Advertisement

ಬಡವರಿಂದ ಹಣ ವಸೂಲಿ ಮಾಡಿದರೆ ಕ್ರಮ: ಸಚಿವ ಕೆ.ಸಿ.ನಾರಾಯಣಗೌಡ

02:40 PM Jan 08, 2022 | Team Udayavani |

ಮಂಡ್ಯ: ಹಣ ಕೊಡದಿದ್ದರೆ ಕೆಲವು ಪಿಡಿಒ, ಇಒಗಳು ಮನೆ ಮಂಜೂರು, ಅನುದಾನ ಬಿಡುಗಡೆ ಮಾಡುವುದಿಲ್ಲ ಎಂಬ ಆರೋಪಗಳಿದ್ದು, ದೂರು ಬಂದರೆ ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಕೆ ನೀಡಿದರು.

Advertisement

ನಗರದ ಜಿಪಂ ಕಚೇರಿಯಲ್ಲಿ ಅಮೃತ ಯೋಜನೆ, ಪಿಎಂಜಿಎಸ್‌ವೈ ಯೋಜನೆ ಮತ್ತು ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂಕೋವಿಡ್‌ ಸಂಬಂಧ ಕೈಗೊಂಡಿರುವ ಅಗತ್ಯ ಕ್ರಮಗಳ ಕುರಿತು ಸಭೆ ನಡೆಸಿ ಮಾತನಾಡಿದರು.

ಬಡವರಿಂದ ಹಣ ಪಡೆದರೆ ಕ್ರಮ: ಕೆಲವು ಬಡವರು ಗುಡಿಸಲಿನಲ್ಲಿ ವಾಸ ಮಾಡುತ್ತಾ ಊಟಕ್ಕೂ ಪರದಾಡುವಂಥ ಸ್ಥಿತಿ ಇದ್ದರೂ ಅಂಥವರು ಹಣ ಕೊಡದಿದ್ದರೆ ಮನೆ ಮಂಜೂರು, ಹಣ ಬಿಡುಗಡೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ. ಇದಕ್ಕೆ ಕಡಿವಾಣ ಹಾಕಬೇಕು. ಇದು ಇಲ್ಲಿಗೇ ನಿಲ್ಲಬೇಕು. ಆ ರೀತಿಯ ದೂರು ಬಂದರೆ ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜ.25ರೊಳಗೆ ಫ‌ಲಾನುಭವಿ ಆಯ್ಕೆ ಮಾಡಿ: ವಸತಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 8700 ಮನೆ ಮಂಜೂರು ಮಾಡಿದ್ದು, ಜ.25ರೊಳಗೆ ಅರ್ಹಫಲಾನುಭವಿಗಳನ್ನು ಆಯ್ಕೆ ಮಾಡಿ, ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮನೆ ಹಂಚಿಕೆ ವಿಚಾರದಲ್ಲಿ ನಿರ್ಲಕ್ಷ್ಯತನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅವರು, ಜಿಲ್ಲೆಯಲ್ಲಿಇದಕ್ಕೆ ಅವಕಾಶ ಇಲ್ಲ. ಹಣ ಪಡೆದಿರುವ ಬಗ್ಗೆ ಮಾಹಿತಿ ಬಂದರೆ ಅಂಥ ಅಧಿ ಕಾರಿಗಳ ವಿರುದ್ಧನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.

ಮಾರ್ಚ್‌ ಅಂತ್ಯದೊಳಗೆ ಸೌಲಭ್ಯ ಕಲ್ಪಿಸಿ: ಅಮೃತ ಗ್ರಾಮೀಣ ವಸತಿ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ 27 ಗ್ರಾಮ ಪಂಚಾಯ್ತಿ ಆಯ್ಕೆಮಾಡಲಾಗಿದ್ದು, ವಸತಿ ರಹಿತ 6918, ನಿವೇಶನರಹಿತ 3819 ಕುಟುಂಬಗಳನ್ನು ಗುರುತಿಸಿದೆ. ಅಮೃತ ಯೋಜನೆಯಡಿ 2022 ಮಾರ್ಚ್‌ ಅಂತ್ಯದೊಳಗೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಗಡುವು ನೀಡಿದರು.

Advertisement

ಶಾಲೆಗಳಿಗೆ ಅಗತ್ಯವಾದ ಸೌಕರ್ಯ ಒದಗಿಸಿ: 27 ಗ್ರಾಪಂಗಳ ಶಾಲೆಗಳಲ್ಲಿ ಕಾಂಪೌಂಡ್‌, ಶೌಚಾಲಯ,ಘನತ್ಯಾಜ್ಯ ನಿರ್ವಹಣಾ ಘಟಕ, ಬೀದಿ ದೀಪ ಅಳವಡಿಕೆ ಹಾಗೂ ಆಟದ ಮೈದಾನ, ಕುಡಿಯವ ನೀರು ಸರಬರಾಜು ಸೇರಿ ವಿವಿಧ ಮೂಲಭೂತಸೌಕರ್ಯಗಳನ್ನು ಸಮರ್ಪಕವಾಗಿ ಮಾರ್ಚ್‌ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಕ್ರಮದ ಎಚ್ಚರಿಕೆ ನೀಡಿದರು.

