Advertisement

ರಾಯರ ಅನುಗ್ರಹದಿಂದಲೇ ಪ್ರಗತಿ: ಸುಬುಧೇಂದ್ರ ಶ್ರೀ

03:20 PM Aug 30, 2018 | Team Udayavani |

ರಾಯಚೂರು: ಮಂತ್ರಾಲಯ ಮಠದಿಂದ ಏನೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆದರೂ ಅದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಲೇ ವಿನಃ ನಮ್ಮಿಂದ ಅಲ್ಲ. ನಾವು ನೀವೆಲ್ಲ ಪದನಿಮಿತ್ತ ಮಾತ್ರ ಎಂದು
ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನುಡಿದರು.

Advertisement

ಶ್ರೀ ಗುರು ರಾಯರ 347ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಬುಧವಾರ ರಥೋತ್ಸವಕ್ಕೆ ಚಾಲನೆ
ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಗುರು ರಾಯರ ಅನುಗ್ರಹವಿಲ್ಲದೇ ಏನೂ ಆಗುವುದಿಲ್ಲ. ಇಂದು ಮಠ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ದೇಶ ವಿದೇಶಗಳಲ್ಲಿ ಶಾಖಾ ಮಠಗಳ ಸ್ಥಾಪನೆಗೆ ಮುಂದಾಗಿದೆ. ಮಂತ್ರಾಲಯದಲ್ಲೂ ಮಠದಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇದೆಲ್ಲವನ್ನು ನಾವು ಪದನಿಮಿತ್ತರಾಗಿ ಮಾಡುತ್ತಿದ್ದೇವೆ ಅಷ್ಟೇ ಎಂದರು.

ದೇಶ, ವಿದೇಶದಿಂದ ಬಂದ ಭಕ್ತರಿಗೆ ಗುರುಗಳು ಅನುಗ್ರಹಿಸುತ್ತಾರೆ. ಭಕ್ತರು ಎಲ್ಲಿದ್ದರೂ ಅಲ್ಲಿಗೆ ಗುರುಸಾರ್ವಭೌಮರು ರಥಾರೂಢರಾಗಿ ತೆರಳುತ್ತಾರೆ. ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಾರೆ. ಗುರುಗಳು ಎಲ್ಲ ವರ್ಗದ ಭಕ್ತರನ್ನು ಅನುಗ್ರಹಿಸುವ ಮೂಲಕ ವಿಶ್ವಗುರುಗಳಾಗಿದ್ದಾರೆ. ಭಕ್ತರಿಂದ ಭಕ್ತರಿಗಾಗಿಯೇ ಮಠ ಅಭಿವೃದ್ಧಿಗೊಳ್ಳುತ್ತಿದೆ. ಕೊಡಗು ಹಾಗೂ ಕೇರಳ ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ಶ್ರೀಮಠ ಈಗಾಗಲೇ ತಾತ್ಕಾಲಿಕ ಪರಿಹಾರ ಘೋಷಿಸಿದೆ. ಮಠದ ಪ್ರತಿನಿಧಿಗಳು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಮಾಹಿತಿ ನೀಡಿ ಮಾಹಿತಿ ಪಡೆಯುತ್ತಿದ್ದು, ಚಾತುರ್ಮಾಸ್ಯ ಮುಗಿದ ಬಳಿಕ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದರು.

ವಿದ್ವಾನ್‌ ರಾಜಾ ಎಸ್‌. ಗಿರಿಯಾಚಾರ್ಯ, ಪ್ರಾಚಾರ್ಯ ವಾದಿರಾಜಾಚಾರ್ಯ, ಮಂತ್ರಾಲಯದ ಶಾಸಕ ಬಾಲನಾಗಿರೆಡ್ಡಿ, ಶಾಸಕ ಅರವಿಂದ ಲಿಂಬಾವಳಿ ಹಾಗೂ ಶ್ರೀಮಠದ ಅಧಿಕಾರಿಗಳು ಸಿಬ್ಬಂದಿ, ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next