ನೆಟ್ಟಣಿಗೆಮುಟ್ನೂರು: ಇಲ್ಲಿನ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷೆ ಶಂಕರಿ ಆರ್. ಭಂಡಾರಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯ ಅಬ್ದುಲ್ ಖಾದರ್ ಮಾತನಾಡಿ, ಈಶ್ವರಮಂಗಲ ಮೂಲಕ ಕೇರಳಕ್ಕೆ ನಿರಂತರವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ. ಅಲ್ಲಲಿ ಸಿಸಿ ಕೆಮರಾಗಳನ್ನು ಅಳವಡಿಸಿದ್ದರೂ ಅಕ್ರಮಗಳು ನಡೆಯುತ್ತಿವೆ. ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಮಿತಿಗಿಂತ ಹೆಚ್ಚು ಮರಳನ್ನು ಹೇರಿ ಕೇರಳಕ್ಕೆ ಸಾಗಿಸಲಾಗುತ್ತಿದೆ. ಇದರಿಂದ ಕರ್ನೂರು ಕೋಟಿಗದ್ದೆಯ ಸೇತುವೆ ಶಿಥಿಲಗೊಂಡಿದೆ ಎಂದರು.
ಸದಸ್ಯ ಇಬ್ರಾಹಿಂ ಮಾತನಾಡಿ, ಗ್ರಾ.ಪಂ. ಈ ಹಿಂದೆ ಕೈಗೊಂಡ ನಿರ್ಣಯಗಳಿಗೆ ಬೆಲೆ ಕೊಡಿ ಎಂದು ಆಗ್ರಹಿಸಿದರು. ಉಪಾಧ್ಯಕ್ಷ ಶ್ರಿರಾಮ್ ಪಕ್ಕಳ ಮಾತನಾಡಿ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಈ ಬಗ್ಗೆ ಎಸ್ಪಿಗೆ ಬರೆಯೋಣ ಎಂದರು.
ಸದಸ್ಯ ಅಬ್ದುಲ್ ಖಾದರ್ ಮಾತನಾಡಿ, ಕಳೆದ ಕ್ರಿಯಾ ಯೋಜನೆಯಲ್ಲಿ ದಾರಿದೀಪದ ವ್ಯವಸ್ಥೆ ಸರಿಯಾಗಿಲ್ಲ. ಹಲವು ಬಾರಿ ಚರ್ಚೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿಳಂಬಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಉಪಾಧ್ಯಕ್ಷ ಶ್ರಿರಾಮ್ ಪಕ್ಕಳ ಉತ್ತರಿಸಿ, ಕೊನೆಯ ಹಂತದ ಕಾಮಗಾರಿ ನಡೆಯುತ್ತಿದೆ. ಮೀಟರ್ ಆಳವಡಿಕೆ ಕಾರ್ಯ ಬಾಕಿ ಇದೆ. ಬರುವ ತಿಂಗಳಲ್ಲಿ ಕೊನೆಗೊಳ್ಳುತ್ತದೆ ಎಂದರು. ಇದರಿಂದ ಅಸಮಾಧಾನಗೊಂಡ ಸದಸ್ಯ ಖಾದರ್ ಮತ್ತು ಉಪಾಧ್ಯಕ್ಷರ ನಡುವೆ ವಾಕ್ಸಮರ ಮುಂದುವರೆಯಿತು.
ಈಶ್ವರಮಂಗಲ ಸಂತೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪಂಚಾಯತ್ ನಿಗದಿ ಪಡಿಸಿದ ಏಕರೂಪದ ತೆರಿಗೆಯನ್ನು ಎಲ್ಲ ಸಂತೆ ವ್ಯಾಪಾರಿಗಳು ನೀಡಬೇಕು. ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಸ್ಥಳೀಯ ಸಂತೆ ವ್ಯಾಪಾರಿಗಳನ್ನು ಕರೆಸಿ ಚರ್ಚಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಈಶ್ವರಮಂಗಲ ಪ್ರಾ.ಆರೋಗ್ಯ ಕೇಂದ್ರದ ಆರೋಗ್ಯ ಹಿರಿಯ ಸಹಾಯಕಿ ಚಂಚಲಾಕ್ಷಿ, ಉಮಾವತಿ ಆರೋಗ್ಯ ಮಾಹಿತಿ ನೀಡಿದರು.
ರಮೇಶ್, ಮಾಧವಿ, ಪುಷ್ಪಾವತಿ, ನಾರಾಯಣ ರೈ, ಬಾಬು, ರಮೇಶ್ ರೈ ಎ., ಇಂದಿರಾ, ಇಬ್ರಾಹಿಂ ಕೆ., ಆಯಿಷಾ, ಲಲಿತಾ, ಕೆ.ಎಂ. ಮಹಮ್ಮದ್, ಉಷಾ, ವತ್ಸಲಾ, ಲೀಲಾವತಿ, ಎಂ.ಬಿ. ಇಬ್ರಾಹಿಂ, ಸುರೇಶ್ ನಾಯ್ಕ, ವಿಜಯಾ, ಅಸ್ಮಾ ಕೊಟ್ಯಾಡಿ, ಅಬ್ದುಲ್ಲ ಕೆ., ಶೀನಪ್ಪ, ಮಲ್ಲೇಶ್, ಅಬ್ದುಲ್ ರಹಿಮಾನ್, ಚಂದ್ರಶೇಖರ್ ಉಪಸ್ಥಿತರಿದ್ದರು.
ಲೋ ವೋಲ್ಟೇಜ್ ಸಮಸ್ಯೆ
ಗ್ರಾಮದಲ್ಲಿ ಅನಿಯಮಿತ ವಿದ್ಯುತ್ ಸರಬುರಾಜು ಆಗುತ್ತಿದೆ. ಲೋವೋಲ್ಟೇಜ್ ಸಮಸ್ಯೆ ಇದೆ ಎಂದು ಸದಸ್ಯ ಮಹಮ್ಮದ್ ಕೆ.ಎಂ. ಹೇಳಿದರು. ಪರೀಕ್ಷೆ ಸಮಯವಿದ್ದು, ನಿರಂತರ ವಿದ್ಯುತ್ ನೀಡುವಂತೆ ಉಳಿದ ಸದಸ್ಯರು ಆಗ್ರಹಿಸಿದರು.