ಬಸವನಬಾಗೇವಾಡಿ: ಇತ್ತೀಚೆಗೆ ಭಾರೀ ಪ್ರಮಾಣದ ಮಳೆಯಿಂದ ಅಪಾರ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ತಕ್ಷಣ ಸರ್ವೇ ಮಾಡಿ ಬೆಳೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸೂಚಿಸಿದರು.
ಶನಿವಾರ ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ಪರಿಹಾರ ದೊರಕಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಬಾರದು ಎಂದರು. ಕೃಷಿ ಇಲಾಖೆ ಸಹಾಯ ನಿರ್ದೇಶಕ ಎಂ.ಎಚ್. ಯರಝರಿ ಮಾತನಾಡಿ, ಅಕ್ಟೋಬರ್ ಅಂತ್ಯದವರೆಗೆ ಈ ಭಾಗದಲ್ಲಿ 655 ಮಿ.ಮೀ.ಮಳೆಯಾಗಬೇಕಾಗಿತ್ತು. 902 ಮಿ.ಮೀ. ಮಳೆಯಾಗಿದ್ದರಿಂದ ಶೇ. 42 ಬಿತ್ತನೆ ಬೆಳೆ ಹಾನಿಯಾಗಿವೆ ಎಂದು ಹೇಳಿದರು.
ಕೃಷಿ, ಕಂದಾಯ ಹಾಗೂ ತೋಟಗಾರಿಕೆಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಸರಕಾರ ಪರಿಹಾರ ಧನ ನೀಡಿದ ನಂತರ ರೈತರಿಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು. ಜಿಪಂ ಅಧ್ಯಕ್ಷೆ ಮಾತನಾಡಿ, ಕೋವಿಡ್-19 ನೆಪ ಹೇಳಿ ಲಸಿಕೆ ಹಾಕದೇ ಇರುವುದರಿಂದ ದನ-ಕರುಗಳು ರೋಗಕ್ಕೆ ಒಳಪಟ್ಟಿದ್ದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರು ಸೇರಿದಂತೆ ದನ-ಕರುಗಳಿಗೆ ಸಂಕಷ್ಟ ಎದುರಾದಾಗ ತಕ್ಷಣವೇ ಸ್ಪಂದಿಸಿ ಅಗತ್ಯ ನೆರವು ನೀಡಲು ಮುಂದಾಗಬೇಕು ಎಂದು ಹೇಳಿದರು.
ದನ-ಕರುಗಳು ಬಾಯಿ ಕಾಲು ಬೇನೆ ರೋಗಗಳಿಗೆ ಸಿಲುಕಿವೆ. ಪಶು ಇಲಾಖೆಯವರು ಲಸಿಕೆ ಹಾಕದೇ ಇರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇ ಲಸಿಕೆ ಹಾಕಲು ಆರಂಭಿಸಿ ಎಂದು ಪಶು ಇಲಾಖೆ ಅ ಧಿಕಾರಿಗಳಿಗೆ ಸೂಚಿಸಿದರು.
ಆಗ ನಿಡಗುಂದಿ, ಕೊಲ್ಹಾರ, ಹೊವಿನಹಿಪ್ಪರಗಿ, ಬಸವನಬಾಗೇವಾಡಿ ನಾಲ್ಕು ವಲಯಗಳಾಗಿ ವಿಭಾಗಿಸಿ 8 ಗುಂಪುಗಳನ್ನು ರಚಿಸಿ ಲಸಿಕೆ ಹಾಕಲು ಆರಂಭಿಸಲಾಗಿದೆ ಎಂದು ಡಾ| ಎಚ್.ಎಂ. ನ್ಯಾಮಗೊಂಡ ಸಭೆಗೆ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ವಿ. ಕಿರಸೂರ ಮಾತನಾಡಿ, ನಮ್ಮ ಇಲಾಖೆ ಅಡಿಯಲ್ಲಿ ತಾಲೂಕಿನಲ್ಲಿ 65 ಶುದ್ಧ ನೀರಿನ ಘಟಕಗಳಿವೆ. ಅದರಲ್ಲಿ 7 ಘಟಕಗಳು ದುರಸ್ತಿಗೆ ಬಂದಿವೆ. ಶೀಘ್ರ ದುರಸ್ತಿಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದು ಹೇಳಿದರು.
ತಾಪಂ ಉಪಾಧ್ಯಕ್ಷೆ ಸುಜಾತಾ ಪಾಟೀಲ, ಜಿಪಂ ಸದಸ್ಯರಾದ ಸಂತೋಷ ನಾಯಕ, ಕಲ್ಲಪ್ಪ ಮಟ್ಟಿ, ಜಿಪಂ ಯೋಜನಾ ಧಿಕಾರಿ ನಿಂಗಪ್ಪ, ತಾಪಂ ಇಒ ಭಾರತಿ ಚಲುಮಯ್ಯ, ಜಿಪಂ ಇಲಾಖೆಯ ಸಿ.ಬಿ. ಕುಂಬಾರ ಸೇರಿದಂತೆ ಅನೇಕರು ಇದ್ದರು.