ಚಿತ್ತಾಪುರ: ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕವಿರುವ ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ಪ್ರಗತಿ ಕಾಲೋನಿ ಯೋಜನೆ ಜಾರಿಗೆ ತರಲಾಗಿದ್ದು, ಪ್ರತಿ ತಾಂಡಾಕ್ಕೆ 10 ಲಕ್ಷ ರೂ. ದಿಂದ 1.50 ಕೋಟಿ ರೂ. ವರೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಈಗಾಗಲೇ ರಾಜ್ಯದ 46 ತಾಂಡಾಗಳನ್ನು ಯೋಜನೆಗಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ನಡೆದ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿ ಸಲಾಗಿದ್ದ ಸಂತ ಸೇವಾಲಾಲ್ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹುಮನಾಬಾದ ಬಳಿಯ ಲಾಲಧರಿ ಹಾಗೂ ಆನೆಗುಂದಿ ಬಳಿ ತಾಂಡಾ ಜನರಿಗಾಗಿ ತರಬೇತಿ ಕೇಂದ್ರ ತೆರೆಯಲಾಗಿದೆ. ಅಲ್ಲಿ 200 ಜನರಿಗೆ ಕಸೂತಿ ಕಲೆ ತರಬೇತಿ ಕೊಡಲಾಗುತ್ತಿದೆ. ಈ ತರಬೇತಿಗಾಗಿ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ತಾಂಡಾ ಅಭಿವೃದ್ಧಿ ನಿಗಮ ಅನುದಾನದ ಕೊರತೆ ಎದುರಿಸುತಿತ್ತು. ನಾನು ಸಮಾಜ ಕಲ್ಯಾಣ ಸಚಿವನಾದ ಬಳಿಕ ಸಾಕಷ್ಟು ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಂಡು ಸುರಗಂಡನಕೊಪ್ಪ ಗ್ರಾಮದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸಂತ ಸೇವಾಲಾಲ್ ಕುರಿತು ಸಮಗ್ರ ಚಿಂತನಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗದ ಜನರ ಅಭ್ಯುದಯಕ್ಕಾಗಿ ರಾಜ್ಯ ಸರ್ಕಾರ ಈ ಸಾಲಿನಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಒಟ್ಟು 31000 ಕೋಟಿ ರೂ. ಅನುದಾನ ತೆಗೆದಿರಸಲಾಗಿದೆ. ಈ ಅನುದಾನದಲ್ಲಿ ಒಟ್ಟು ಜನಸಂಖ್ಯೆಯ 24 ಪ್ರತಿಶತ ಜನ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದವರು ವಾಸವಾಗಿರುವ ಪ್ರದೇಶಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು.
ತಾಂಡಾ ಅಭಿವೃದ್ಧಿ ನಿಗಮದ ಎಂಡಿ ಹೀರಾಲಾಲ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸತೀಶ, ಜಿಪಂ ಸದಸ್ಯರಾದ ಶಿವರುದ್ರ ಭೀಣಿ, ಶಿವಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ್ ಸಾಹೇಬ್, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿ ನಾಲವಾರ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಉಪಾಧ್ಯಕ್ಷ ಹರಿನಾಥ ಚವ್ಹಾಣ, ಬಂಜಾರ ಸಮಾಜದ ಅಧ್ಯಕ್ಷ ರವಿ ರಾಠೊಡ, ಮುಖಂಡರಾದ ರಮೇಶ ಮರಗೋಳ, ವೀರಣ್ಣಗೌಡ ಪರಸರೆಡ್ಡಿ, ಭೀಮರಾಯ ಹೊತಿನಮಡಿ, ರವಿ ಚವ್ಹಾಣ, ಆರ್.ಬಿ. ಚವ್ಹಾಣ, ಗೋವಿಂದ ನಾಯಕ, ಸುಭಾಷ ಜಾಧವ್ ಮತ್ತಿತರರು ಇದ್ದರು.
ತಾಪಂ ಸದಸ್ಯ ನಾಮದೇವ ರಾಠೊಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಓಂಕಾರ ನಿರೂಪಿಸಿದರು.