ಧಾರವಾಡ: ಕೃಷಿಕರ ಬೆಳೆಹಾನಿ ಪರಿಹಾರದ ಹಣವನ್ನು ಯಾವುದೇ ಕಾರಣಕ್ಕೂ ಅವರ ಸಾಲದ ಖಾತೆಗಳಿಗೆ ಜಮಾ ಮಾಡಬಾರದು ಎಂದು ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಹೇಳಿದರು.
ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯಮಟ್ಟದ ಬ್ಯಾಂಕ್‌ಗಳ ಸಮಿತಿ ಹಾಗೂ ರಾಷ್ಟ್ರಮಟ್ಟದಲ್ಲಿಯೇ ಈ ಕುರಿತು ನಿರ್ದೇಶನಗಳು ಇರುವುದರಿಂದ ಅವುಗಳ ಸಮರ್ಪಕ ಪಾಲನೆಯಾಗಬೇಕು ಎಂದು ಸೂಚಿಸಿದರು. 2020-21ನೇ ಆರ್ಥಿಕ ಸಾಲಿನ ಮೊದಲ ತ್ತೈಮಾಸಿಕವಾದ ಜೂನ್ 2020ರ ಅಂತ್ಯದ ಅವ ಧಿಯಲ್ಲಿ ಕೋವಿಡ್ ಸಾಂಕ್ರಾಮಿಕದ ಅಡೆತಡೆಯ ನಡುವೆಯೂ ಜಿಲ್ಲೆಯ ಬ್ಯಾಂಕ್‌ಗಳ ಪ್ರಗತಿ ತೃಪ್ತಿಕರವಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ಸಕಾಲದಲ್ಲಿ ಸೇವೆಗಳು ದೊರೆಯಬೇಕು ಎಂದರು.
ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್ ನಿಯಂತ್ರಣಕ್ಕಾಗಿ ಮಾಸ್ಕ್ ಧರಿಸುವುದು, ಶಾರೀರಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಪದೇ ಪದೇ ಕೈತೊಳೆಯುವುದು ಹಾಗೂ ಗ್ರಾಹಕರು ಪರಸ್ಪರ ಅಂತರ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡದ ಪ್ರಾದೇಶಿಕ ವ್ಯವಸ್ಥಾಪಕ ಶ್ರೀನಿವಾಸ ರವಿಪತಿ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್‌ಗಳ 343 ಶಾಖೆಗಳಿವೆ. ಇವುಗಳಲ್ಲಿ 84 ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿ, 35 ಶಾಖೆಗಳು ಸಣ್ಣ ಪಟ್ಟಣಗಳಲ್ಲಿ ಹಾಗೂ 224 ಶಾಖೆಗಳು ನಗರ ಪ್ರದೇಶದಲ್ಲಿ ಇವೆ ಎಂದರು.
2020ರ ಜೂನ್ ಅಂತ್ಯಕ್ಕೆ ಆದ್ಯತಾ ವಲಯದಡಿ 2478 ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ 1670 ಕೋಟಿ ರೂ. ಸಾಲ ವಿತರಿಸಲಾಗಿದೆ. ಕೃಷಿ ವಲಯದಡಿ 1131 ಕೋಟಿ ರೂ. ಸಾಲ ನೀಡುವ ಗುರಿ ನಿಗದಿಪಡಿಸಲಾಗಿತ್ತು. ಈ ಪೈಕಿ 254 ಕೋಟಿ ರೂ. ಸಾಲ ವಿತರಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ 932 ಕೋಟಿ ರೂ. ಸಾಲದ ಗುರಿ ಇತ್ತು. ಈ ಪೈಕಿ 1218 ಕೋಟಿ ರೂ. ಸಾಲ ವಿತರಿಸಲಾಗಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ 3759 ಕೋಟಿ ರೂ. ಸಾಲ ನೀಡಲು ಗುರಿ ನಿಗದಿಪಡಿಸಲಾಗಿದೆ ಎಂದು ವಿವರಿಸಿದರು. ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಆರ್. ಅಣ್ಣಯ್ಯ ಮಾತನಾಡಿ, ಜಿಲ್ಲಾಡಳಿತ ಹಾಗೂ ಜಿಪಂ ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ನು ಬ್ಯಾಂಕ್‌ಗಳ ಅಧಿಕಾರಿಗಳು ತ್ವರಿತವಾಗಿ ಗಮನಿಸಿ, ಪರಿಹಾರ ಒದಗಿಸಬೇಕು ಎಂದರು. ನಬಾರ್ಡ್ ಸಹಾಯಕ ಮುಖ್ಯ ವ್ಯವಸ್ಥಾಪಕ ಮಯೂರ ಕಾಂಬಳೆ, ಪ್ರಿಯಾಂಕ ಇದ್ದರು.
ಹೆಸರು ಸೇರ್ಪಡೆಗೆ ಕಾಲಾವಕಾಶ : ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಅ. 8 ರ ವರೆಗೆ ಕಾಲಾವಕಾಶ ಇರುವುದರಿಂದ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಪದವೀಧರ ಅಧಿಕಾರಿಗಳು ಮತ್ತು ನೌಕರರು ಹತ್ತಿರದ ತಹಶೀಲ್ದಾರ್ ಕಚೇರಿಗಳಿಂದ ಮತದಾರರ ಹೆಸರು ಸೇರ್ಪಡೆ ಅರ್ಜಿ ಪಡೆದು ನೋಂದಣಿ ಮಾಡಿಕೊಳ್ಳಬಹುದು ಎಂದು ಜಿಪಂ ಸಿಇಒ ಡಾ| ಸತೀಶ ಹೇಳಿದರು.
ಜಿಲ್ಲೆಯ ಸ್ವ ಸಹಾಯ ಗುಂಪುಗಳು ಬ್ಯಾಂಕ್ ಖಾತೆಗಳನ್ನು ತೆರೆಯಲು ಪ್ರೋತ್ಸಾಹಿಸಲು ಪ್ಯಾನ್ ಸಂಖ್ಯೆಯನ್ನು ನೀಡುವುದರಿಂದ ವಿನಾಯಿತಿ ನೀಡಬೇಕು. ಇದರ ಜೊತೆಗೆ ಬ್ಯಾಂಕ್ ಅಧಿ ಕಾರಿಗಳುಮತ್ತು ಸಿಬ್ಬಂದಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
–ಡಾ| ಬಿ.ಸಿ. ಸತೀಶ, ಜಿಪಂ ಸಿಇಒ