ವಿಜಯಪುರ: ರಾಜ್ಯದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಮತೀಯ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸ್ಥಿತಿಯಲ್ಲಿ ದುಂಡಾವರ್ತನೆ ಮಾಡುವವರನ್ನು ಬಂಧಿಸಿ ಕ್ರಮ ಕೈಗೊಳ್ಳುವ ಅಭಯ ನೀಡುವ ಬದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತೀಯ ಗೂಂಡಾಗಿರಿ ಸಮರ್ಥಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿತು.
ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಭಗವಾನರೆಡ್ಡಿ, ಜೂ. 22ರಂದು ಕೊಪ್ಪಳದಲ್ಲಿ ದಲಿತ ಯುವಕನ ಮೇಲೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಯಿತು. 28ರಂದು ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಿ ಕೊಲ್ಲಲಾಯಿತು. ಅ.12ರಂದು 14 ವರ್ಷದ ಬಾಲಕನೊಬ್ಬ ತರಗತಿ ಕೋಣೆಯಲ್ಲಿ ಟೋಪಿ ಹಾಕಿದಕ್ಕೆ ಬಾಲಕನ್ನು ಥಳಿಸಲಾಯಿತು. ಕರಾವಳಿ ಕರ್ನಾಟಕದಲ್ಲಿ ಕಳೆದ 6 ತಿಂಗಳಿಂದ ದಿನೇ ದಿನೇ ಹಿಂಸಾಚಾರ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಬದಲಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂಥ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದ ಸರ್ವ ಧರ್ಮದ ಜನರ ಪರವಾಗಿ ಕೆಲಸ ಮಾಡುವ ಸ್ಥಾನದಲ್ಲಿರುವ ಮುಖ್ಯಮಂತ್ರಿಯೇ ಹೀಗೆ ಮಾತನಾಡಿದರೆ ರಾಜ್ಯದ ಜನರ ರಕ್ಷಣೆ ಹೇಗೆ ಸಾಧ್ಯ?. ಇಂಥ ನಡೆಗಳು ಸರ್ಕಾರ ಬಲಪಂಥೀಯ ದಿಕ್ಕಿನತ್ತ ಸಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಮತೀಯ ಗಲಭೆಗಳ ಕುರಿತು ನೀಡಿರುವ ಹೇಳಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಶ್ರೀನಾಥ ಪೂಜಾರಿ ಮಾತನಾಡಿ, ಮತೀಯ ಸೌಹಾರ್ದಕ್ಕೆ ಹೆಸರಾದ ಕರ್ನಾಟಕ ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಾಗಿ ಕಾಣುತ್ತಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಕೋಮು ಗಲಭೆಗಳು ಹೆಚ್ಚಾಗಿವೆ. ಬಲಪಂಥೀಯರು ಏನು ತಪ್ಪು ಮಾಡಿದರೂ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಮುಸ್ಲಿಮರು, ದಲಿತರು ಏನಾದರು ಮಾಡಿದರೆ ಅವರ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಿ, ಬಂಧಿಸುವ ಕೆಲಸ ಮಾಡುತ್ತದೆ. ನೈತಿಕ ಪೊಲೀಸ್‌ಗಿರಿಯನ್ನು ಸರ್ಕಾರ ಪರೋಕ್ಷವಾಗಿ ಬೆಂಬಲಿಸುತ್ತಿದೆ. ದಸರಾದಲ್ಲಿ ಹಬ್ಬದ ಸಮಯಲ್ಲಿ ಪೊಲೀಸರು ಆಯುಧ ಪೂಜೆ ಹೆಸರಿನಲ್ಲಿ ಕೇಸರಿ ಪೋಷಾಕು ಧರಿಸಿ ಪೂಜೆ ಮಾಡುವ ಕೆಲಸ ಮಾಡಿದರು. ಪೊಲೀಸ್ ಠಾಣೆಯಲ್ಲಿ ಸಹ ಬಲಪಂಥಿಯತ್ತ ಸಾಗುವುದು ಕಾಣುತ್ತದೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಡಿಸಿ ರಮೇಶ ಕಳಸದ ಮನವಿ ಸ್ವೀಕರಿಸಿದರು. ಈ ವೇಳೆ ಟಿಯೊಲ ಮಚಾದೊ, ಜೀವನ ಜೇಮ್ಸ್, ಭೀಮಸಿ ಕಲಾದಗಿ, ಜಮಾತೆ ಇಸ್ಲಾಮ್‌ನ ನಾಸಿರ, ನಿರ್ಮಲಾ ಹೊಸಮನಿ, ಭರತಕುಮಾರ, ಅತಾವುಲ್ಲಾ ದ್ರಾಕ್ಷಿ, ಕಲಿಪಾ, ಸದಾನಂದ ಮೋದಿ, ಅಕ್ರಂ ಮಾಶ್ಯಾಳಕರ, ಅಮೃತ, ಬಿಗೌಡು, ಶರಣಪ್ಪ, ಕೃಷ್ಣ ಜಾಧವ, ಉಮೇಶ ರುದ್ರಮುನಿ, ಫರ್ಜಾನಾ ಜಮಾದಾರ, ಟೀನಾ, ಬಾಳು ಜೇವೂರ, ರಿಜ್ವಾನ ಮುಲ್ಲಾ, ಎಸ್.ಎಸ್. ಕಾದ್ರಿ, ಪೀರಜಾದೆ, ಹಮೀದಾ ಪಟೇಲ ಸೇರಿದಂತೆ ಇತರರು ಉಪಸ್ಥಿತರಿದ್ದರು.