ಬೆಳಗಾವಿ: ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಕುಂದಾನಗರಿ ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ನೀಡಿರುವ ಗಡುವು ಮುಗಿಯಲು ಇನ್ನೊಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಸದ್ಯ ಶೇ.50ರಷ್ಟು ಮಾತ್ರ ಕಾಮಗಾರಿ ಮುಗಿದಿದೆ. ಇನ್ನೂ ಅರ್ಧದಷ್ಟು ಕೆಲಸ ಆಗಬೇಕಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ವಿಳಂಬವಾಗಲು ಕೋವಿಡ್-19 ಮೂಲ ಕಾರಣವಾಗಿದ್ದು ನಿಜ. ಆದರೆ ಇದ್ದ ಕಾಲಾವಕಾಶದಲ್ಲಿ ಅಂದುಕೊಂಡಷ್ಟು ಕಾಮಗಾರಿಗಳು ಮುಗಿದಿಲ್ಲ. ಕೆಲವು ತಿಂಗಳಿಂದ ಕಾಮಗಾರಿಗಳು ಚುರುಕು ಪಡೆದಿವೆ. ಕೆಲವು ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಇನ್ನು ಆರೇಳು ತಿಂಗಳಲ್ಲಿ ಶೇ. 80ರಷ್ಟು ಕೆಲಸ ಮುಗಿಯುವ ವಿಶ್ವಾಸ ಅಧಿಕಾರಿಗಳಿಗಿದೆ.
2020ರ ಮಾರ್ಚ್‌ದಿಂದ 2021ರವರೆಗೆ ಸ್ಮಾರ್ಟ್ ಸಿಟಿ ಕೆಲಸಗಳು ನಡೆಯಲೇ ಇಲ್ಲ. ಕೋವಿಡ್ ಲಾಕ್‌ಡೌನ್‌ದಿಂದ ಕೆಲಸ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಹೀಗಾಗಿ ಕೆಲಸ ವಿಳಂಬವಾಗಿದೆ. ಕೆಲ ಕೆಲಸಗಳಿಗೆ ಮಳೆಯೂ ಅಡ್ಡಿಯಾಗಿದೆ. ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸುವ ಇರಾದೆ ಅಧಿಕಾರಿಗಳು ಹೊಂದಿದ್ದಾರೆ.
ಅಂದ ಹೆಚ್ಚಿಸಿದ ಯೋಜನೆ: ಸ್ಮಾರ್ಟ್ ಸಿಟಿ ಕೆಲಸಗಳಿಂದ ಬೆಳಗಾವಿ ನಗರದ ಅಂದ ಹೆಚ್ಚಾಗಿದೆ. ಈ ಹಿಂದೆ ಆಗಲಾರದಷ್ಟು, ಆಗದ ಕೆಲಸಗಳು ಸ್ಮಾರ್ಟ್ ಸಿಟಿಯಲ್ಲಿ ಪೂರ್ಣಗೊಂಡಿದ್ದು ಜನರಲ್ಲಿ ಸಂತಸ ಮೂಡಿದೆ. ಅತ್ಯಾಧುನಿಕ ಸೌಲಭ್ಯಗಳು, ಸುಸಜ್ಜಿತ ರಸ್ತೆಗಳು, ಉದ್ಯಾನವನಗಳ ಅಭಿವೃದ್ಧಿ, ಉತ್ತಮ ಸೌಲಭ್ಯವುಳ್ಳ ಬಸ್ ನಿಲ್ದಾಣಗಳಿಂದ ಸುಂದರ ಬೆಳಗಾವಿಯತ್ತ ದಾಪುಗಾಲು ಹಾಕುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯ ಕೆಲವು ಕಾಮಗಾರಿಗಳಲ್ಲಿ ಗುಣಮಟ್ಟ ಇಲ್ಲ. ರಸ್ತೆ ಕಾಮಗಾರಿಗಳು ಅವೈಜ್ಞಾನಿಕ ಹಾಗೂ ಕಳಪೆ ಮಟ್ಟದಿಂದ ಕೂಡಿವೆ. ರಸ್ತೆ ನಿರ್ಮಾಣ ಮಾಡುವಾಗ ಮಳೆ ನೀರು ಸರಿಯಾಗಿ ಹರಿದು ಹೋಗುವಂತೆ ಮಾಡಿಲ್ಲ. ಇದರಿಂದ ಮಳೆಗಾಲದಲ್ಲಿ ನೀರು ರಸ್ತೆ ಮೇಲೆ ಹರಿಯುತ್ತಿದೆ ಎಂಬ ಆರೋಪವೂ ಇದೆ.
