ವಿಜಯಪುರ: ಭವಿಷ್ಯದಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಹೈನುಗಾರಿಕೆ ಉತ್ತೇಜನೆಗಾಗಿ ನಬಾರ್ಡ್ ನೆರವಿನೊಂದಿಗೆ ಪಶುಸಂಗೋಪನೆ ಇಲಾಖೆ, ಕೆಎಂಎಫ್ ಸಹಯೋಗದಲ್ಲಿ ವಿಶೇಷ ಯೋಜನೆ ರೂಪಿಸುವ ಚಿಂತನೆ ನಡೆದಿದೆ. ಕೋಟಿ ವೃಕ್ಷ ಅಭಿಯಾನದ ಮಾದರಿಯಲ್ಲಿ ಹೈನೋದ್ಯಮ ಬಲವರ್ಧನೆಗೆ ಯೋಜಿಸಿದ್ದು, ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.
ಸೋಮವಾರ ನಗರದ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಭವನದಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಕಾರ್ಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಈ ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ಈವರೆಗೆ ರೈತರಿಗೆ ನೀರಿನ ಕೊರತೆ ಇದ್ದ ಕಾರಣ ಹೈನುಗಾರಿಕೆ ಅಸಾಧ್ಯವಾಗಿತ್ತು. ಇದೀಗ ಬಬಲೇಶ್ವರ ವಿಧಾನಸಭಾ ಕ್ಷೇತ್ರ ಸಂಪೂರ್ಣ ನೀರಾವರಿ ಸೌಲಭ್ಯ ಕಂಡಿದ್ದು, ಹಸಿರು ಮೇವು ಹಾಗೂ ಅಗತ್ಯ ನೀರು ಲಭ್ಯವಿದೆ. ಬಹುತೇಕ ರೈತರು ಕೃಷಿಗಾಗಿ ತೋಟಗಳಲ್ಲಿ ವಾಸವಿದ್ದು, ಕೃಷಿ ಉಪಕಸಬು ಆಗಿ ಹೈನುಗಾರಿಕೆಗೆ ಉತ್ತೇಜನ ನೀಡಲು ಇದು ಸೂಕ್ತ ಸಮಯ. ಇದರಿಂದ ರೈತರಿಗೆ ಹೆಚ್ಚುವರಿ ಆರ್ಥಿಕ ಆದಾಯಕ್ಕೆ ನೆರವಾಗಲಿದೆ ಎಂದರು.
ಜಿಲ್ಲೆಯ ಕೃಷಿ ಬಲವರ್ಧನೆಯಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರು ಸ್ವಾವಲಂಬಿ ಜೀವನಕ್ಕಾಗಿ ಹೈನುಗಾರಿಕೆ ಸಹಕಾರಿ ಆಗಲಿದೆ. ಕೃಷಿ-ತೋಟಗಾರಿಕೆಗೆ ಅದರಲ್ಲೂ ದ್ರಾಕ್ಷಿ ಬೆಳೆಗಾರರಿಗೆ ಸ್ಥಳೀಯವಾಗಿಯೇ ಉತ್ತಮ ಗೊಬ್ಬರವೂ ಲಭ್ಯವಾಗಲಿದೆ. ಇದರಿಂದ ರಸಗೊಬ್ಬರ ಖರೀದಿಗೆ ಮಾಡುವ ಹಣವೂ ಉಳಿತಾಯವಾಗಲಿದೆ. ಹೀಗಾಗಿ ಸದರಿ ಯೋಜನೆ ಅನುಷ್ಠಾನ ಹಂತದಲ್ಲಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಬಬಲೇಶ್ವರ ಕ್ಷೇತ್ರದಲ್ಲಿ 22 ಯಾತ್ರಿ ನಿವಾಸ ಮಂಜೂರಾಗಿದ್ದು, 12 ಕಾಮಗಾರಿ ವಿಳಂಬವಾಗಿವೆ. ವಿವಿಧ ಕಾರಣಗಳಿಂದ ವಿಳಂಬವಾಗಿರುವ ಈ ಕಾಮಗಾರಿಗಳಲ್ಲಿ ಪ್ರತಿ ಸಮಸ್ಯೆಗೂ ಸ್ಥಳೀಯ ಪ್ರಮುಖರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡು, ಯೋಜನೆ ಮುಗಿಸುವಂತೆ ನಿರ್ದೇಶನ ನೀಡಿದರು. ಅಲ್ಪಸಂಖ್ಯಾತ, ಬಿ.ಸಿ.ಎಂ, ಡಿ.ದೇವರಾಜು ಅರಸು ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯ ಯುನಿಟ್ ಕಾಸ್ಟ್ ಕಡಿಮೆ ಇದ್ದು, ಇದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಕಾರಣ ಪ್ರತಿ ಬೋರ್‌ವೆಲ್‌ನ ನಿಗದಿತ ಮೊತ್ತದ ಮಿತಿ ಹೆಚ್ಚಿಸಿದಾಗ ಮಾತ್ರ ಫಲಾನುಭವಿಗಳಿಗೆ ಉಪಯೋಗ ಆಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಕ್ಷೇತ್ರದ ವಿವಿಧ ಗ್ರಾಮಗಳ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಗಮನಕ್ಕೆ ತಂದು, ಅವುಗಳನ್ನು ತುರ್ತಾಗಿ ಪರಿಹರಿಸಲು ಸೂಚಿಸಿದರು. ಭೂ-ಸೇನಾ ನಿಗಮ, ಕೆ.ಬಿ.ಜೆ.ಎನ್.ಎಲ್, ಕರ್ನಾಟಕ ನೀರಾವರಿ ನಿಗಮ, ಸಣ್ಣ ನೀರಾವರಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಹೆಸ್ಕಾಂ, ತಿಕೋಟಾ ಮತ್ತು ಬಬಲೇಶ್ವರ ತಾಲೂಕಿಗೆ ಸಂಬಂ ಧಿಸಿದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.