ಕಲಬುರಗಿ: 2020ನೇ ವರ್ಷ ನಿಜಕ್ಕೂ ಯಾರಿಗೂ ಸಂತಸ, ಸಂತೃಪ್ತಿ ತಂದಿಲ್ಲ.ಕೋವಿಡ್ ಮಹಾಮಾರಿ ರೋಗದಿಂದ ಇಡೀ ಪ್ರಪಂಚ ತಲ್ಲಣಗೊಂಡಿದ್ದರಿಂದ ಇಡೀ ಸಮಾಜ ಅದರಲ್ಲೂ ವಿದ್ಯಾರ್ಥಿಗಳನ್ನು ರೂಪಿಸುವ ಶಿಲ್ಪಿ (ಶಿಕ್ಷಕ) ಸಂಕಷ್ಟದಲ್ಲಿದ್ದಾನೆ ಎಂದು ಕಾಯಕ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಶಿವರಾಜ ಟಿ. ಪಾಟೀಲ ಹೇಳಿದರು.
ನಗರದ ಕಾಯಕ ಫೌಂಡೇಶನ್‌ನ ಕಾಯಕ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಂಗ್ಲ ಭಾಷೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಅನೇಕಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಮತ್ತು ಸಂಸ್ಥೆಗಳು ಅಪಾರ ನಷ್ಟವನ್ನಷ್ಟೇ ಅನುಭವಿಸದೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳನ್ನುಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಶೈಕ್ಷಣಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳು ತೊಂದರೆ ಅನುಭವಿಸುತ್ತಿದ್ದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರ ವರ್ಗದವರ ಸಮಸ್ಯೆ ಹೇಳತೀರದು. ಅನೇಕ ಶಿಕ್ಷಣ ಸಂಸ್ಥೆಗಳು ಈಗಾಗಲೇ ತಮ್ಮ ಶಿಕ್ಷಕರನ್ನು ನೌಕರಿಯಿಂದ ವಜಾ ಮಾಡಿರುವುದು ಉದಾಹರಣೆಗಳು ಒಂದೆರಡಲ್ಲ ಎಂದರು.
ಕೆಲವು ಸಂಸ್ಥೆಗಳು ತಮ್ಮ ಶಿಕ್ಷಕರಿಗೆ ಅರ್ಧದಷ್ಟು ಸಂಬಳ ಮಾತ್ರ ನೀಡುತ್ತಿವೆ. ಇದು ನಿಜಕ್ಕೂ ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಸ್ಥಿತಿ ತಿಳಿಸುತ್ತದೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಖಾಸಗಿ ಶಾಲೆ ಶಿಕ್ಷಕರಿಗೆ ಆರ್ಥಿಕವಾಗಿ ಸ್ಪಂದಿಸಬೇಕಿತ್ತು. ಪಾಲಕರು ಸಹಾಯಕ್ಕೆ ಮುಂದೆ ಬಂದು ಸಹಾಯ ಹಸ್ತ(ವಾರ್ಷಿಕ ಫೀಸ್ ಕೊಡುವುದರ ಮೂಲಕ) ಚಾಚಬೇಕಿತ್ತು ಎಂದರು.
ನಮ್ಮ ಸಂಸ್ಥೆ ಸಮಾಜದ ಪರ ಮತ್ತು ವಿದ್ಯಾರ್ಥಿಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಮತ್ತು ಶಿಕ್ಷಕರಿಗೂ ಭಾಷಾ ಕೌಶಲ್ಯ ವೃದ್ಧಿಸಿಕೊಡುವ ದೃಷ್ಟಿಕೋನ ಇಟ್ಟುಕೊಂಡು ಕಾರ್ಯಾಗಾರಹಮ್ಮಿಕೊಳ್ಳಲಾಗಿದೆ. ಅಲ್ಲದೇ ಈ ಸಂಸ್ಥೆಯಶಿಕ್ಷಕರಿಗೆ ಮಾತ್ರ ಈ ಕಾರ್ಯಾಗಾರ ಹಮ್ಮಿಕೊಳ್ಳದೆ, ನಗರದ ಇತರ ಶಾಲೆಗಳ ಎಲ್ಲ ಶಿಕ್ಷಕರು ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಲಾಭ ನೀಡಬೇಕೆಂದು ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷೆ ಸಪ್ನಾ ಶಿವರಾಜ ಪಾಟೀಲ ಮೇಡಂ ಕಾರ್ಯಗಾರದಲ್ಲಿ ಭಾಗವಹಿಸಿದ ಶಿಕ್ಷಕ- ಶಿಕ್ಷಕಿಯರಿಗೆ ಸರ್ಟಿಫಿಕೇಟ್ ನೀಡಿದರು. ಸೈಯಿದಾ ಸಾದಿಯಾ, ವೈಶಾಲಿ.ಎನ್.ಗೋಟಗಿ, ಗೋವಿಂದ ಕುಲಕರ್ಣಿ, ಪ್ರಾಂಶುಪಾಲ ಗುರುಬಸಯ್ಯ ಸಾಲಿಮಠ, ಸಂಸ್ಥೆಯ ಆಡಳಿತಗಾರರಾದ ಪ್ರವೀಣ ಕುಲಕರ್ಣಿ ಇತರರಿದ್ದರು.