ಚಾಮರಾಜನಗರ: ಸಕಾಲ ಸೇವೆ ಹಾಗೂ ಏಕೀಕೃತ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ ನಿರ್ವಹಣಾ ವ್ಯವಸ್ಥೆಯಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಸಕಾಲ ಸೇವೆ ಹಾಗೂ ಏಕೀಕೃತ ಸಾರ್ವಜನಿಕ ದೂರು ನಿವಾರಣಾ ವ್ಯವಸ್ಥೆಯ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಕಾಲ ಸೇವೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಸಕಾಲ ಸೇವೆಯಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ವಿಳಂಬ ಮಾಡದೇ ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಅರ್ಜಿ ಸ್ವೀಕೃತಿ ಬಗ್ಗೆ ಆಯಾ ದಿನವೇ ಅಧಿಕಾರಿಗಳು ಗಮನಹರಿಸಬೇಕು. ಕಾಲಮಿತಿಯೊಳಗೆ ಸಾರ್ವಜ ನಿಕರಿಗೆ ಸೇವೆ ಲಭಿಸಬೇಕು ಎಂದು ತಿಳಿಸಿದರು.
ಕ್ರಮದ ಎಚ್ಚರಿಕೆ: ಯಾವುದೇ ಇಲಾಖೆಯಲ್ಲಿ ಅರ್ಜಿಗಳನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸ ಬಾರದು. ಸೇವೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕು. ದಾಖಲೆಗಳು ಲಭ್ಯವಾಗದಿದ್ದಲ್ಲಿ ಅಧಿಕಾರಿಗಳೇ ಅರ್ಜಿದಾರರ ಬಳಿ ತೆರಳಿ ಸೂಕ್ತ ಮಾಹಿತಿ ನೀಡಿ ದಾಖಲೆಗಳನ್ನು ಪಡೆದುಕೊಳ್ಳಬೇಕು. ಅನಗತ್ಯ ನೆಪದಿಂದ ಅರ್ಜಿಗಳಿಗೆ ಅಧಿಕಾರಿಗಳು ಪರಿಹಾರ ನೀಡದೇ ಹೋದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದರು.
ಸಕಾಲ ಕಾಯ್ದೆ ಅನುಷ್ಠಾನ: ಪ್ರತಿ ಇಲಾಖೆ ಆಯಾ ಹಂತದಲ್ಲಿಯೇ ಸಂಬಂಧಪಟ್ಟ ಪರಿಹಾರ ಕ್ರಮಗಳಿಗೆ ಮುಂದಾಗಬೇಕು. ತಾಂತ್ರಿಕ ಅಥವಾ ಬೇರೆ ಯಾವುದೇ ಸಮಸ್ಯೆಗಳು ಕಂಡು ಬಂದರೆ ಕೂಡಲೇ ಸರಿಪಡಿಸಿಕೊಳ್ಳಬೇಕು. ಅವಧಿ ಮೀರಿದ ನಂತರ ಅರ್ಜಿಗಳ ವಿಲೇವಾರಿ ಮಾಡುವುದನ್ನು ಸಹಿಸಲಾಗುವುದಿಲ್ಲ. ಸಮರ್ಪಕವಾಗಿ ಸಕಾಲ ಕಾಯ್ದೆ ಅನುಷ್ಠಾನಕ್ಕೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ವಿವರಿಸಿದರು.
ಸೂಚಿತ ಅವಧಿಯೊಳಗೆ ವಿಲೇವಾರಿ ಮಾಡಿ: ಏಕೀಕೃತ ಸಾರ್ವಜನಿಕ ದೂರು ನಿವಾರಣಾ ತಂತ್ರಾಂಶ ವ್ಯವಸ್ಥೆಯ ಪೋರ್ಟಲ್‌ನಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಸಹ ಸೂಚಿತ ಅವಧಿಯೊಳಗೆ ವಿಲೇವಾರಿಯಾಗಬೇಕು. ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳಬಾರದು. ಪರಿಣಾಮಕಾರಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಜಿಪಂ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ನಗರಾಭಿವೃದ್ದಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಸುರೇಶ್, ಸಮಾಜ ಕಲ್ಯಾಣಇಲಾಖೆಯ ಉಪನಿರ್ದೇಶಕ ನಂದಾ ಹಣಬರಟ್ಟಿ,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಮಂಜುಳಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿರಾಜೇಂದ್ರಪ್ರಸಾದ್, ಭೂ ದಾಖಲೆಗಳ ಇಲಾಖೆಯಉಪನಿರ್ದೇಶಕಿ ವಿದ್ಯಾಯಿನಿ, ಜಿಲ್ಲಾ ಸಕಾಲ ಸಮಾಲೋಚಕಿ ಪವಿತ್ರಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.