ಹಾಸನ: ಗೊರೂರಿನ ಹೇಮಾವತಿ ನದಿಯಿಂದ ಹಾಸನ ನಗರಕ್ಕೆ ಕುಡಿಯುವ ನೀರು ಪೂರೈಸುವ 119 ಕೋಟಿ ರೂ. ವೆಚ್ಚದ ಅಮೃತ್ ಯೋಜನೆ ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಯೋಜನೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ವಿವಿಧ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಅಮೃತ್ ಯೋಜನೆ ಚಾಲನೆಯಲ್ಲಿದೆ. ಕೆಲವೇ ತಿಂಗಳಿನಲ್ಲಿ ಕಾಮಗಾರಿ ಡಿಸೆಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ಬಡಾವಣೆ ಪೂರ್ಣ: ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹೊಸ ಬಡಾವಣೆ ನಿರ್ಮಾಣದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗುವುದು. ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸರ್ಕಾರಕ್ಕೆ ಪ್ರಸ್ತಾವನೆ ಬಂದ ತಕ್ಷಣ ಸಂಪುಟ ಅನುಮೋದನೆ ಪಡೆದು ಬಡಾವಣೆ ನಿರ್ಮಾಣದ ಕಾಮಗಾರಿ ಆರಂಭಿಸಲಾಗುವುದು ಡಿಸೆಂಬರ್ ಒಳಗೆ ಬಡಾವಣೆ ನಿರ್ಮಾಣ ಆರಂಭವಾಗ ಬಹುದು. ಸಾರ್ವಜನಿಕರು ನಿವೇಶನ ಕೋರಿಪ್ರಾಧಿಕಾರಕ್ಕೆ ಪಾವತಿಸಿರುವ ನೋಂದಣಿ ಶುಲ್ಕದ ಮೊತ್ತ ಪ್ರಾಧಿಕಾರದಲ್ಲಿ ಸುರಕ್ಷಿತವಾಗಿದೆ. ಸಾರ್ವಜನಿಕರ ಹಣವನ್ನು ಜವಾಬ್ದಾರಿಯಿಂದ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಅನುಮತಿ ಕೊಡಬಾರದು: ಖಾಸಗಿಯವರು ನಿರ್ಮಿಸುವ ಸಣ್ಣ ಬಡಾವಣೆಗಳಿಗೆ ಅನುಮತಿ ಕೊಡಬಾರದು. ಅಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸದೆ ನಿವೇಶನ ಮಾರಾಟ ಮಾಡಿ ಖಾಸಗಿಯವರು ಕೈ ತೊಳೆದುಕೊಳ್ಳುತ್ತಾರೆ. ಭವಿಷ್ಯದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಕಷ್ಟವಾಗುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರಗಳಿಂದಲೇ ಬಡಾವಣೆ ನಿರ್ಮಾಣ ಸೂಕ್ತ.ಈ ನಿಟ್ಟಿನಲ್ಲಿ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸುವ ಬಡಾವಣೆಗೆ ಎಲ್ಲ ನೆರವು ನೀಡಿ ಮಾದರಿ ಬಡಾವಣೆ ನಿರ್ಮಾಣ ಮಾಡಲಾಗುವು ಎಂದು ಸ್ಪಷ್ಟಪಡಿಸಿದರು.
ಮಳೆಗಾಲ ಮುಗಿದ ನಂತರ ರಸ್ತೆ ಅಭಿವೃದ್ಧಿ: ವಿವಿಧ ಪ್ರಾಧಿಕಾರಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಖರ್ಚುವೆಚ್ಚದ ಮಾಹಿತಿ ನೀಡಲೂ ಹೇಳಿದ್ದೇನೆ. ನಗರ ಪ್ರದೇಶಗಳಲ್ಲಿ ರಸ್ತೆಗಳ ದುಸ್ಥಿತಿಯ ಬಗ್ಗೆ ಮಾಹಿತಿ ಇದೆ. ಈಗ ಮಳೆಗಾಲವಿರುದರಿಂದ ರಸ್ತೆಗಳ ಡಾಂಬರೀಕರಣ ಮಾಡಲಾಗದು. ಮಳೆಗಾಲ ಮುಗಿದ ತಕ್ಷಣ ರಸ್ತೆಗಳ ಅಭಿವೃದ್ಧಿ ಹಾಗೂ ಡಾಂಬರೀಕರಣ ಕೈಗೆತ್ತಿಕೊಳ್ಳಲು ಸೂಚನೆ ನೀಡಿಲಾಗಿದೆ ಎಂದು ಸಚಿವರು ತಿಳಿಸಿದರು.
ಸಮರ್ಪಕ ಕೆಲಸ ಮಾಡಿ: ಕೋವಿಡ್ ಆರ್ಭಟ ದಿನೇ, ದಿನೆ ಹೆಚ್ಚುತ್ತಿದೆ. ಸೋಂಕು ಹರಡುವುದನ್ನು ತಡೆಯಲು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ. ಜಿಲ್ಲಾ ಮಟ್ಟದಲ್ಲಿಯೂ ಕೋವಿಡ್ ನಿಯಂತ್ರಣಕ್ಕೆ ಸಮರ್ಪಕ ಕೆಲಸ ಮಾಡಬೇಕು ಎಂದು ಸೂಚಿಸಿದ್ದೇನೆ ಎಂದರು. ಕೋವಿಡ್ ಮತ್ತು ಲಾಕ್‌ಡೌನ್‌ನಿಂದಾಗಿ ಆರ್ಥಿಕ ಪರಿಸ್ಥಿತಿ ಏರುಪೇರಾಗಿದೆ. ಆ ನಿಟ್ಟಿನಲ್ಲಿ ಸಿಎಂ ತೀರ್ಮಾನ ಕೈಗೊಂಡಿದ್ದಾರೆ. ನಮ್ಮ ಇಲಾಖೆಗೆ ಕೊರತೆ ಆಗದಂತೆ ಕ್ರಮ
ಕೈಗೊಂಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಸಿ.ಎನ್.ಬಾಲಕೃಷ್ಣ, ಪ್ರೀತಂ ಜೆ.ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ,ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ ಮೂರ್ತಿ, ಜಿಲ್ಲಾಧಿಕಾರಿ ಆರ್.ಗಿರೀಶ್, ಪ್ರಾಧಿಕಾರದ ಆಯುಕ್ತ ರಮೇಶ್ ಇದ್ದರು.