Advertisement

Congress; ಮತ್ತೆ ಪರಮೇಶ್ವರ್‌-ಜಾರಕಿಹೊಳಿ ಭೇಟಿ: ಯಾಕೆ ಕುತೂಹಲ?

12:15 AM Oct 07, 2024 | Team Udayavani |

ತುಮಕೂರು: ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕುಣಿಕೆ ಬಿಗಿಯಾಗುತ್ತಿದ್ದಂತೆ ಇನ್ನೊಂದು ಕಡೆ ಕಾಂಗ್ರೆಸ್‌ ಸರಕಾರದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಕಾಂಗ್ರೆಸ್‌ನ ದಲಿತ ನಾಯಕರು ಮೇಲಿಂದ ಮೇಲೆ ಭೇಟಿ ಯಾಗುತ್ತಿರುವುದು ಕುತೂಹಲಕ್ಕೆ ಕಾರಣ ವಾಗಿದೆ. ಇತ್ತೀಚೆಗಷ್ಟೇ ಗೃಹಸಚಿವ ಡಾ| ಜಿ. ಪರಮೇಶ್ವರ್‌ ಅವರನ್ನು ಭೇಟಿಯಾಗಿದ್ದ ಸಚಿವ ಸತೀಶ್‌ ಜಾರಕಿಹೊಳಿ ಈಗ ಮತ್ತೂಮ್ಮೆ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.

Advertisement

ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇರುವ ಗೆಸ್ಟ್‌ ಹೌಸ್‌ನಲ್ಲಿ ಪರಮೇಶ್ವರ್‌ ಅವರನ್ನು ಸತೀಶ್‌ ಜಾರಕಿಹೊಳಿ ಭೇಟಿಯಾಗಿ ಗೌಪ್ಯ ಮಾತುಕತೆ ನಡೆಸಿದರು. ಏನು ಮಾತನಾಡಿದ್ದಾರೆನ್ನುವುದು ತಿಳಿದು ಬಂದಿಲ್ಲ. ಸತೀಶ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಪರಮೇಶ್ವರ್‌ ನನ್ನನ್ನು ಊಟಕ್ಕೆ ಕರೆದಿದ್ದರು. ಹೀಗಾಗಿ ಊಟ ಮಾಡಲು ಬಂದಿದ್ದೆ ಅಷ್ಟೇ ಎಂದರು. ಬೇರೊಂದು ಕಾರ್ಯಕ್ರಮವೂ ಇಲ್ಲಿಯೇ ಇದ್ದ ಕಾರಣ ಬಂದಿದ್ದೆ. ಆಗ ಸಾಹೇಬ್ರನ್ನು ನೋಡ್ಕೊಂಡ್‌ ಹೋದೆ ಅಷ್ಟೇ, ಬೇರೆ ಏನು ಚರ್ಚೆ ನಡೆಯುತ್ತದೆ ನಮ್ಮ ನಡುವೆ ಎಂದು ಪ್ರಶ್ನಿಸಿದರು.

ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಮಾಧ್ಯಮ ದವರ ಪ್ರಶ್ನೆಗೆ, ಅದು ಕೂಡ ಅಷ್ಟೇ, ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರು. ಹೀಗಾಗಿ ಭೇಟಿಯಾಗಿದ್ದೇನೆ ಅಷ್ಟೇಎಂದರು. ದಲಿತ ಸಿಎಂ ಕೂಗಿನ ವಿಚಾರಕ್ಕೆ ಪ್ರತಿ ಕ್ರಿಯಿಸಿ, ದಲಿತ ಸಿಎಂ ವಿಚಾರದ ಪ್ರಸ್ತಾವನೆ ಸದ್ಯಕ್ಕಿಲ್ಲ, ಇದ್ದಾಗ ನಾವೇ ಕರೆದು ಹೇಳುತ್ತೇವೆ ಎಂದರು.

ನಮ್ಮ ಬೇಡಿಕೆ ಅಂತ ಸದ್ಯಕ್ಕೆ ಯಾವುದೂ ಇಲ್ಲ ಎಂದು ಜಾರಕಿಹೊಳಿ ಹೇಳಿದರು. ಸಿಎಂ ಹುದ್ದೆ ಖಾಲಿಯೇ ಇಲ್ಲ, ಯಾರಿಗೆ ಮಾಡ್ತೀರಿ? ಇರೋದು ಒಂದೇ ಸ್ಥಾನ, ಆ ತರಹದ ಸನ್ನಿವೇಶ ಇಲ್ಲ ಎಂದರು.

