Advertisement

ಗೋಹತ್ಯೆ ನಿಷೇಧ ಪರ ಹಕ್ಕೊತ್ತಾಯ ಮಂಡಿಸಿ

01:50 PM Dec 19, 2017 | Team Udayavani |

ರಾಯಬಾಗ: ಗೋಹತ್ಯೆ ನಿಷೇಧ ನಮ್ಮ ಮುಖಂಡರು ಅಥವಾ ನಮ್ಮನ್ನಾಳುವವರ ಕೈಯಲ್ಲಿಲ್ಲ. ಜನಸಾಮಾನ್ಯರ ಕೈಯಲ್ಲಿದೆ. ಗೋವಿನ ಪರವಾಗಿ ಇಡೀ ದೇಶದ ಪ್ರತಿಯೊಬ್ಬರೂ ಹಕ್ಕೊತ್ತಾಯ ಮಂಡಿಸಿದಾಗ ಗೋಹತ್ಯೆ ನಿಷೇಧ ಸಾಧ್ಯವಾಗುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಪಾಟೀಲ ಚೌಕದಲ್ಲಿ ಅಭಯ ಯಾತ್ರೆಯ ಸಂದೇಶ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ಇದು ಜಾತಿ, ಧರ್ಮ,
ಹಣ, ರಾಜಕೀಯದಿಂದ ಮುಕ್ತವಾದ ಬೃಹತ್‌ ಆಂದೋಲನ. ದೇಶದ ಚಿತ್ರಣ ಬದಲಿಸಲು ಈ ಬೃಹತ್‌ ಆಂದೋಲನದಲ್ಲಿ
ಎಲ್ಲರೂ ಪಾಲ್ಗೊಳ್ಳೋಣ ಎಂದು ಶ್ರೀಗಳು ಕರೆ ನೀಡಿದರು.

ಗೋವಿಲ್ಲದೇ ನಾವಿಲ್ಲ; ಗೋಸಂರಕ್ಷಣೆ  ಆಗದಿದ್ದರೆ ನಮ್ಮ ಸಂಸ್ಕೃತಿ-ಪರಂಪರೆಗೆ ಧಕ್ಕೆ ಬರಲಿದೆ. ಆಳುವವರ ತಲೆ ಮೇಲೆ ಅರ್ಜಿಗಳ ಬೆಟ್ಟ ಬೀಳಲಿ. ಅರ್ಜಿಗಳ ಪ್ರವಾಹ ಹರಿಯಲಿ. ಗೋಮಾತೆಯ ಕರುಳಿನ ಕೂಗಿಗೆ ಮಕ್ಕಳಾದ ಎಲ್ಲರೂ ಸ್ಪಂದಿಸೋಣ ಎಂದರು. ಗೋಕಾಕ ಮಠದ ಶ್ರೀ ದಯಾನಂದ ಸ್ವಾಮೀಜಿ ಗೋಸಂದೇಶ ನೀಡಿ, ಆಧುನಿಕ ಬದುಕಿನಿಂದ ಗೋವಿಗೆ ಅಪಾಯ ಬಂದಿದೆ. ಗೋವಿನ ಕಡೆಗೆ ಒಲವು ಕಡಿಮೆಯಾಗುತ್ತಿರುವುದು ನಮ್ಮೆಲ್ಲರ ವಿನಾಶದ ಮುನ್ಸೂಚನೆ ಎಂದು ಎಚ್ಚರಿಸಿದರು. ಗೋವು ಅಮೂಲ್ಯ
ಪಂಚಗವ್ಯ, ಗೋರೂಚನದಂಥ ಅಮೂಲ್ಯ ವಸ್ತುಗಳನ್ನು ನೀಡುತ್ತದೆ. ಇದನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.

ಆದಿಜಾಂಬವ ಸಂಸ್ಥಾನದ ಶ್ರೀ ಅನಂತಾನಂದ ಸ್ವಾಮೀಜಿ ಮಾತನಾಡಿದರು. ಇದಕ್ಕೂ ಮುನ್ನ ಪಟ್ಟಣದ ವಿವಿಧ
ಗಲ್ಲಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಯಾತ್ರೆ ಸಂಚಾಲಕ ಶ್ರೀನಾಥ ಸಾರಂಗ, ಕಲ್ಲಪ್ಪ ಹಾರೋಗೇರಿ, ಸಾವಂತ ನಾಯಿಕ, ಮಹೇಶ್‌ ಪಾಟೀಲ, ಸುಭಾಸ್‌ ನಾಯಿಕ್‌, ವಿನಾಯಕ ತಲವಟ್ಟ, ಉದಯ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next