ಮಳೆ ನೀರು ನಿಂತು ಕಿರಿಕಿರಿ: ಕಾಂಗ್ರೆಸ್ ರಸ್ತೆ ಸೇರಿದಂತೆ ಕೆಲವು ಕಡೆಗೆ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಸ್ಮಾರ್ಟ್ ಸಿಟಿ ಕ್ರಿಯಾ ಯೋಜನೆ ಸಿದ್ಧಪಡಿಸುವ ಮೊದಲಿಗೆ ರಾಜ ಕಾಲುವೆ ಮತ್ತು ಪ್ರಾಥಮಿಕ ಕಾಲುವೆಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಕಾಲುವೆಗಳ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಮಳೆಯಾಗಿ ರಸ್ತೆ ಮೇಲೆ ನೀರು ಹರಿದು ಹೋಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ರಾಜೀವ ಟೋಪಣ್ಣವರ ಆರೋಪಿಸಿದ್ದಾರೆ. ನಗರದ ನಾನಾವಡಿ ಬಳಿ ಇರುವ ಕಾಲುವೆಯಿಂದ ನೀರು ರೈಲ್ವೆ ಹಳಿ ದಾಟಿ ಶಾಂತಿ ನಗರ ಮೂಲಕ ಬಳ್ಳಾರಿ ನಾಲಾ ಸೇರುತ್ತದೆ. ನಾಲಾಗಳ ಅಭಿವೃದ್ಧಿಯೇ ಮಾಡಿಲ್ಲ. ಒಂದು ವೇಳೆ ನಗರದ ನಾಲಾಗಳನ್ನು ಅಭಿವೃದ್ಧಿಗೊಳಿಸಿದ್ದರೆ ನೀರು ಹರಿದು ಹೋಗುತ್ತಿತ್ತು.
ಬಿರುಕು ಬಿಟ್ಟ ರಸ್ತೆಗಳು: ಮೂಲ ಗುತ್ತಿಗೆದಾರರು ಇಲ್ಲದೇ ಬಹುತೇಕ ಕಾಮಗಾರಿಗಳನ್ನು ಉಪ ಗುತ್ತಿಗೆದಾರರೇ ಮಾಡುತ್ತಿದ್ದಾರೆ. ಇದರಿಂದ ಕೆಲವು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ. ಕೆಲವು ರಸ್ತೆಗಳು ಕಳಪೆ ಮಟ್ಟದ್ದಾಗಿವೆ. ಸಿಮೆಂಟ್ ರಸ್ತೆ ಎಂದರೆ ಸುಮಾರು 20 ವರ್ಷ ಬಾಳಿಕೆ ಬರಬೇಕು. ಆದರೆ ಒಂದೆರಡು ರಸ್ತೆಗಳು ಈಗಲೇ ಬಿರುಕು ಬಿಡುತ್ತಿವೆ. ಕಾಂಗ್ರೆಸ್ ರಸ್ತೆ, ಕೆಪಿಟಿಸಿಎಲ್ ರಸ್ತೆ, ಕೊಲ್ಲಾಪುರ ರಸ್ತೆಗಳಲ್ಲಿ ಮಳೆಗಾಲದ ವೇಳೆ ತಗ್ಗು ಬೀಳುತ್ತಿವೆ ಎಂದು ಜನ ದೂರಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುದಾನ ಹಂಚಿಕೆ ಮಾಡಿಕೊಂಡು ಸ್ಮಾರ್ಟ್ ಸಿಟಿ ಯೋಜನೆ ಆರಂಭಗೊಂಡಿದ್ದು, ಬೆಳಗಾವಿ ನಗರ ಮೊದಲ ಹಂತದಲ್ಲಿ 26 ಜನೇವರಿ 2016ರಂದು ಆಯ್ಕೆಯಾದರೆ, 11 ಮೇ 2016ರಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಾರಂಭಿಸಲಾಗಿದೆ. 2017ರಿಂದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 30 ಜೂನ್ 2023ಕ್ಕೆ ಸಂಪೂರ್ಣವಾಗಿ ಮುಗಿಸಲು ಸರ್ಕಾರ ಗಡುವು ನೀಡಿದೆ.
