Advertisement

2 ವಾರಗಳಲ್ಲಿ ಬಾಕಿ ಕೆಲಸ ಮುಗಿಸಿ

06:51 PM Sep 18, 2020 | Suhan S |

ಕೊಪ್ಪಳ: ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲ ಬಾಕಿ ಉಳಿದ ಕೆಲಸಗಳು ಇನ್ನೆರಡು ವಾರಗಳೊಳಗೆಪೂರ್ಣಗೊಳ್ಳಬೇಕೆಂದು ಕಂದಾಯ ಸಚಿವ ಆರ್‌.ಅಶೋಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ಸ್ಮಶಾನ ಜಾಗ ಇರಲೇಬೇಕು. ಸ್ಮಶಾನಜಾಗ ಇಲ್ಲದ ಗ್ರಾಮಗಳಲ್ಲಿ ಸರ್ಕಾರಿ ಜಾಗ ಗುರುತಿಸಬೇಕು. ಈ ಜಾಗವು ಗ್ರಾಮಕ್ಕೆ ಹತ್ತಿರವಾಗಿದ್ದು, ಜನ ಬಳಕೆಗೆ ಯೋಗ್ಯವಾಗಿರಬೇಕು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಬೇಕು ಎಂದರು.

ಜಿಲ್ಲೆಯಲ್ಲಿ ನಕಲಿ ಪ್ರಮಾಣ ಪತ್ರ ನೀಡಿ ಪಿಂಚಣಿ ಪಡೆಯುತ್ತಿರುವವರನ್ನುಪತ್ತೆ ಹಚ್ಚಲು ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಲು ಕೆಲವು ತಾಲ್ಲಕುಗಳು ಪ್ರಗತಿ ಸಾಧಿಸಿಲ್ಲ. 15 ದಿನಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಿ ನಕಲಿ ಪಿಂಚಣಿದಾರರನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದರೆ ಸಂಬಂ ಧಿಸಿದ ಅಧಿ ಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಕೋವಿಡ್‌-19 ಗೆ ಸಂಬಂಧಿಸಿದಂತೆ ಅಗತ್ಯ ಚಿಕಿತ್ಸೆ, ಉಪಕರಣಗಳ ಖರೀದಿಗೆ ಸರ್ಕಾರದಿಂದ ಇದುವರೆಗೆ 9 ಕೋಟಿ ಹಣ ಬಿಡುಗಡೆ ಮಾಡಿದೆ. ಇದರಲ್ಲಿ ವೆಂಟಿಲೇಟರ್‌ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಕೊಪ್ಪಳದಲ್ಲಿ ಮಾತ್ರ ಸೋಂಕು ಹೆಚ್ಚುತ್ತಿದೆ. ಇದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು. ಶೀಘ್ರ ವೆಂಟಿಲೇಟರ್‌ ಅಳವಡಿಸಬೇಕು. ಅದರ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಬೇಕು. ಅನಸ್ತೇಶಿಯಾ ತಜ್ಞರ ಕೊರತೆ ನೀಗಿಸಲು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು. ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದರು.

ಸಂತೆ, ಜನಸಂದಣಿ ಇರುವ ಪ್ರದೇಶಗಳಲ್ಲಿ ಅಧಿಕಾರಿಗಳನ್ನು ನೇಮಿಸಿ. ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದವರಿಗೆ ದಂಡ ವಿ ಧಿಸಿ.ಲಸಿಕೆ ಬರುವವರೆಗೂ ಎಲ್ಲ ರೀತಿಯ ಎಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಅಧಿಕಾರಿಗಳು ಪ್ರತಿ ಸಭೆಯಲ್ಲೂ ಕೆಲಸ ಪೂರ್ಣಗೊಳಿಸಲು ಒಂದು ವಾರ, ಹದಿನೈದು ದಿನಗಳ ಕಾಲವಕಾಶ ಕೇಳುತ್ತೀರಿ. ಆದರೆ ನೀವು ಕೇಳಿದ ಸಮಯದಲ್ಲಿ ಪೂರ್ಣವಾಗುವ ಕೆಲಸ ಅದಕ್ಕೂ ಮೊದಲು ಏಕೆ ಪೂರ್ಣಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದರು.

ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು ಮಾತನಾಡಿ, ಭತ್ತ ಬೆಳೆಯುವ ಪ್ರದೇಶ ಹಾಗೂ ಇತರೆ ಪ್ರದೇಶಗಳಲ್ಲಿ ಅಗತ್ಯದ ಆಧಾರದಲ್ಲಿ ರಸಗೊಬ್ಬರಗಳ ಹಂಚಿಕೆ ಮಾಡಿ. ಜಿಲ್ಲೆಯ ಯಾವುದೇ ಭಾಗದ ರೈತರಿಗೂ ರಸಗೊಬ್ಬರದ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

ಶಾಸಕ ಹಾಲಪ್ಪ ಆಚಾರ್‌ ಮಾತನಾಡಿ, ಯಲಬುರ್ಗಾ ತಾಲೂಕಿನಲ್ಲಿ ವೆಂಟಿಲೇಟರ್‌ ಕೊರತೆಯಿಂದ ರೋಗಿಗಳು ಸಾಯುತ್ತಿದ್ದಾರೆ. ವೆಂಟಿಲೇಟರ್‌ ಕಾರ್ಯ ಚಟುವಟಿಕೆ ಹಾಗೂ ನಿರ್ವಹಣೆಗೆ ಅಗತ್ಯ ಕ್ರಮ

ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಕುರಿತು ಒಂದು ವಾರದೊಳಗೆ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಡಿಸಿ ವಿಕಾಸ್‌ ಕಿಶೋರ್‌, ಜಿಪಂ ಸಿಇಒ ರಘುನಂದನ್‌ ಮೂರ್ತಿ, ಎಸ್ಪಿ ಜಿ.ಸಂಗೀತಾ, ಎಡಿಸಿ ಎಂ.ಪಿ. ಮಾರುತಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next