Advertisement

ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ: ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ

08:46 PM Aug 19, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಬೇಕು. ಈ ದೃಷ್ಟಿಯಿಂದ ಪರಿಣಾಮಕಾರಿ ಪ್ರಚಾರ ಕಾರ್ಯ ಹಾಗೂ ಪ್ರವಾಸಿ ತಾಣಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶುಕ್ರವಾರ ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ರಾಜ್ಯದ ಆರ್ಥಿಕ ಪ್ರಗತಿಗೆ ಹಾಗೂ ಸಾಂಸ್ಕೃತಿಕವಾಗಿಯೂ ಪ್ರವಾಸೋದ್ಯಮ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಆಯವ್ಯಯದಲ್ಲಿ ಘೋಷಿಸಿದಂತೆ ಮೈಸೂರು- ಬೇಲೂರು-ಹಳೇಬೀಡು ಹಾಗೂ ಹಂಪಿ- ಬಾದಾಮಿ- ಐಹೊಳೆ-ಪಟ್ಟದಕಲ್ಲು ಪ್ರವಾಸೋದ್ಯಮ ಸಕ್ಯುìಟ್‌ಗಳನ್ನು ಶೀಘ್ರವೇ ಅಭಿವೃದ್ಧಿಪಡಿಸಿ, ದಸರಾ ವೇಳೆಗೆ ಮೈಸೂರು ಸರ್ಕ್ಯುಟ್‌ ಹಾಗೂ ದೀಪಾವಳಿ ವೇಳೆಗೆ ಹಂಪಿ ಸರ್ಕ್ಯುಟ್‌ ಉದ್ಘಾಟನೆಗೆ ಸಿದ್ಧವಾಗಬೇಕೆಂದು ಸೂಚಿಸಿದರು. ಈ ಸರ್ಕ್ಯುಟ್‌ ನಲ್ಲಿ ಸಾಹಸ ಕ್ರೀಡೆ ಹಾಗೂ ಮನರಂಜನಾ ಚಟುವಟಿಕೆಗಳನ್ನೂ ಸೇರ್ಪಡೆಗೊಳಿಸುವಂತೆ ತಿಳಿಸಿದರು.

ಕಡಲ ತೀರದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಉತ್ತೇಜಿಸಲು ಸಿಆರ್‌ಝಡ್‌ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅನುಮೋದನೆ ಪಡೆಯಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ. ಬೀದರ್‌ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ ವಹಿಸಲಾಗುತ್ತಿದ್ದು, ಇದರೊಂದಿಗೆ ಸುರಪುರ ಕೋಟೆಯನ್ನೂ ಸೇರ್ಪಡೆಗೊಳಿಸುವಂತೆ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ಕಾಳಿ ನದಿ, ಆಲಮಟ್ಟಿ ಹಾಗೂ ಕಾವೇರಿ ನದಿ ಪ್ರದೇಶಗಳಲ್ಲಿ ಜಲಮಾರ್ಗಗಳನ್ನು ರೂಪಿಸಿ, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ರಾಜ್ಯದ 10-12 ಕೆರೆಗಳ ಬಳಿ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ, ಚಾರಣಕ್ಕೆ ಉತ್ತೇಜನ ಮೊದಲಾದ ಕ್ರಮ ಕೈಗೊಳ್ಳುವ ಮೂಲಕ ವಿದೇಶಿ ಪ್ರವಾಸಿಗರಷ್ಟೇ ಅಲ್ಲ, ಸ್ಥಳೀಯ ಪ್ರವಾಸಿಗರನ್ನೂ ಆಕರ್ಷಿಸಬೇಕೆಂದು ತಿಳಿಸಿದರು.

Advertisement

ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next