Advertisement

ಶಿಕ್ಷಣ ವ್ಯವಸ್ಥೆ ಸುಧಾರಣೆಯಿಂದ ಪ್ರಗತಿ

01:34 PM Jan 13, 2022 | Team Udayavani |

ಔರಾದ: ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆಗಬೇಕಾದಲ್ಲಿ ಮೊದಲು ಅಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಲು ಮುಂದಾಗಬೇಕು. ಅಂದಾಗ ಮಾತ್ರ ದೇಶ ನಿಜವಾದ ಅಭಿವೃದ್ಧಿ ಆಗುತ್ತದೆ ಎಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಹಂಗರಗಾ ಗ್ರಾಮದಲ್ಲಿ ಬುಧವಾರ ಪ್ರೌಢಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಅಭಿವೃದ್ಧಿಯು ಶಿಕ್ಷಣ ಮತ್ತು ಆರೋಗ್ಯದ ಮೇಲೆ ನಿಂತಿದೆ. ತಾಲೂಕು ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ನುಡಿದರು.

ಔರಾದ್‌ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ, ಬಡ ಹಾಗೂ ಪ್ರತಿಭಾವಂತ ಮಕ್ಕಳ ಅನುಕೂಲಕ್ಕಾಗಿ ಶಾಲಾ ಕಟ್ಟಡಗಳು, ವಿಜ್ಞಾನ ಪ್ರಯೋಗಾಲಯ ಕೊಠಡಿಗಳು, ಅಂಗನವಾಡಿ ಕಟ್ಟಡಗಳು ನಿರ್ಮಿಸುತ್ತಿದ್ದು, ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಕ್ರಮ ವಹಿಸಲಾಗುತ್ತಿದೆ. ಗಡಿ ಭಾಗದಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರತ್ಸಾಹಿಸುವ ಉದ್ದೇಶದಿಂದ ಹಂಗರಗಾ ಗ್ರಾಮದಲ್ಲಿ ವಸತಿ ನಿಲಯ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದು ನಾವುಗಳು ಅರಿಯಬೇಕಿದೆ. ಕೋವಿಡ್‌ ಕಾರಣದಿಂದ ಎರಡು ವರ್ಷಗಳು ಮಕ್ಕಳು ಶಾಲೆಯಿಂದ ದೂರ ಉಳಿದಿದ್ದು, ಶಿಕ್ಷಕರು ಕಾಳಜಿ ಪೂರ್ವಕವಾಗಿ ಕೆಲಸ ಮಾಡುವಂತೆ ಸೂಚಿಸಿದರು.

ಕೋವಿಡ್‌ ಕಾರಣದಿಂದ ಕಳೆದ ಮೂರು ವರ್ಷಗಳಿಂದ ತಾಲೂಕು ಮಟ್ಟದ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ. ಕೋವಿಡ್‌ ನಿಯಂತ್ರಣಕ್ಕೆ ಬಂದಿದ್ದಲ್ಲಿ ಪ್ರಸ್ತುತ ವರ್ಷ ಪ್ರತಿಭಾ ಪುರಸ್ಕಾರ ಸಮಾರಂಭ ನೆರವೇರಿಸಿ ಮಕ್ಕಳನ್ನು ಹುರಿದುಂಬಿಸಲಾಗುವುದು ಎಂದರು.

Advertisement

ಆರೋಗ್ಯಕ್ಕೆ ಮಹತ್ವ ನೀಡಿ

ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಕೋವಿಡ್‌ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ. ಮೂರನೇ ಅಲೆಯಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಕೂಡ ಕೋವಿಡ್‌ ಪ್ರಕರಣಗಳು ಕಂಡು ಬರುತ್ತಿದ್ದು, ಎಲ್ಲರೂ ಜಾಗೃತಿವಹಿಸಿ ಕೋವಿಡ್‌ ನಿಯಂತ್ರಣಕ್ಕೆ ನಿಯಮಗಳು ಪಾಲಿಸಿ ಜಿಲ್ಲಾಡಳಿತಕ್ಕೆ ಕೈ ಜೋಡಿಸಬೇಕಿದೆ ಎಂದರು.

ಹಂಗರಗಾ ಗ್ರಾಮದಲ್ಲಿರುವ ಪ್ರೌಢಶಾಲೆಗೆ ಅಗತ್ಯವಾದ ಶೌಚಾಲಯ, ಕೊಳವೆ ಬಾವಿ ಸೇರಿದಂತೆ ಅಗತ್ಯ ಸೌಲಭ್ಯಗಳು ಪೂರೈಸಲಾಗುವುದು, ಪದವಿ ಪೂರ್ವ ಕಾಲೇಜಿಗೂ ಕೂಡ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ರೈತರ ನೆರವಿಗೆ ಸದಾ ಸಿದ್ಧ

ಬೆಳೆ ಹಾನಿಯಾದ ರೈತರು ವಿಮಾ ಹಣ ಬಂದಿಲ್ಲವೆಂದು ಹೆದರುವ ಅವಶ್ಯಕತೆಯಿಲ್ಲ. ಕೃಷಿ ಅಧಿಕಾರಿಗಳಿಗೆ ವಿಷಯದ ಕುರಿತು ಚರ್ಚಿಸಿದ್ದು, ಶೀಘ್ರವೇ ಪುನಃ ಬೆಳೆಹಾನಿಯಾದ ಬಗ್ಗೆ ಸಮೀಕ್ಷೆ ನಡೆಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮಾರುತಿ ಚವ್ಹಾಣ, ಬಾಲಾಜಿ ನಾಯ್ಕ, ಬಿಇಒ ಎಚ್‌.ಎಸ್‌ ನಗನೂರ್‌, ಬಿಆರ್‌ಸಿ ನಾರಾಯಣ ರಾಠೊಡ್‌, ಬಾಲಾಜಿ ವಾಘಮೋಡೆ, ರಾಮಶೆಟ್ಟಿ ಪನ್ನಾಳೆ, ಸಚಿನ ರಾಠೊಡ್‌, ದೇವಿದಾಸ ಪಾಟೀಲ್‌ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next