Advertisement

ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಶಾಸಕರ ಫರ್ಮಾನು

02:14 PM Sep 16, 2018 | |

ಪುತ್ತೂರು: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಜನರಿಗೆ ಅಪಾರ ನಿರೀಕ್ಷೆಗಳಿದ್ದು, ಅವರು ಎಲ್ಲವನ್ನೂ ಗಮನಿಸುತ್ತಾರೆ. ಕೆಡಿಪಿ ಸಭೆಗೆ ಎಲ್ಲ ಇಲಾಖೆಗಳ ಪ್ರಮುಖ ಅಧಿಕಾರಿಗಳೇ ಬರಬೇಕು. ಪಕ್ಕಾ ಅಂಕಿ-ಸಂಖ್ಯೆಗಳನ್ನೇ ನೀಡಬೇಕು. ಕೃಷಿಕ ವರ್ಗಕ್ಕೆ ಯಾವುದೇ ಅನ್ಯಾಯ ಆಗಬಾರದು. – ಇದು ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರ ಕಾಳಜಿ ಭರಿತ ಖಡಕ್‌ ಸಂದೇಶ.

Advertisement

ಶಾಸಕರಾದ ಬಳಿಕ ಪ್ರಥಮ ಕೆಡಿಪಿ ಸಭೆ ನಡೆಸಿದ ಸಂಜೀವ ಮಠಂದೂರು ಶಿಸ್ತಿನ ಹಾಗೂ ಪೂರ್ಣ ಮಾಹಿತಿಯ ಸಭೆಗೆ ಒತ್ತು ನೀಡಿದರು. ಪಾಲನ ವರದಿಗೇ ಸುದೀರ್ಘ‌ ವೇಳೆ ವ್ಯಯಿಸದಂತೆ ಒಂದೊಂದೇ ಇಲಾಖೆಗಳ ಪ್ರಗತಿ ವಿಮರ್ಶೆ ಮಾಡಿ, ಗಮನ ಸೆಳೆದರು. ಸುಳ್ಯ ಶಾಸಕ ಎಸ್‌. ಅಂಗಾರ ಅವರೂ ನೂತನ ಶಾಸಕರಿಗೆ ಸಾಥ್‌ ನೀಡಿದರು.

ಕೆಡಿಪಿ ಸಭೆಯೆಂದರೆ ಮಾರುಕಟ್ಟೆಯಲ್ಲ. ಸಭೆಯ ಎಲ್ಲ ಮಾಹಿತಿಗಳೂ ದಾಖಲಾಗುತ್ತವೆ. ಇಲಾಖೆಗಳ ಮುಖ್ಯ ಅಧಿಕಾರಿಗಳು ಯಾರನ್ನೋ ಸಭೆಗೆ ಕಳುಹಿಸಿ ತಪ್ಪಿಸಿ ಕೊಳ್ಳುವುದು ಸರಿಯಲ್ಲ. ಪ್ರಭಾರ ವಹಿಸಿಕೊಂಡವರಾದರೆ ಸರಿ. ಮಾಹಿತಿಗಳು ನಿಖರವಾಗಿರಬೇಕು ಎಂದು ತಾಕೀತು ಮಾಡಿದರು. ಶಿಕ್ಷಣ ಇಲಾಖೆಯ ಬಿಇಒ ಪರವಾಗಿ ಬಂದ ಅಧಿಕಾರಿ ಸಭೆಯಿಂದ ನಿರ್ಗಮಿಸಿದರು. ಪಶು ಇಲಾಖೆಯ ಮುಖ್ಯ ಅಧಿಕಾರಿಯೇ ಸಭೆಗೆ ಆಗಮಿಸಿದರು.

ರೈತರಿಗೆ ಅನ್ಯಾಯ ಮಾಡಬೇಡಿ
ಜಿಲ್ಲೆಯ ಅದರಲ್ಲೂ ಪುತ್ತೂರಿನ ಆರ್ಥಿಕತೆ ರೈತ ವರ್ಗದ ಬದುಕಿನ ಮೇಲೆ ಅವಲಂಭಿಸಿದೆ. ಹಾಗಾಗಿ ರೈತರ ಅಡಿಕೆ ಬೆಳೆಗೆ ಕೊಳೆರೋಗದಿಂದ ಆಗಿರುವ ನಷ್ಟದ ಕುರಿತು ಸಮರ್ಪಕವಾದ ಸರ್ವೆ ನಡೆಯಬೇಕು. ಮಾನವೀಯ ದೃಷ್ಟಿ ಇಟ್ಟುಕೊಂಡು ಸಮೀಕ್ಷೆ ಮಾಡಬೇಕು. ರೈತರಿಗೆ ಅನ್ಯಾಯವಾಗಬಾರದು ಎಂದು ಮಠಂದೂರು ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊಳೆರೋಗಕ್ಕೆ ಅರ್ಜಿ ಸಲ್ಲಿಸಲು ಸೆ.15 ಕೊನೆ ದಿನವಾಗಿದ್ದು, ಬಹಳಷ್ಟು ಮಂದಿ ರೈತರು ಇನ್ನೂ ಅರ್ಜಿ ಸಲ್ಲಿಸಲು ಬಾಕಿಯಾಗಿದ್ದಾರೆ. ಕೊಳೆರೋಗದಿಂದ 10,500 ಹೆಕ್ಟೇರ್‌ ವ್ಯಾಪ್ತಿಯ ಅಡಕೆ ತೋಟಕ್ಕೆ ಹಾನಿಯಾಗಿದೆ. ಅರ್ಜಿ ಸಲ್ಲಿಸಲು ಇನ್ನೂ ಕಾಲಾವಕಾಶ ನೀಡುವಂತೆ ನಿರ್ಣಯಿಸಿ ಸರಕಾರಕ್ಕೆ ವಿನಂತಿ ಮಾಡೋಣ ಎಂದು ಶಾಸಕರು ತಿಳಿಸಿದರು.

