Advertisement

ಅಖಂಡತೆಗೆ ಪ್ರಗತಿ ಉತ್ತರ 

06:00 AM Aug 01, 2018 | Team Udayavani |

ಬೆಳಗಾವಿ: ಅಸಮಾನತೆ ಹಾಗೂ ಅನ್ಯಾಯದ ವಿರುದ್ಧ ಸಿಡಿದೆದ್ದಿರುವ ಉತ್ತರ ಕರ್ನಾಟಕದ ಜನತೆ ಮಠಾಧೀಶರ ನೇತೃತ್ವ ದಲ್ಲಿ ಸುವರ್ಣ ವಿಧಾನಸೌಧದ ಬಳಿ ಮಂಗಳವಾರ ಸಮ್ಮಿಶ್ರ ಸರಕಾರದ ವಿರುದ್ಧ ಧ್ವನಿ ಎತ್ತಿದರು. ಎಲ್ಲ ಸರಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದರಿಂದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಮೂಡುತ್ತಿದೆ. ಇದು ನಿವಾರಣೆಯಾಗಲು ಸರಕಾರ ಈ ಭಾಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಬಜೆಟ್‌ ಮಂಡಿಸಬೇಕು. ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸ‌ಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

Advertisement

ಉತ್ತರ ಕರ್ನಾಟಕ ವಿಕಾಸ ವೇದಿಕೆ ಆಶ್ರಯದಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ 60ಕ್ಕೂ ಹೆಚ್ಚು ಮಠಾಧೀಶರು ಹಮ್ಮಿಕೊಂಡಿದ್ದ ಸಾಂಕೇತಿಕ ಧರಣಿಯಲ್ಲಿ  “ಪ್ರತ್ಯೇಕ ರಾಜ್ಯ ಬಯಕೆ ನಮ್ಮದಲ್ಲ. ಅನ್ಯಾಯ ಹಾಗೂ ಅಸಮಾನತೆ ಸರಿಪಡಿಸಬೇಕು. ಇಲ್ಲದಿದ್ದರೆ ಪ್ರತ್ಯೇಕತೆ ಧ್ವನಿ ಗಟ್ಟಿಗೊಳಿಸಬೇಕಾದೀತು’ ಎಂಬ ಸಂದೇಶ ರವಾನಿಸಿದರು. ಅಲ್ಲದೆ ಉತ್ತರ ಕರ್ನಾಟಕ ಭಾಗದ ರಾಜಕಾರಣಿಗಳ ನಿರ್ಲಕ್ಷ್ಯದಿಂದಲೇ ಈ ಪರಿಸ್ಥಿತಿ ಬಂದಿದೆ ಎಂದರು. ಈ ಧರಣಿಯಲ್ಲಿ ಭಾಗವಹಿಸಿದ್ದ ಮಠಾಧೀಶರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ವಾದ ಮಂಡಿಸಲಿಲ್ಲ.    

ಆದರೆ ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಜನರಲ್ಲಿ ಪ್ರತ್ಯೇಕತೆಯ ಭಾವನೆ ಇನ್ನಷ್ಟು ಗಟ್ಟಿಯಾಗುತ್ತದೆ. ಆಗ ಮಠಾಧೀಶರೂ ಇದಕ್ಕೆ ಕೈಜೋಡಿಸಬೇಕಾದ ಸಂದರ್ಭ ಬರಬಹುದು. ಅಂತಹ ಸ್ಥಿತಿಗೆ ಸರಕಾರ ಅವಕಾಶ ಮಾಡಿಕೊಡಬಾರದು ಎಂದು ಖಡಕ್‌ ಎಚ್ಚರಿಕೆ ನೀಡಿದರು. ಈ ಪ್ರತಿಭಟನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಬಿ. ಎಸ್‌. ಯಡಿಯೂರಪ್ಪ ಭಾಗವಹಿಸಿದ್ದರು.

ನಿರ್ಲಕ್ಷ್ಯ ಧೋರಣೆಗೆ ಸರಕಾರಗಳೊಂದಿಗೆ ಇಲ್ಲಿನ ಜನಪ್ರತಿನಿಧಿಗಳೂ ನೇರ ಕಾರಣ. ನಮ್ಮ ಶಾಸಕರು ಒಂದಾಗಿ ವಿಧಾನಸೌಧದಲ್ಲಿ ಗಟ್ಟಿಧ್ವನಿ ಎತ್ತಿದ್ದರೆ ಹಲವಾರು ವರ್ಷಗಳಿಂದ ನಡೆಯುತ್ತ ಬಂದಿರುವ ತಾರತಮ್ಯ ನಿವಾರಣೆಯಾಗುತ್ತಿತ್ತು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಎಚ್ಚರಿಸಿದರು. ಇದಕ್ಕೆ ಎಲ್ಲ ಮಠಾಧೀಶರಿಂದ ಸರ್ವಾನುಮತದ ಸಹಮತ ವ್ಯಕ್ತವಾಯಿತು.

