಬಳಿ ಎಲ್ಲರನ್ನೂ ತಡೆ ಹಿಡಿದರು. ಆಗ ರೈತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನಂತರ 30ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದು ಮಾರೀಹಾಳ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆಗೊಳಿಸಿದರು.
ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗಿದ್ದು, ಇದರಿಂದ ರೈತರು ತೊಂದರೆಗೀಡಾಗಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು. ರಾಗಿ, ಭತ್ತ, ಜೋಳ ಸೇರಿದಂತೆ 26 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಆದೇಶವಿದೆ. ಈ ಧಾನ್ಯಗಳಿಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರೈತರು ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು, ಇದನ್ನು ಬಗೆಹರಿಸಲು ಸರ್ಕಾರ ಮುತುವರ್ಜಿ ವಹಿಸಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದೇ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ರೈತ ಮುಖಂಡ ಚೂನಪ್ಪ ಪೂಜೇರಿ ಆರೋಪಿಸಿದರು.
ಇತ್ತೀಚೆಗೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ರೈತರ ಬೆಳೆಗಳು ಹಾನಿಯಾಗಿವೆ. ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವ ಮೂಲಕ ಎಲ್ಲ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ರೈತರ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕುತ್ತಿದೆ. ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸದ್ದಕ್ಕೆ ಅವರ ಕಚೇರಿಗೆ ಮುತ್ತಿಗೆ ಹಾಕಲು ನಾವು ಹೊರಟಾಗ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಯುತ ಹೋರಾಟ ನಡೆಸಲು ಶಾಂತಿಯುತವಾಗಿ ಹೊರಟಾಗ ಪೊಲೀಸರು ನಮ್ಮನ್ನು ತಡೆಯುತ್ತಿದ್ದಾರೆ. ಈ ಹೋರಾಟವನ್ನು ನಾವು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ನಮ್ಮ ನಾಯಕರು ಈ ಹೋರಾಟವನ್ನು ಮುಂದುವರಿಸುತ್ತಾರೆ. ನಮ್ಮ ಹೋರಾಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು. ಜಿಲ್ಲೆಯ ರೈತರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ರೈತರು ಇದ್ದರು.