ಬೆಳಗಾವಿ ನಗರದ ವಿವಿಧ ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳನ್ನು ನಡೆಸಲು ನೀಲನಕ್ಷೆ ತಯಾರಿಸಲಾಗಿದ್ದು, ಕೆಲಸ ಪ್ರಗತಿ ಹಂತದಲ್ಲಿವೆ. ನಗರ 94.08 ಚದರ ಕಿಮೀ ವ್ಯಾಪ್ತಿ ಹೊಂದಿದೆ. ಸ್ಮಾರ್ಟ್ ಸಿಟಿ ಮಿಷನ್ ಅನುದಾನ 930 ಕೋಟಿ ರೂ. ಇದ್ದು, ಒಟ್ಟು 103 ಕಾಮಗಾರಿಗಳ ಪೈಕಿ ಸದ್ಯ 50 ಸಂಪೂರ್ಣ ಮುಗಿದಿದ್ದು, ಇನ್ನೂ 53 ಕೆಲಸಗಳು ಪ್ರಗತಿ ಹಂತದಲ್ಲಿವೆ. 50 ಕಾಮಗಾರಿಗೆ 192 ಕೋಟಿ ರೂ. ವೆಚ್ಚವಾಗಿದೆ. 53 ಕಾಮಗಾರಿಗಳಿಗೆ 737 ಕೋಟಿ ರೂ. ವೆಚ್ಚವಾಗಲಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಆರು ಕಾಮಗಾರಿಗಳಲ್ಲಿ 5 ಪ್ರಗತಿ ಹಂತದಲ್ಲಿದ್ದು, 112.91 ಕೋಟಿ ರೂ. ಇನ್ನೊಂದು ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಕೇಂದ್ರ ಸರ್ಕಾರದಿಂದ ಈವರೆಗೆ ಬೆಳಗಾವಿಗೆ ಒಟ್ಟು 392 ಕೋಟಿ ರೂ. ಬಂದಿದ್ದು, ಎಲ್ಲ ಹಣವನ್ನು ವೆಚ್ಚ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಬಂದ 413 ಕೋಟಿ ರೂ. ಅನುದಾನ ಪೈಕಿ 306 ಕೋಟಿ ರೂ. ಬಳಸಿಕೊಳ್ಳಲಾಗಿದೆ.
ದಕ್ಷಿಣ ಕ್ಷೇತ್ರದಲ್ಲಿ ಬಹುತೇಕ ಎಲ್ಲ ಕೆಲಸಗಳು ಮುಗಿದಿವೆ. ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡು ವ್ಯಾಕ್ಸಿನ್ ಡಿಪೋದಲ್ಲಿ ಕೆಲಸ ಆರಂಭಗೊಂಡಿದೆ. ಸಣ್ಣ ಪುಟ್ಟ ಲೋಪದೋಷಗಳಿಗೆ ಕಳಪೆ ಕಾಮಗಾರಿ ಎನ್ನುವುದು ತಪ್ಪು. ಆ ತರಹ ಇದ್ದರೆ ಸರಿಪಡಿಸಲಾಗುವುದು. –
ಅಭಯ ಪಾಟೀಲ, ಶಾಸಕರು, ದಕ್ಷಿಣ ಮತಕ್ಷೇತ
ಉತ್ತರ ಕ್ಷೇತ್ರದಲ್ಲಿ ನಗರ ಬಸ್ ನಿಲ್ದಾಣ ಹೊರತುಪಡಿಸಿದರೆ ಬಹುತೇಕ ಕೆಲಸ ಮುಗಿದಿವೆ. ವೈಟ್ ಟಾಫಿಂಗ್ ರಸ್ತೆ ನಿರ್ಮಾಣದ ಹಣ ಜಿಎಸ್‌ಟಿಯಲ್ಲಿ ಹೋಗಿದ್ದು, ಅದನ್ನು ಬೇರೆ ಅನುದಾನದಲ್ಲಿ ಮಾಡಲಾಗುವುದು. ಪೇವರ್ಸ್ ಅಳವಡಿಕೆ, ರಸ್ತೆ ನಿರ್ಮಾಣ ಆಗಬೇಕಿದೆ.