Advertisement

ಆಹಾರ ಬೆಳೆ ಭತ್ತ ಬೆಳೆಯ ನಷ್ಟಕ್ಕೆ ಎಷ್ಟು ಪರಿಹಾರ ನೀಡಿದ್ದೀರಿ ಎಂದು ಪ್ರಶ್ನಿಸಿದ ಶಾಸಕರು, ಪ್ರಮುಖ ಆಹಾರ ಬೆಳೆಯ ಪರಿಹಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಯ ಶಾಸಕ ಎಸ್‌. ಅಂಗಾರ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ, ಉಪಾಧ್ಯಕ್ಷೆ ರಾಜೇಶ್ವರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ, ತಾ.ಪಂ. ಇಒ ಜಗದೀಶ್‌, ತಹಶೀಲ್ದಾರ್‌ ಅನಂತ ಶಂಕರ್‌, ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ಉಪಸ್ಥಿತರಿದ್ದರು.

ಕೊಳವೆ ಬಾವಿಗೆ ಅವಕಾಶ ನೀಡಿ
ಈ ಹಿಂದೆ ಜಿಲ್ಲಾಡಳಿತ ಕೊಳವೆ ಬಾವಿ ಕೊರೆಯಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ಸಮಸ್ಯೆಯಾಗಿದೆ. ಕೊಳವೆ ಬಾವಿ ಕೊರೆಸಿದ ರೈತರಿಗೆ ಪಂಪ್‌ ಅಳವಡಿಸಲು ಮೆಸ್ಕಾಂ ಹಾಗೂ ಕಂದಾಯ ಇಲಾಖೆ ಅನುಮತಿ ನೀಡುತ್ತಿಲ್ಲ ಎಂಬ ವಿಚಾರದ ಚರ್ಚೆ ನಡೆದು, ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಹಾಗೂ ಪಂಪ್‌ ಆಳ ವಡಿಸಲು ಕೂಡಲೇ ಅನುಮತಿ ನೀಡಲು ಶಾಸಕರು ಸೂಚನೆ ನೀಡಿದರು.

ಸದನದ ಗಮನಕ್ಕೆ ತರುವ ಎಚ್ಚರಿಕೆ
ಎರಡು ವರ್ಷಗಳಿಂದ ಚರ್ಚೆಯಾಗುತ್ತಿರುವ ಉಪನೋಂದಣಿ ಇಲಾಖೆಯ ಸ್ಥಳಾಂತರ ವಿಚಾರ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿಯೂ ಪ್ರತಿಧ್ವನಿಸಿತು. ಪುತ್ತೂರು ಹಾಗೂ ಸುಳ್ಯ ಶಾಸಕರು ಇಲಾಖೆಯ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸದನದಲ್ಲಿ ಧ್ವನಿ ಎತ್ತುವ ಎಚ್ಚರಿಕೆ ನೀಡಿದರು.

ಕಂದಾಯ ಸಚಿವರ ಲಿಖಿತ ಆದೇಶಕ್ಕೂ ನೀವು ಬೆಲೆ ಕೊಡುತ್ತಿಲ್ಲ. ವಿಧಾನಸಭೆಯಲ್ಲಿ ಸಚಿವರು ಆದೇಶ ನೀಡಿ 3 ತಿಂಗಳಾದರೂ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ. ಏಕೆ ಸ್ಥಳಾಂತರ ಮಾಡುತ್ತಿಲ್ಲ ಎಂದು ಶಾಸಕ ಅಂಗಾರ ಹಾಗೂ ಸಂಜೀವ ಮಠಂದೂರು ಅಧಿಕಾರಿಯನ್ನು ಪ್ರಶ್ನಿಸಿದರು. ಮಿನಿ ವಿಧಾನಸೌಧದಲ್ಲಿ ನಮಗಾಗಿ ನಿಗದಿಯಾಗಿದ್ದ ಕೋಣೆಯನ್ನು ಬೇರೆ ಇಲಾಖೆಗೆ ನೀಡಲಾಗಿದೆ ಎಂದು ದೂರಿದರು. ಮಧ್ಯಪ್ರವೇಶ ಮಾಡಿದ ತಹಶೀಲ್ದಾರ್‌ ಅನಂತಶಂಕರ್‌, ಬೇರೆ ಇಲಾಖೆಗೆ ಕೊಟ್ಟಿಲ್ಲ. ಕಂದಾಯ ಇಲಾಖೆ ಮಾತ್ರ ಅಲ್ಲಿದೆ. ನಿಮಗೆ ಮೀಸಲಿಟ್ಟಿದ್ದ ಕೋಣೆಯನ್ನು ತೆರವು ಮಾಡಿಕೊಡುತ್ತೇವೆ ಎಂದರು. ಈ ಕುರಿತು ಮಾತನಾಡಿದ ಶಾಸಕರು, ಯಾವುದೇ ನೆಪ ಅಗತ್ಯವಿಲ್ಲ. ಆಗದಿದ್ದರೆ ವಿಧಾನಸಭೆಯಲ್ಲೇ ಅದನ್ನು ಪ್ರಶ್ನೆ ಮಾಡುತ್ತೇವೆ. ಈ ಇಲಾಖೆಯ ನಿಧಾನಗತಿಯ ಕೆಲಸಗಳ ಕುರಿತು ಆರೋಪವೂ ಇದೆ. ನಾಳೆಯ ಒಳಗೆ ಸ್ಥಳಾಂತರದ ದಿನಾಂಕ ನಿಗದಿ ಮಾಡಿ ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next