Advertisement

10ರವರೆಗೂ ನಿಷೇಧಾಜ್ಞೆ ಜಾರಿ

09:04 PM Dec 07, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಕೇವಲ 24 ಗಂಟೆ ಮಾತ್ರ ಬಾಕಿ ಇದ್ದು, ಡಿ.9 ರಂದು ನಗರದ ಬಿಬಿ ರಸ್ತೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮತ ಎಣಿಕೆ ನಡೆಯಲಿರುವುದರಿಂದ ಮುಂಜಾಗ್ರತಾ ಕ್ರಮದಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಡಿ.9ರ ಬೆಳಗ್ಗೆ 6ರಿಂದ 10ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಡೀಸಿ ಆರ್‌.ಲತಾ ಆದೇಶಿಸಿದ್ದಾರೆ.

Advertisement

ನಿಷೇಧಾಜ್ಞೆಗೆ ಮನವಿ ಮಾಡಿದ್ದ ಎಸ್ಪಿ: ಮತ ಎಣಿಕೆ ಹಿನ್ನೆಲೆಯಲ್ಲಿ ಸಮಾಜಘಾತುಕ ಶಕ್ತಿಗಳು ಶಾಂತಿಭಂಗ ಮಾಡುವ ಸಾಧ್ಯತೆಗಳಿರುವುದರಿಂದ ಅಹಿತಕರ ಘಟನೆಗಳು ಉಂಟಾಗುವ ಸಂಭವ ಇರುವುದರಿಂದ ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರನ್ವಯ ನಿಷೇಧಾಜ್ಞೆ ಹೊರಡಿಸುವ ಮೂಲಕ ನಿರ್ಬಂದಿಸಬಹುದು. ಅವಶ್ಯಕವಾಗಿರುವುದನ್ನು ಮನಗೊಂಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಉಲ್ಲೇಖದನ್ವಯ ಜಿಲ್ಲಾಧಿಕಾರಿ ಆರ್‌.ಲತಾ ಈ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆಯ ಷರತ್ತುಗಳೇನು?: ನಿಷೇಧಾಜ್ಞೆ ಜಾರಿಗೊಳಿಸಿರುವ ಜಿಲ್ಲಾಡಳಿತ ಡಿ.9 ರಿಂದ 10ರ ಬೆಳಗ್ಗೆ 76 ಗಂಟೆಯವರೆಗೂ ಐದಕ್ಕಿಂತ ಹೆಚ್ಚು ಜನ ಸಾರ್ವಜನಿಕವಾಗಿ ಗುಂಪು ಕಟ್ಟಿಕೊಳ್ಳಬಾರದು. ಮಾರಕವಾದ ಆಯುಧಗಳನ್ನು ಹಿಡಿದು ತಿರುಗಾಡಬಾರದು. ಗೆದ್ದ ಅಭ್ಯರ್ಥಿಗಳ ಗೆಲುವಿನ ಸಂಭ್ರಮ, ಮೆರವಣಿಗೆ ನಡೆಸಬಾರದು. ಯಾವುದೇ ರೀತಿಯ ಬಂದ್‌, ಪ್ರತಿಭಟನೆ, ಮುಷ್ಕರ, ಪ್ರತಿಕೃತಿ ದಹನ ಮತ್ತಿತರ ಪೂರಕ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾವುದೇ ಜಾತಿ, ಧರ್ಮ, ಕೋಮು ಪಂಥಗಳಿಗೆ ಅಥವಾ ಸಾರ್ವಜನಿಕ ನೈತಿಕತೆ ಬಾಧಕ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ನಿಷೇಧಾಜ್ಞೆ ಜಾರಿ ಸಂದರ್ಭದಲ್ಲಿ ಸಂತೆ, ದನಗಳ ಸಂತೆ ಹಾಗೂ ಜಾತ್ರೆ ನಿಷೇಧಿಸಲಾಗಿದೆ.

ಶುಭ ಕಾರ್ಯಗಳಿಗೆ ಅನ್ವಯಿಸುವುದಿಲ್ಲ: ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಮದುವೆ, ನಿಶ್ಚಿತಾರ್ಥ ಮತ್ತಿತರ ಶುಭ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ. ಈ ಆದೇಶವು ಚುನಾವಣಾ ಮತ ಎಣಿಕೆ ಕಾರ್ಯಕ್ಕೆ ನಿಯೋಜನಗೊಂಡ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಅನ್ವಯಿಸುವುದಿಲ್ಲ. ಚುನಾವಣಾ ಸಂಬಂಧ ಏರ್ಪಡಿಸಿರುವ ಮತ ಕೇಂದ್ರಕ್ಕೂ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಮತ ಎಣಿಕೆ ನಡೆಸುವ ನಿಟ್ಟಿನಲ್ಲಿ ನಿಷೇಧಾಜ್ಞೆ ವಿಧಿಸುವುದು ಅಗತ್ಯವೆಂದು ತಿಳಿದು ಕಲಂ 144 ಸೆಕ್ಷನ್‌ ಅನ್ವಯ ಡಿ.9 ರ ಬೆಳಗ್ಗೆ 6 ರಿಂದ 10ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.
-ಆರ್‌.ಲತಾ, ಜಿಲ್ಲಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next