ಕುತೂಹಲ ಮೂಡಿಸುತ್ತಿರುವ ಭೇಟಿಗಳು
ಈಚೆಗೆ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಡಾ| ಜಿ. ಪರಮೇಶ್ವರ್‌ ನಿವಾಸಕ್ಕೆ ತೆರಳಿ ಸುಮಾರು ಅರ್ಧ ಗಂಟೆ ಗೌಪ್ಯ ಮಾತುಕತೆ ನಡೆಸಿದ್ದರು. ಬಳಿಕ ಸಚಿವ ಮಹದೇವಪ್ಪ ನಿವಾಸದಲ್ಲಿ ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದರು. ಮೂವರು ದಲಿತ ಸಚಿವರು ಒಂದೆಡೆ ಸೇರಿ ಚರ್ಚೆ ನಡೆಸಿದ್ದು ಕುತೂಹಲವನ್ನು ಹುಟ್ಟುಹಾಕಿತ್ತು.

Advertisement

ಇದಾದ ಬಳಿಕ ದಿಢೀರನೆ ದಿಲ್ಲಿಗೆ ತೆರಳಿದ್ದ ಸತೀಶ್‌ ಜಾರಕಿಹೊಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಿದ್ದರು. ಈ ವೇಳೆ ತಮ್ಮ ಸಭೆಗಳ ಮಾಹಿತಿಯನ್ನು ಹೇಳಿ ಬಂದಿದ್ದಾರೆ ಎನ್ನಲಾಗಿದೆ. ಅಲ್ಲಿಂದ ಬಂದವರು ಈಗ ಪರಮೇಶ್ವರ್‌ ಅವರನ್ನು ಪುನಃ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ಮುಂದಿನ ಸಿಎಂ ಸತೀಶ್‌ ಜಾರಕಿಹೊಳಿ: ಘೋಷಣೆ!
ತುಮಕೂರಿನಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಕಾರ್ಯಕ್ರಮದಲ್ಲಿ, ಮುಂದಿನ ಮುಖ್ಯಮಂತ್ರಿ ಸತೀಶ್‌ ಜಾರಕಿಹೊಳಿ ಎಂದು ಅವರ ಮುಂದೆಯೇ ದಲಿತ ನಾಯಕರು ಮತ್ತು ಮುಖಂಡರು ಘೋಷಣೆ ಕೂಗಿದರು. ಆದರೆ ಜಾರಕಿಹೊಳಿ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಹೊರಟರು.

ಯಾಕೆ ಕುತೂಹಲ?
ರಾಜ್ಯದಲ್ಲಿ ಪ್ರಸ್ತುತ ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹ
ಈ ಬೆನ್ನಲ್ಲೇ ಡಿಸಿಎಂ ಡಿಕೆಶಿ, ಪರಮೇಶ್ವರ್‌ ಭೇಟಿ, ಗೌಪ್ಯ ಮಾತುಕತೆ
ಅನಂತರ ಸತೀಶ್‌ ಜಾರಕಿಹೊಳಿ, ಪರಮೇಶ್ವರ್‌, ಮಹದೇವಪ್ಪ ಮಾತುಕತೆ
ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜತೆ ಜಾರಕಿಹೊಳಿ ಗುಪ್ತ ಮಾತು
ಮತ್ತೆ ಪರಂ-ಜಾರಕಿಹೊಳಿ ಭೇಟಿಯಿಂದ ಗರಿಗೆದರಿದ ಕುತೂಹಲ
ತೆರೆಮರೆಯಲ್ಲಿ ಕಾಂಗ್ರೆಸ್‌ ಪಕ್ಷದೊಳಕ್ಕೆ ವಿಶೇಷ ಬೆಳವಣಿಗೆ: ವಿಶ್ಲೇಷಣೆ

Advertisement

Udayavani is now on Telegram. Click here to join our channel and stay updated with the latest news.

Next