Advertisement

10 ತಿಂಗಳಲ್ಲಿ  ಆದರ್ಶ ಗ್ರಾಮಗಳಿಗೆ ಸೌಕರ್ಯ ಕಲ್ಪಿಸಿ

05:47 PM Jun 05, 2022 | Team Udayavani |

ತುಮಕೂರು: ಜಿಲ್ಲೆಯಲ್ಲಿ ಆಯ್ಕೆಯಾಗಿರುವ 5 ಪಂಚಾಯ್ತಿಗಳ ಸಂಸದರ ಆದರ್ಶ ಗ್ರಾಮಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸಬೇಕು ಎಂದು ಸಂಸದ ಜಿ.ಎಸ್‌.ಬಸವರಾಜ್‌ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಸದರ ಆದರ್ಶ ಗ್ರಾಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆ ಆಗಿರುವ ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿ, ತಿಪಟೂರು ತಾಲೂಕಿನ ಅರಳಗುಪ್ಪೆ, ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ, ಕೊರಟಗೆರೆ ತಾಲೂಕಿನ ಕುರಂಕೋಟೆ ಹಾಗೂ ಮಧುಗಿರಿ ತಾಲೂಕಿನ ಗಂಜಲಗುಂಟೆ ಗ್ರಾಮಗಳ ಜನರ ಜೀವನಮಟ್ಟ ಸುಧಾರಿಸಲು ಅಗತ್ಯ ಸೌಕರ್ಯ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾದರಿ ಗ್ರಾಮಗಳಾಗಿ ರೂಪಿಸಬೇಕು: ಬರುವ 10 ತಿಂಗಳೊಳಗೆ ಈ ಗ್ರಾಮಗಳಲ್ಲಿ ಪ್ರಗತಿ ಸಾಧಿಸಬೇಕು. ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿ ಪಡಿಸುವ ಮೂಲಕ ಮಾದರಿ ಗ್ರಾಮಗಳಾಗಿ ರೂಪಿಸಬೇಕು ಎಂದು ಪಿಡಿಒಗಳಿಗೆ ನಿರ್ದೇಶನ ನೀಡಿದರು.

ಸಕಲ ಸೌಲಭ್ಯ ಒದಗಿಸಿ: ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ನಿಗದಿತ ಅವಧಿಯೊಳಗಾಗಿ ಆದರ್ಶ ಗ್ರಾಮಗಳ ಮನೆಗಳಿಗೆ ಕಡ್ಡಾಯವಾಗಿ ವಿದ್ಯುತ್‌ ಸಂಪರ್ಕ, ನೀರಿನ ಸೌಲಭ್ಯ, ಶೌಚಾಲಯ ಒದಗಿಸಬೇಕು. ಗ್ರಾಮಗಳ ರಸ್ತೆ, ಕೆರೆ, ಶಾಲಾ ಆವರಣದ ಗೋಡೆ, ಅಂಗನವಾಡಿ ಆವರಣದ ಗೋಡೆ, ಚರಂಡಿ ಕಾಮಗಾರಿ ಕೈಗೊಳ್ಳುವುದಲ್ಲದೆ, ಡಿಜಿಟಲ್‌ ಲೈಬ್ರರಿ ಸೌಲಭ್ಯ ಒದಗಿಸಬೇಕೆಂದು ಪಿಡಿಒಗಳಿಗೆ ಸೂಚಿಸಿದರು.

ಸ್ವಚ್ಛತೆ ಕಾಪಾಡಿಕೊಳ್ಳಿ: ಸಂಸದರ ಆದರ್ಶ ಗ್ರಾಮ ದಡಿ ಆಯ್ಕೆಯಾಗಿರುವ ಗ್ರಾಮಗಳಲ್ಲಿ ಬಾಲಕಾರ್ಮಿ ಕರಿದ್ದಲ್ಲಿ, ಶಾಲೆ ಬಿಟ್ಟ ಮಕ್ಕಳಿದ್ದಲ್ಲಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರಬೇಕು. ಗಿಡ-ಮರಗಳನ್ನು ಬೆಳೆಸಬೇಕು. ಜನರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಣೆ ಮಾಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಾಮಾನ್ಯ ಸೇವಾ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಬೇಕು ಎಂದು ತಿಳಿಸಿದರು.

Advertisement

ಮತ್ತಿತರ ಸೌಲಭ್ಯ ಒದಗಿಸಿ: ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್‌ ಮಾತನಾಡಿ, ಸಂಸದರ ಆದರ್ಶ ಗ್ರಾಮಗಳಲ್ಲಿ ಹಳ್ಳಿಯ ಮಾರುಕಟ್ಟೆ, ಸಣ್ಣ ಬ್ಯಾಂಕ್‌, ಎಟಿಎಂ, ಅಂಚೆ ಕಚೇರಿ, ಬ್ರಾಡ್‌ಬ್ಯಾಂಡ್‌ ವ್ಯವಸ್ಥೆ, ದೂರವಾಣಿ ಸಂಪರ್ಕ, ಮತ್ತಿತರ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಯೋಜನಾ ನಿರ್ದೇಶಕ ನರಸಿಂಹಮೂರ್ತಿ ಸಭೆಗೆ ಯೋಜನೆಯ ಪ್ರಗತಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಅತೀಕ್‌ ಪಾಷಾ, ಆಯ್ದ 5 ಗ್ರಾಪಂನ ಪಿಡಿಒ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next