ಬೀದರ: ಬಸವ ತತ್ವ ಯಾವುದೇ ಒಂದು ಜಾತಿ, ಮತ, ಪಂಥ ಅಥವಾ ಒಂದು ಸಮುದಾಯದ ಸೊತ್ತಲ್ಲ, ಅದು ಎಲ್ಲ ಸಮುದಾಯಗಳನ್ನೊಳಗೊಂಡ ಜನಪರವಾದ ಚಿಂತನಶೀಲ ತತ್ವ. ಎಂದು ಬಸವಶ್ರೀ ಪುರಸ್ಕೃತ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ನುಡಿದರು.
ಜಿಲ್ಲಾ ಮತ್ತು ತಾಲೂಕು ಕಸಾಪದಿಂದ ನಗರದ ಸಿದ್ದರಾಮ ಶರಣರು ಬೆಲ್ದಾಳ ಅವರ ನಿವಾಸದಲ್ಲಿ ನಡೆದ 28ನೇ ಮನೆಯಂಗಳದಲ್ಲಿ ಮಾತು ಸಂವಾದ ಕಾರ್ಯಕ್ರಮದಲ್ಲಿ ತಮ್ಮಜೀವನಾನುಭವಗಳನ್ನು ಹಂಚಿಕೊಂಡ ಅವರು, ಶೋಷಿತ ಸಮುದಾಯದಲ್ಲಿ ಜನಿಸಿ ಬಾಲ್ಯದಲ್ಲಿ ಅಂಬೇಡ್ಕರ್ ಅವರು ಅನುಭವಿಸಿದ ಅಸ್ಪೃಶ್ಯತೆ, ಅವಮಾನಗಳನ್ನು ನಾನೂ ಅನುಭವಿಸುವಂತಾಯಿತು. ನಾನು ಓದಿದ್ದು ಕೇವಲ ಮೂರನೆಯ ತರಗತಿವರೆಗೆ ಮಾತ್ರ ಆದರೆ ಛಲದಿಂದ ಅಧ್ಯಾತ್ಮದ ಅಧ್ಯಯನ ಮಾಡಿದೆ. ಅದಕ್ಕೆ ನಮ್ಮ ತಾಯಿ ತಂದೆಯವರುಭಕ್ತಿ ಮಾರ್ಗದಲ್ಲಿರುವುದೆ ಬಹುದೊಡ್ಡ ಪ್ರಭಾವ ಬೀರಿದರೆ, ಮೌಡ್ಯತೆಗಳಿಂದ ಹೊರಬರಲು ವಚನ ಸಾಹಿತ್ಯ ನನಗೆ ಪ್ರೇರಣೆಯಾಯಿತು ಎಂದರು.
ಡಾ. ಕಾಶಿನಾಥ ಚಲುವಾ ಅವರು ನಡೆಸಿಕೊಟ್ಟಸಂವಾದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಬುದ್ದ ನನ್ನ ತಲೆ, ಹೃದಯ ಬಸವಣ್ಣ, ದೇಹವೇ ಅಂಬೇಡ್ಕರ್. ಹಾಗಾಗಿ ಈ ಮೂವರುಬೇರೆ ಬೇರೆಯಲ್ಲ. ಈ ಸತ್ಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಇಲ್ಲವಾದಲ್ಲಿಯಾರಿಗೂ ಉಳಿಗಾಲವಿಲ್ಲ. ಎಲ್ಲರೂಮನುವಾದಿಗಳ ಕೈಗೊಂಬೆ ಆಗಬೇಕಾಗುತ್ತದೆಂದು ಎಚ್ಚರಿಸುತ್ತ ಎಲ್ಲ ಸಮುದಾಯವರು ಒಂದಾಗಿ ಸಮಭಾವದಿಂದ ಕೂಡಬೇಕು ಎಂಬುದು ತಮ್ಮ ಬದುಕಿನ ಕೊನೆಯ ಆಸೆ ಎಂದು ವಿವರಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ತಮ್ಮ ಮಾತು ಮತ್ತು ಕೃತಿಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಸರಳ ಸಾತ್ವಿಕ ವ್ಯಕ್ತಿ ಎಂದರೆ ಸಿದ್ದರಾಮ ಶರಣರು ಎಂದು ಬಣ್ಣಿಸಿದರು.
ಕಸಾಪ ತಾಲೂಕಾಧ್ಯಕ್ಷ ಎಂ.ಎಸ್ ಮನೋಹರ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮ ಬೋಧಕರು ದಾರಿ ತಪ್ಪಿ ನಡೆಯದಂತೆ ಎಚ್ಚರ ವಹಿಸಿದರೆ ಮಾತ್ರ ಅನುಯಾಯಿಗಳು ಸರಿದಾರಿಯಲ್ಲಿರುತ್ತಾರೆ. ಕೋಮುವಾದ, ಜಾತಿ ಜಗಳ, ತಪ್ಪಿಸಲು ಎಲ್ಲಾ ಧಾರ್ಮಿಕ ಮುಖಂಡರು ಒಂದಾಗಿ ಧರ್ಮಸಮನ್ವಯತೆ ಸಾಧಿಸುವ ಮೂಲಕ ಜಾಗತಿಕ ಶಾಂತಿ, ಸೌಹಾರ್ದತೆ ನೆಲೆಗೊಳಿಸುವುದು ಇಂದಿನ ಅಗತ್ಯವಾಗಿದೆ. ಇದೆ ನಿಜವಾದ ಧರ್ಮ ಬೋಧನೆ ಎಂದು ಅಭಿಪ್ರಾಯಪಟ್ಟರು.
ಶಿವಶಂಕರ ಟೋಕರೆ, ವಿದ್ಯಾವತಿ ಬಲ್ಲೂರ, ರಘುನಾಥ, ಜಗನ್ನಾಥ ಕಮಲಾಪುರೆ, ವೀರಶೆಟ್ಟಿ ಚನಶೆಟ್ಟಿ, ಶಿವಕುಮಾರ ಬೆಲ್ದಾಳ, ಸಿದ್ಧಾರೂಢ ಭಾಲ್ಕೆ ಮೊದಲಾದವರು ಭಾಗವಹಿಸಿದ್ದರು. ರೇವಣಪ್ಪ ಮೂಲಗೆ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ನಿರೂಪಿಸಿ ಡಾ. ಬಸವರಾಜ ಬಲ್ಲೂರ ವಂದಿಸಿದರು.