-ಅನಿಲ್ ಬೆನಕೆ, ಶಾಸಕರು, ಉತ್ತರ ಮತಕ್ಷೇತ್ರ
ಸ್ಮಾರ್ಟ್ ಸಿಟಿಯಿಂದ ನಮ್ಮ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ವಾರ್ಡ್‌ಗಳು ನನ್ನ ಕ್ಷೇತ್ರದಲ್ಲಿ ಬಂದರೂ ಅಂದುಕೊಂಡಷ್ಟು ಕೆಲಸ ಆಗಿಲ್ಲ. ಸಂಪೂರ್ಣ ಕಾಮಗಾರಿ ಬಗ್ಗೆ ಮಾಹಿತಿ ಹಕ್ಕಿನಡಿ ವಿವರ ಪಡೆದುಕೊಳ್ಳಲಿದ್ದೇವೆ. ಒಂದು ವರ್ಷದಲ್ಲಿ ಕೆಲಸ ಮುಗಿಯುವುದು ಡೌಟು. –
ಲಕ್ಷ್ಮೀ ಹೆಬ್ಟಾಳಕರ, ಶಾಸಕರು, ಬೆಳಗಾವಿ ಗ್ರಾಮೀಣ ಕ್ಷೇತ್ರ
ಕೋವಿಡ್‌ದಿಂದಾಗಿ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗಿದೆ. ಕೆಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿದ್ದು, ಕೆಲ ತಿಂಗಳಿಂದ ಕೆಲಸ ಚುರುಕುಗೊಂಡಿದೆ. ನಿಗದಿತ ವೇಳೆಯಲ್ಲಿ ಕೆಲಸ ಮುಗಿಸಲಾಗುವುದು. –
ಪ್ರವೀಣ ಬಾಗೇವಾಡಿ, ವ್ಯವಸ್ಥಾಪಕ ನಿರ್ದೇಶಕರು, ಸ್ಮಾರ್ಟ್ ಸಿಟಿ
ಪೂರ್ಣಗೊಂಡ ಕಾಮಗಾರಿಗಳು:
ಇಂಟಿಗ್ರೆಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್
ಕಣಬರ್ಗಿ ಕೆರೆ ಅಭಿವೃದ್ಧಿ
ವಂಟಮೂರಿಯಲ್ಲಿ 30 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ತಿನಿಸು ಕಟ್ಟೆ(ಖಾವು ಕಟ್ಟಾ)
11 ಸ್ಮಾರ್ಟ್ ಕ್ಲಾಸ್ ರೂಮ್‌ಗಳ ನಿರ್ಮಾಣ
ಪಟವರ್ಧನ ಕಾಲೋನಿ ಉದ್ಯಾನ ಅಭಿವೃದ್ಧಿ
ಸರಾಫ ಕಾಲೋನಿ ಉದ್ಯಾನ ಅಭಿವೃದ್ಧಿ
ನಾಥ ಪೈ ಉದ್ಯಾನ ಅಭಿವೃದ್ಧಿ
38 ಸ್ಮಾರ್ಟ್ ಬಸ್ ಶೆಲ್ಟರ್‌ಗಳ ನಿರ್ಮಾಣ
ಕೌಶಲ ಅಭಿವೃದ್ಧಿ ಕೇಂದ್ರ
10 ಹಾಸಿಗೆಯುಳ್ಳ ಆಸ್ಪತ್ರೆ
