ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕರು ತಾಂತ್ರಿಕ ಕೋರ್ಸ್‌ಗಳ ಶಿಕ್ಷಣವನ್ನು ಯಾವ ವಿಶ್ವವಿದ್ಯಾಲಯಗಳಲ್ಲಿ ಪಡೆದಿದ್ದಾರೆ ಎಂಬ ಮಾಹಿತಿ ಕಲೆ ಹಾಕಲು ತೀರ್ಮಾನಿಸಲಾಗಿದೆ. ನಕಲಿ ಪದವಿ ಪಡೆದು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ನ್ಯಾಯಾಲಯದ ಆದೇಶದಂತೆ ಕ್ರಮ ತೆಗೆದುಕೊಳ್ಳಲು ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಸರ್ಕಾರ ಅಥವಾ ನಿರ್ದಿಷ್ಟ ಪ್ರಾಧಿಕಾರಗಳ ಅನುಮತಿ ಪಡೆಯದ ಮುಕ್ತ ವಿಶ್ವವಿದ್ಯಾಲಯ ಅಥವಾ ದೂರ ಶಿಕ್ಷಣ ಸಂಸ್ಥೆಗಳ ಮೂಲಕ ಎಂಜಿನಿಯರಿಂಗ್ ಅಥವಾ ಡಿಪ್ಲೋಮಾ ಪದವಿಗಳನ್ನು ಪಡೆದಿರುವ ಸಾಧ್ಯತೆ ಇದೆ. ಮಾನ್ಯತೆ ಇಲ್ಲದ ಮುಕ್ತ ವಿವಿಗಳಲ್ಲಿ ವಿವಿಧ ಪದವಿ ಪಡೆದು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಪ್ರಾಧ್ಯಾಪಕರ ವೃಂದದಲ್ಲಿ ಆಯ್ಕೆ ಹೊಂದಿ, ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ.
ಅಂತಹ ಪ್ರಾಧ್ಯಾಪಕರು ಹೊಂದಿರುವ ಪದವಿ ಹಾಗೂ ಸಂಸ್ಥೆಯ ವಿವರವನ್ನು ಇಲಾಖೆಗೆ ಸಲ್ಲಿಸಬೇಕು. ಸೂಕ್ತ ಪ್ರಾಧಿಕಾರಗಳಿಂದ ಅನುಮತಿ ಪಡೆಯದ ಸಂಸ್ಥೆಗಳಿಂದ ಪದವಿ ಪಡೆದು ಆಯ್ಕೆ ಹೊಂದಿದ ಪ್ರಾಧ್ಯಾಪಕರ ಕುರಿತು ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದ್ದಲ್ಲಿ, ಅಂತಹ ಮಾಹಿತಿಯನ್ನು ಜ.27ರೊಳಗೆ ಸಲ್ಲಿಸಬೇಕು ಎಂದು ಸರ್ಕಾರಿ ಹಾಗೂ ಅನುದಾನಿತ ಎಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಪ್ರಾಂಶುಪಾಲರಿಗೆ ಇಲಾಖೆ ನಿರ್ದೇಶಿಸಿದೆ.
ಆಯಾ ಸಂಸ್ಥೆಯ ಪ್ರಾಂಶುಪಾಲರು ಈ ಸಂಬಂಧ ಪ್ರಾಧ್ಯಾಪಕರ ಮಾಹಿತಿಯನ್ನು ಅಪ್‌ಲೋಡ್ ಮಾಡುವ ಮೊದಲು, ಖುದ್ದಾಗಿ ಪರಿಶೀಲಿಸಿ, ಎಲ್ಲ ಅಂಶಗಳನ್ನು ಗಮನಿಸಿ, ಅನುಮೋದನೆ ನೀಡಬೇಕು. ಅಪ್‌ಲೋಡ್ ಮಾಡಿದ ಮಾಹಿತಿಯನ್ನು ಅಗತ್ಯ ದಾಖಲೆಗಳೊಂದಿಗೆ ದೃಢೀಕರಿಸಿ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು. ಸ್ವೀಕೃತವಾದ ಮಾಹಿತಿಯಲ್ಲಿ ಯಾವುದೇ ಲೋಪದೋಷ ಕಂಡು ಬಂದಲ್ಲಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯನ್ನು ನೇರ ಹೊಣೆಯಾಗಿ ಮಾಡಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.