Advertisement
ಮಾರ್ಚ್‌ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪರೀಕ್ಷೆ ನಡೆಸಿತ್ತು. ಆಗ ಮೈಸೂರು ವಿವಿಯ ಕಾಲೇಜೊಂದರಲ್ಲಿ ಭೂಗೋಳಶಾಸ್ತ್ರ ವಿಷಯದ ಅತಿಥಿ ಉಪನ್ಯಾಸಕಿ ಸೌಮ್ಯಾ, ಪರೀಕ್ಷೆ ನಡೆಯುವ ಒಂದು ಗಂಟೆ ಮೊದಲು ತನ್ನ ವಾಟ್ಸ್‌ಆ್ಯಪ್‌ನಿಂದ ಭೂಗೋಳಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ 18 ಪ್ರಶ್ನೆಗಳನ್ನು ಪರೀಕ್ಷಾರ್ಥಿಯೊಬ್ಬರಿಗೆ ಕಳುಹಿಸಿದ್ದರು. ಅವರು ಇತರ ಕೆಲವರಿಗೂ ಹಂಚಿದ್ದರಿಂದ ಅದು ಸೋರಿಕೆಯಾಗಿತ್ತು. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿ ಕಾರದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು, ಅಭ್ಯರ್ಥಿಗಳ ದೂರು ಆಧರಿಸಿ ಸೌಮ್ಯಾ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ರವಿವಾರ ಸೌಮ್ಯಾಳನ್ನು ಬಂಧಿಸಲಾಗಿದೆ.
ಸೌಮ್ಯಾ ಮೈಸೂರು ವಿಶ್ವವಿದ್ಯಾನಿಲಯದ ಎಂಎಸ್‌ಸಿ ಪದವೀಧರೆ. ಅದೇ ವಿವಿಯಲ್ಲಿ “ಜಿಐಎಸ್ ಆ್ಯಂಡ್ ಅಗ್ರಿಕಲ್ಚರ್ ಜಿಯೋಗ್ರಫಿ’ ವಿಷಯದಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದು ಗಂಗೋತ್ರಿಯಲ್ಲಿ ಅತಿಥಿ ಉಪನ್ಯಾಸಕರಾಗಿದ್ದರು. ಇತ್ತೀಚೆಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್‌ಗೆ ಆಯ್ಕೆಯಾಗಿದ್ದ ಕಾರಣ ಅತಿಥಿ ಉಪನ್ಯಾಸಕ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು ಎಂದು ತಿಳಿದು ಬಂದಿದೆ.