ಅಖಂಡತೆಗೆ ಹೋರಾಡಿದ ನಾಡಿನಲ್ಲಿ ಪ್ರತ್ಯೇಕ ರಾಜ್ಯದ ಸಣ್ಣ ದನಿ ಕೇಳುತ್ತಿರುವುದು ಆತಂಕದ ವಿಷಯವೇ. ಆದ್ದರಿಂದ ಇನ್ನಷ್ಟು ಸಮಯವನ್ನು ಸರಕಾರಗಳಿಗೆ ನೀಡಿ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಕಾಯ್ದು ನೋಡುತ್ತೇವೆ. ಅದಾಗದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ ಅನಿವಾರ್ಯ ಎಂದು ಹಂದಿಗುಂದ ಶಿವಾನಂದ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ|ಸಿದ್ಧರಾಮ ಸ್ವಾಮೀಜಿ ಸಹಿತ ಅನೇಕ ಮಠಾಧೀಶರು ಸ್ಪಷ್ಟಪಡಿಸಿದರು.

Advertisement

15 ದಿನ ಕಾಯಿರಿ: ಬಿಎಸ್‌ವೈ
ಬೆಳಗಾವಿ: “ಕೇವಲ 15 ದಿನ ಕಾದು ನೋಡಿ, ಏನೇನಾಗುತ್ತೆ ಅಂತ ಗೊತ್ತಾ ಗು ತ್ತದೆ’ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಮ್ಮಿಶ್ರ ಸರಕಾರ ಅವಧಿ ಪೂರ್ಣ ಮಾಡುವುದರ ಬಗ್ಗೆ ಅನುಮಾನ ಇದೆ. ಮುಂದೆ ಏನಾಗುತ್ತೆ ಎಂದು ಇನ್ನು 15 ದಿನ ಕಾದು ನೋಡಿ. 104 ಶಾಸಕರಿರುವ ಬಿಜೆಪಿಯಿಂದ ಸರಕಾರ ರಚಿಸುವ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು’ ಎಂದರು. ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಶ್ರೀರಾಮುಲು ಹಾಗೂ ಉಮೇಶ ಕತ್ತಿ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಪ್ರತ್ಯೇಕ ರಾಜ್ಯ ಮಾಡಬೇಕೆಂಬ ಉದ್ದೇಶ ಅವರಿಗಿಲ್ಲ ಎಂದರು.

ಪ್ರತ್ಯೇಕ ಧ್ವಜ ಪ್ರದರ್ಶನ ಯತ್ನ
ಉತ್ತರ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಅಡಿವೇಶ ಇಟಗಿ ಕೆಲವು ಮಠಾಧೀಶರ ಕೈಯಲ್ಲಿ ಪ್ರತ್ಯೇಕ ರಾಜ್ಯದ ಧ್ವಜ ನೀಡಿ ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನ ಸೆಳೆಯಲು ಮುಂದಾದರು. ಇದರಿಂದ ಅಸಮಾಧಾನಗೊಂಡ ನಾಗನೂರು ಶ್ರೀ, ಹುಕ್ಕೇರಿ ಹಿರೇಮಠದ ಸ್ವಾಮೀಜಿ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡು ಧ್ವಜವನ್ನು ಪೊಲೀಸರಿಗೆ ಒಪ್ಪಿಸಿದರು. ಇದಲ್ಲದೆ ಹೋರಾಟ ಸಮಿತಿ ಮುಖಂಡ ನಾಗೇಶ ಗೋಲಶೆಟ್ಟಿ ಮಹದಾಯಿ ವಿಷಯ ಪ್ರಸ್ತಾವಿಸಿ ವೇದಿಕೆಯಲ್ಲಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಮುಜುಗರ ಉಂಟು ಮಾಡಿದರು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಅವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಬೆಳಗಾವಿಯೂ ರಾಜಧಾನಿ
ಬೆಂಗಳೂರು: ದಿನೇ ದಿನೆ ಹೆಚ್ಚು ತ್ತಿರುವ ಉತ್ತರ ಕರ್ನಾ ಟಕದ ಜನರ ಆಕ್ರೋಶವನ್ನು ತಣಿಸುವ ಅಂಗವಾಗಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರ ಸ್ವಾಮಿ, ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ. ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ ನೇತೃತ್ವದಲ್ಲಿ ವಿಧಾನಸೌಧಕ್ಕೆ ಆಗಮಿಸಿದ್ದ ಪ್ರತ್ಯೇಕ ರಾಜ್ಯ ಹೋರಾಟಗಾರರೊಂದಿಗೆ ಚರ್ಚಿಸಿದ ಸಿಎಂ,ಬೆಳಗಾವಿಯಲ್ಲಿರುವ ಸುವರ್ಣ ವಿಧಾನ ಸೌಧ ನಿರಂತರವಾಗಿ ಚಟುವಟಿಕೆಯಿಂದ ಇರು ವಂತೆ ನೋಡಿಕೊಳ್ಳಲು ಉತ್ತರ ಕರ್ನಾಟಕಕ್ಕೆ ಸಂಬಂಧಿಸಿರುವ ಕೆಲವು ಇಲಾಖೆಗಳನ್ನು ಸುವರ್ಣ ಸೌಧಕ್ಕೆ ವರ್ಗಾಯಿಸಲು ತೀರ್ಮಾನಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next