ದಾಂಡೇಲಿ : ನಗರ ಸಭೆಯ ವಾರ್ಡ್ ನಂ:11 ಕ್ಕೆ ನಡೆದ ಉಪ ಚುನಾವಣೆಯ ಮತ ಏಣಿಕೆಯು ಸೋಮವಾರ ನಡೆಯಲಿರುವ ಹಿನ್ನೆಲೆಯಲ್ಲಿ ಸೆ:05 ರ ಭಾನುವಾರ ರಾತ್ರಿ 10 ಗಂಟೆಯಿಂದ ಸೆ:06 ರ ಸೋಮವಾರ ಮಧ್ಯಾಹ್ನ 2 ಗಂಟೆಯವರೆಗೆ ಮತ ಏಣಿಕೆ ಪ್ರದೇಶವಾದ ನಗರ ಸಭೆ ಪ್ರದೇಶ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಭಾನುವಾರ ಬೆಳಿಗ್ಗೆ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ನಿಷೇದಾಜ್ಞೆಯ ಅವಧಿಯಲ್ಲಿ ಸಾರ್ವಜನಿಕರು 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಏಣಿಕೆ ಕೇಂದ್ರದ ಆವರಣವನ್ನು ಹೊರತುಪಡಿಸಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ, ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಸರಕಾರಿ ಕಚೇರಿಯ ಸುತ್ತಮುತ್ತ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ:ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಅಕ್ಷತ್ ಸಾಯಿನಾಥ್ ಅವರಿಗೆ ಸನ್ಮಾನ
ಯಾವುದೇ ಆಯುಧ, ಕುಡಗೋಲು, ಖಡ್ಗ, ಕಲ್ಲು, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಅದಕ್ಕೆ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಅಥವಾ ಹಿಡಿದು ಓಡಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ/ರಾಜಕೀಯ ಸಭೆ ಸಮಾರಂಭಗಳನ್ನು ನಿಷೇಧಿಸಿದೆ. ಪಟಾಕಿಗಳನ್ನು ಸಿಡಿಸುವುದು, ಯಾವುದೇ ಸ್ಪೋಟಕ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು, ಅಸಭ್ಯತನ, ಸಾರ್ವಜನಿಕ ಭದ್ರತೆಗೆ ಧಕ್ಕೆ ತರುವ ಯಾವುದೇ ರೀತಿಯ ಅಪರಾಧ ಎಸಗುವುದನ್ನು ಮತ್ತು ಪ್ರೇರೆಪಿಸುವ ಕ್ರಮವನ್ನು ನಿಷೇಧಿಸಲಾಗಿದೆ.
ಮತ ಏಣಿಕೆ ಕಾರ್ಯದ ಸಮಯದಲ್ಲಿ ಮತ ಏಣಿಕೆ ಕೇಂದ್ರದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಹಲವಾರು ಜನ ಸೇರುವುದು ಮುಂತಾದವುಗಳನ್ನು ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆ. ಈ ಆದೇಶವು ಆರಕ್ಷಕ ಸಿಬ್ಬಂದಿಗಳು ಹಾಗೂ ಚುನಾವಣಾ ಕಾರ್ಯದಲ್ಲಿ ಕರ್ತವ್ಯ ನಿರತಾಗಿರುವ ಸಿಬ್ಬಂದಿಗಳು ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ತಿಳಿಸಿದ್ದಾರೆ.