ದಾವಣಗೆರೆ: ಸಿದ್ದರಾಮಯ್ಯ ಘೋಷಣೆಗಳ ಪ್ರವೀಣ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ವ್ಯಂಗವಾಡಿದ್ದಾರೆ. ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಕಳೆದ 4 ವರ್ಷಗಳಲ್ಲಿ ಮಾಡಿದ್ದೇನು ಎಂಬುದನ್ನು ಪ್ರಶ್ನಿಸಬೇಕಿದೆ.
ಕಳೆದ 18 ತಿಂಗಳಿನಿಂದ ಜನತಾ ದರ್ಶನವಿರಲಿ, ಅವರು ಈ ರಾಜ್ಯದ ಸಿಎಂ ಎಂಬುದೇ ಜನರಿಗೆ ಇನ್ನೂ ಮನವರಿಕೆಯಾಗಿಲ್ಲ ಎಂದರು. ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮರಳು ಮಾμಯಾ ತಡೆಗೆ ಮುಂದಾದಾಗ ಅವರ ಮೇಲೆ ಹಲ್ಲೆ ನಡೆದ ಬಗ್ಗೆ ದೂರು ನೀಡಿದ ಇತಿಹಾಸ ಈವರೆಗೆ ಇಲ್ಲ.
ಇಂತಹ ಆಡಳಿತ ವೈಖರಿಯ ಸರ್ಕಾರ ರಾಜ್ಯದಲ್ಲಿದೆ ಎಂದು ಅವರು ಟೀಕಿಸಿದರು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಅವಧಿಯಲ್ಲಿನ ಎಲ್ಲಾ ವರ್ಗದ ಮಠಗಳಿಗೆ ಅನುದಾನ ನೀಡಲಾಗಿದೆ. ಈ ಸರ್ಕಾರ ದಲಿತರಿಗಾಗಿ ಏನೂ ಮಾಡಿಲ್ಲ. ಬಜೆಟ್ ನಲ್ಲಿ ದಲಿತರ ಅಭಿವೃದ್ದಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನವನ್ನೇ ಖರ್ಚುಮಾಡಿಲ್ಲ ಎಂದು ದೂರಿದರು.
ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೋಗಿದ್ದು ನಿಜ. ಬ್ರಿಗೇಡ್ ಉದ್ದೇಶವನ್ನೇ ಪಕ್ಷದ ಹಿಂದುಳಿದ ಮೋರ್ಚಾದ ಮೂಲಕ ಕೈಗೊಳ್ಳುವಂತೆ ರಾಷ್ಟ್ರೀಯ ನಾಯಕರು ಹೇಳಿದರು. ಹಾಗಾಗಿ ಇನ್ನು ಮುಂದೆ ಮೋರ್ಚಾದ ಹಿಂದುಳಿದ ಘಟಕದ ಮೂಲಕ ಸಂಘಟನೆ ಮುಂದುವರಿಸುವೆ ಎಂದ ಈಶ್ವರಪ್ಪ, ಕೆಲವು ಜಿಲ್ಲೆ ಗಳಲ್ಲಿ ಮುಖಂಡರ ನಡುವಿನ ಭಿನ್ನಾಭಿಪ್ರಾಯವನ್ನ ರಾಷ್ಟ್ರೀಯ ನಾಯಕರು ಸರಿಪಡಿಸಲಿದ್ದು, ಮುಂದೆ ಆ ಜಿಲ್ಲಾ ಮುಖಂಡರು ಸಹ ತಮ್ಮೊಂದಿಗೆ ಕೈ ಜೋಡಿಸಲಿದ್ದಾರೆ ಎಂದರು.
ಮಾಜಿ ಸಚಿವರಾದ ಜಿ. ಕರುಣಾಕರ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್. ವಿ. ರಾಮಚಂದ್ರ, ಮಾಡಾಳ್ ವಿರುಪಾಕ್ಷಪ್ಪ, ಜಿ.ಗುರುಸಿದ್ದನಗೌಡ, ಬಿ.ಪಿ.ಹರೀಶ್, ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ರಾಜಶೇಖರ್, ರಮೇಶ್ ನಾಯ್ಕ ಸುದ್ದಿಗೋಷ್ಟಿಯಲ್ಲಿದ್ದರು.