ಹೈಟೆಕ್ ಡಿಜಿಟಲ್ ಗ್ರಂಥಾಲಯ ಅಭಿವೃದ್ಧಿ
12 ಶುದ್ಧ ಕುಡಿಯುವ ನೀರಿನ ಮಳಿಗೆಗಳು
ಸ್ಮಾರ್ಟ್ ರಸ್ತೆಗಳ ನಿರ್ಮಾಣ
ಟ್ರಾಮಾ ಸೆಂಟರ್
ಮಳೆ ನೀರು ಕೊಯ್ಲು ಘಟಕ
ಇ-ಆಟೋ ರಿಕ್ಷಾ ವಿತರಣೆ
ಬಿಡಾಡಿ ದನಗಳ ಪುನರ್ವಸತಿ ಕೇಂದ್ರ
ಪ್ರಗತಿ ಹಂತದಲ್ಲಿರುವ ಕಾಮಗಾರಿ:
ನಗರ ಸಾರಿಗೆ ಬಸ್ ನಿಲ್ದಾಣ(ಸಿಬಿಟಿ)
ಬಹುಪಯೋಗಿ ವಾಣಿಜ್ಯ ಸಂಕೀರ್ಣ, ಕಲಾಮಂದಿರ
ಸ್ಮಾರ್ಟ್ ರಸ್ತೆ ನಿರ್ಮಾಣ
ವೈಟ್ ಟಾಪಿಂಗ್ ರಸ್ತೆಗಳ ನಿರ್ಮಾಣ
ಪೇವರ್ ರಸ್ತೆಗಳ ನಿರ್ಮಾಣ
ಪಾದಚಾರಿ ಮಾರ್ಗ ಮತ್ತು ಸೈಕಲ್ ಪಥ ನಿರ್ಮಾಣ
ಭೂಗತ ವಿದ್ಯುತ್ ಕೇಬಲ್ ಅಳವಡಿಕೆ
ಮಹಾತ್ಮಾ ಫುಲೆ ಉದ್ಯಾನ ಅಭಿವೃದ್ಧಿ
ಕಲಾಸೌಧ ನಿರ್ಮಾಣ
ಪಾರಂಪರಿಕ ಉದ್ಯಾನ ಅಭಿವೃದ್ಧಪಡಿಸುವುದು
ವಾಯುಯಾನ ಗ್ಯಾಲರಿ ನಿರ್ಮಾಣ
ಗ್ರಾಮೀಣ ಸೊಗಡು ಬಿಂಬಿಸುವ ಭಾರತದ ಹಳ್ಳಿಗಳ ನಿರ್ಮಾಣ
ರುಕ್ಮಿಣಿ ನಗರ ಸ್ಲಂ ಅಭಿವೃದ್ಧಿಪಡಿಸವುದು
ಕೋಟೆ ಕೆರೆ ಅಭಿವೃದ್ಧಿ
ಕಿಡ್ ಜೋನ್ ಅಭಿವೃದ್ಧಿ
ಮೋಟಾರು ವಾಹನ ರಹಿತ ಬೀದಿ ಬದಿ ವ್ಯಾಪಾರಿಗಳ ವಲಯ
ಬಿಮ್ಸ್ ಆಸ್ಪತ್ರೆ ಅಭಿವೃದ್ಧಿ
ಒಟ್ಟು ಅನುದಾನ: 930 ಕೋಟಿ ರೂ.:
ಕೇಂದ್ರ ಸರ್ಕಾರದ ಅನುದಾನ: 392 ಕೋಟಿ ರೂ.
ರಾಜ್ಯ ಸರ್ಕಾರದ ಅನುದಾನ: 413 ಕೋಟಿ ರೂ.
ಒಟ್ಟು ಕಾಮಗಾರಿ: 103
ಮುಗಿದಿದ್ದು: 50 ಕಾಮಗಾರಿ, 192 ಕೋಟಿ ರೂ. ವೆಚ್ಚ
ಪ್ರಗತಿ ಹಂತದಲ್ಲಿ: 53 ಕಾಮಗಾರಿ, 737 ಕೋಟಿ ರೂ. ವೆಚ್ಚ
ಸಾರ್ವಜನಿಕ ಖಾಸಗಿ ಸಹಭಾಗಿತ್ವ:
ಒಟ್ಟು ಕಾಮಗಾರಿ: 6
ಪ್ರಗತಿ ಹಂತದಲ್ಲಿ: 5 (112.91 ಕೋಟಿ ರೂ.)
ಭೈರೋಬಾ ಕಾಂಬಳೆ