ಸುಳ್ಳು ಮಾಹಿತಿಗೆ ಆಕ್ರೋಶ: ಬೀದಿ ದೀಪಗಳ ಅಳವಡಿಕೆ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಸರಿಯಾದ ಮಾಹಿತಿ ನೀಡದಿದ್ದಕ್ಕೆ ಗರಂ ಆದ ನಾರಾಯಣಗೌಡ, ಅಧಿಕಾರಿಗಳು ಸುಳ್ಳು ಹೇಳುವುದನ್ನು ಬಿಡಬೇಕು. ಕಥೆ ಕೇಳಲು ನಾನು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ರಮಕ್ಕೆ ಸೂಚನೆ: ಪಿಎಂಜಿಎಸ್‌ವೈ ಯೋಜನೆಯಲ್ಲಿ ಟೆಂಡರ್‌ ಪಡೆದು ರಸ್ತೆ ಕಾಮಗಾರಿಪೂರ್ಣಗೊಳಿಸದಿರುವುದಕ್ಕೆ ಕಿಡಿಕಾರಿದ ಸಚಿವ,ಕೆಲವು ಗುತ್ತಿಗೆದಾರರು ಟೆಂಡರ್‌ ಪಡೆದು ಕಾಮಗಾರಿ ಪೂರ್ಣಗೊಳಿಸಿಲ್ಲ. ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಪಂ ಸಿಇಒ ದಿವ್ಯಪ್ರಭು ಅವರಿಗೆ ಸೂಚಿಸಿದರು.

ಆಯ್ಕೆ ಪ್ರಕ್ರಿಯೆ ಶೀಘ್ರ ಮುಗಿಸಿ: ಅಮೃತ

ಯೋಜನೆಯಡಿ ಜಿಲ್ಲೆಯ 23 ಶಾಲೆಗೆ ತಲಾ 10 ಲಕ್ಷ ರೂ.ಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ನಿರ್ಮಾಣ ಮಾಡಲಾಗುತ್ತದೆ. ಅಮೃತ ಯೋಜನೆಯಡಿ ಜಿಲ್ಲೆಯಲ್ಲಿ 325 ಸ್ವಸಹಾಯ ಗುಂಪು ಆಯ್ಕೆ ಮಾಡಲಾಗಿದ್ದು, ಪ್ರತಿ ಸಂಘಕ್ಕೆ ತಲಾ 1 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. 25 ಅಂಗನವಾಡಿ ಕೇಂದ್ರಗಳನ್ನು ತಲಾ 1 ಲಕ್ಷ ರೂ. ವೆಚ್ಚದಲ್ಲಿಮೇಲ್ದರ್ಜೆಗೇರಿಸಲಾಗುತ್ತದೆ. ಜಿಲ್ಲೆಯಲ್ಲಿ 12 ಅಮೃತರೈತ ಉತ್ಪಾದಕ ಸಂಸ್ಥೆ ಗುರಿ ನಿಗದಿಪಡಿಸಿದ್ದು, ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ ಎಂದರು.

ಆರೋಗ್ಯ ಕೇಂದ್ರಗಳ ಅಭಿವೃದ್ಧಿಪಡಿಸಿ: 27 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತಲಾ 20 ಲಕ್ಷರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಗುರಿ ಹೊಂದಲಾಗಿದ್ದು, ಇದಕ್ಕಾಗಿ 5.40 ಕೋಟಿ ರೂ.ನಿಗದಿಪಡಿಸಲಾಗಿದೆ. ಅಮೃತ ಯೋಜನೆಗಳನ್ನುಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಗಡುವು ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ರೈತರ ಬೆಳೆ ಸಮೀಕ್ಷೆಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು. ಶಾಸಕಎಂ.ಶ್ರೀನಿವಾಸ್‌, ಜಿಲ್ಲಾಧಿಕಾರಿ ಎಸ್‌.ಅಶ್ವಥಿ, ಜಿಪಂ ಸಿಇಒ ದಿವ್ಯಪ್ರಭು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಅಮೃತ್‌ ಯೋಜನೆ ಅನುಷ್ಠಾನದಲ್ಲಿ ವಿಳಂಬವೇಕೆ? :

ಅಮೃತ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಅ ಧಿಕಾರಿಗಳ ವಿರುದ್ಧ ಕಿಡಿಕಾರಿದ ಸಚಿವ ನಾರಾಯಣಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಘೋಷಿಸಿದ್ದ ಸರ್ಕಾರದ ಮಹತ್ವಕಾಂಕ್ಷಿ ಅಮೃತ ಯೋಜನೆಯನ್ನು ಜಿಲ್ಲೆಯಲ್ಲಿ ವಿಳಂಬ ಮಾಡದೆ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು. ಅಲ್ಲದೇ, ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಮೃತ ಗ್ರಾಪಂ, ಅಮೃತ ಗ್ರಾಮೀಣ ವಸತಿ ಯೋಜನೆ ಸೇರಿದಂತೆ ಅಮೃತ ಯೋಜನೆ ಅನುಷ್ಠಾನಗೊಳಿಸಲು ಏನು ಅಡ್ಡಿಯಾಗಿದೆ. ಏಕೆ ವಿಳಂಬ ಮಾಡುತ್ತೀದ್ದೀರಾ? ಎಂದು ಪ್ರಶ್ನಿಸಿದರು. ಅಲ್ಲದೇ, ಶೀಘ್ರ ಕಾಲಮಿತಿಯೊಳಗೆ ಮುಕ್ತಾಯಗೊಳಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next