ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಉಡುಪಿ ರಾಮಚಂದ್ರ ರಾವ್ (85ವರ್ಷ) ಅವರು ಸೋಮವಾರ ನಸುಕಿನ ವೇಳೆ ವಿಧಿವಶರಾಗಿದ್ದಾರೆ. ಯುಆರ್ ರಾವ್ ಮೂಲತಃ ಉಡುಪಿಯ ಅದಮಾರುವಿನಲ್ಲಿ 1932, ಮಾರ್ಚ್ 10ರಂದು ಜನಿಸಿದ್ದರು. ಕೃಷ್ಣವೇಣಿ, ಲಕ್ಷ್ಮಿನಾರಾಯಣ ದಂಪತಿಯ ಪುತ್ರರಾದ ಯುಆರ್ ರಾವ್ ಉಡುಪಿ, ಅನಂತಪುರ, ಮದ್ರಾಸ್, ಬನಾರಸ್ ನಲ್ಲಿ ಶಿಕ್ಷಣ ಪಡೆದಿದ್ದರು. ಯುಆರ್ ರಾವ್ ಅವರು ಬಾಹ್ಯಾಕಾಶ ವಿಜ್ಞಾನಿಗಳಾಗಿ ನೀಡಿರುವ ಕೊಡುಗೆ ಅಪಾರ. ಭಾರತದ ಮೊದಲ ಉಪಗ್ರಹ ಆರ್ಯಭಟದ ರೂವಾರಿ ಯುಆರ್ ರಾವ್. ತದನಂತರ ಭಾಸ್ಕರ, ಆಪಲ್, ರೋಹಿಣಿ, ಇನ್ಸಾಟ್ 1, ಇನ್ಸಾಟ್ 2, ಐಆರ್ ಎಸ್ 1 ಸೇರಿದಂತೆ ಒಟ್ಟು 18 ಉಪಗ್ರಹಗಳ ನಿರ್ಮಾಣದಲ್ಲಿ ಮುಖ್ಯ ಮಾರ್ಗದರ್ಶರಾಗಿದ್ದರು. 1985ರಲ್ಲಿ ಭಾರತೀಯ ಸ್ಪೇಸ್ ಕಮಿಷನ್ ನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ.ರಾವ್ ಅವರು ರಾಕೆಟ್ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಿ 1992ರಲ್ಲಿ ಎಸ್ ಎಲ್ ವಿ ರಾಕೆಟ್ ಉಡಾವಣೆಯ ಪ್ರಮುಖ ರೂವಾರಿಯಾಗಿದ್ದರು. ರಾವ್ ಅವರು ಭಟ್ನಾಗರ್ ಪ್ರಶಸ್ತಿ, ರವೀಂದ್ರ ಪುರಸ್ಕಾರ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು. ರಾವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.