Advertisement

ಶ್ಯಾಮಲಾ ಮಾಧವ್‌ಗೆ ಪ್ರೊ|ಎಸ್‌.ವಿ.ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ

10:58 AM May 16, 2018 | Team Udayavani |

ಮುಂಬಯಿ: ಪ್ರೊ| ಎಸ್‌. ವಿ. ಪರಮೇಶ್ವರ ಭಟ್ಟ ಸಂಸ್ಮರಣ ಸಮಿತಿ ಮಂಗಳೂರು, ಕರಾವಳಿ ಲೇಖಕಿಯರ, ವಾಚಕಿಯರ ಸಂಘ ಮಂಗಳೂರು ಸಹಯೋಗದ 2018ನೇ ಸಾಲಿನ ಪ್ರೊ| ಎಸ್‌. ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿಗೆ ಮುಂಬಯಿ ಸಾಹಿತಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಆಯ್ಕೆಯಾಗಿದ್ದಾರೆ.

Advertisement

ಪ್ರಶಸ್ತಿ ಪ್ರದಾನ ಸಮಾರಂಭವು ಮೇ 24 ರಂದು ಮಂಗಳೂರು ಕೊಟ್ಟಾರದ ಸಾಹಿತ್ಯ ಸದನದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಎಸ್‌. ವಿ. ಪಿ. ಸಂಸ್ಮರಣ ಸಮಿತಿ ಮಂಗಳೂರು ಅಧ್ಯಕ್ಷ, ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ವಹಿಸಲಿದ್ದಾರೆ. ಸಮಾರಂಭದಲ್ಲಿ ಬಿ. ಎಂ. ರೋಹಿಣಿ ಅವರು ಅಭಿನಂದನ ಭಾಷಣ ಮಾಡಲಿದ್ದಾರೆ. ಕರಾವಳಿ ಲೇಖಕಿಯರ, ವಾಚಕಿಯರ ಸಂಘ ಮಂಗಳೂರು ಅಧ್ಯಕ್ಷ ಶಶಿಲೇಖಾ ಬಿ. ಮತ್ತು ಎಸ್‌. ಪಿ. ರಾಮಚಂದ್ರ ಇವರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಕರಾವಳಿ ಲೇಖಕಿಯರು, ವಾಚಕಿಯರ ಸಂಘ ಮಂಗಳೂರು ಇವರಿಂದ ರೂಪಶ್ರೀ ನಾಗರಾಜ್‌ ಅವರ ನೇತೃತ್ವದಲ್ಲಿ ಗಾಯನ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯಾಸಕ್ತರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಶ್ಯಾಮಲಾ ಮಾಧವ್‌ : ಶ್ಯಾಮಲಾ ಮಾಧವ ಅವರು ಅನುವಾದಕರಾಗಿ ಹೆಸರು ಮಾಡಿದ್ದಾರೆ. ಬಿಎಸ್ಸಿ ಪದವೀಧರರಾದ ಅವರು ಅನೇಕ ಕೃತಿಗಳನ್ನು ಹಿಂದಿ ಹಾಗೂ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ನಾಮಾಂಕಿತರಾಗಿದ್ದಾರೆ. ಅವರು ಅನುವಾದಿಸಿದ ಅನೇಕ ಕತೆ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡು ಜನ ಮೆಚ್ಚುಗೆಗೆ ಪಾತ್ರವಾಗಿವೆ.

ಆಲಂಪನಾ ಅವರ ಮೊದಲ ಅನುವಾದಿತ ಕೃತಿ. ಮೂಲತಃ ಉರ್ದು ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ತಂದಿದ್ದಾರೆ. ಪೊಲೀಸ್‌ ಡೈರಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಗಾನ್‌ ವಿದ್‌ ದ ವಿಂಡ್‌ ಅವರ ಪ್ರಸಿದ್ಧ ಅನುವಾದಿತ ಕೃತಿ. ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಎಸ್‌. ವಿ. ಸಾವಿತ್ರಮ್ಮ ಪ್ರಶಸ್ತಿಯೂ ಲಭಿಸಿದೆ. ಅವರು ಸತ್ಸಂಚಯ ಕೃತಿಯನ್ನು ಅನುವಾದಿಸಿಕೊಟ್ಟಿದ್ದಾರೆ. ಇದಲ್ಲದೆ ಸ್ಪೆರೋ ಪುಕಾರ್‌ ಸಂಸ್ಥೆಗಳಿಗೆ ಲೇಖನಗಳನ್ನು ಆಂಗ್ಲ ಭಾಷೆಯಲ್ಲಿ ಬರೆದು ಕನ್ನಡ ಸಾಹಿತ್ಯದ ವೈಭವವನ್ನು ಇತರ ಭಾಷಿಕರಿಗೆ ಉಣ ಬಡಿಸುತ್ತಾ ಬಂದಿದ್ದಾರೆ. ಹಿತಮಿತ ಮೃದುವಚನದ ಶ್ಯಾಮಲಾ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next