Advertisement
ಶಿಕ್ಷಕರ ದಿನಾಚರಣೆಯಂದು ಹುಟ್ಟಿದ ನಿಮಗೆ ಶಿಕ್ಷಕರಾಗುವ ಅವಕಾಶ ಒದಗಿಬಂದದ್ದು ವಿಶೇಷ. ನೀವು ಎಂದಾದರೂ ಶಿಕ್ಷಕರಾಗುವ ಕನಸು ಕಂಡಿದ್ದಿರಾ?
Related Articles
Advertisement
ನೀವು ಗುರುಗಳಿಗೆ ಕೊಟ್ಟ ಗೌರವವನ್ನು ನೀವು ಗುರುವಾದಾಗ ಪಡೆಯಲಾಯಿತೇ? ನೀವು ಗುರುವಾಗಿ ಯಾವ ಗುರುತುವಾದ ಕೆಲಸ ಮಾಡಿದ್ದೀರಿ?
ನಿಸ್ಸಂದೇಹವಾಗಿ, ಯಥೇತ್ಛ ಪಡೆದಿದ್ದೇನೆ. ಆಧುನಿಕ ಸಂದರ್ಭದಲ್ಲಿ ಗುರುಗಳ ಬಗ್ಗೆ ಗೌರವ ಕಡಿಮೆಯಾಗಿದೆ ಎಂಬ ತಪ್ಪು ತಿಳುವಳಿಕೆಯಿದೆ. ಅತ್ಯುತ್ತಮ ಅಧ್ಯಾಪಕರಾಗಿದ್ದು, ವ್ಯಕ್ತಿತ್ವದ ಘನತೆ ಕಾಪಾಡಿಕೊಂಡ ಗುರುಗಳಿಗೆ ಎಲ್ಲ ಕಾಲದಲ್ಲೂ ಗೌರವವಿದೆ. ಹಾದಿ ತಪ್ಪಿದ ಅನೇಕ ವಿದ್ಯಾರ್ಥಿಗಳಿಗೆ ಸರಿದಾರಿ ತೋರಿದ ಸಂತೃಪ್ತಿ ನನಗಿದೆ. ಅಂತಹ ಅನೇಕರು ಇಂದು ಜವಾಬ್ದಾರಿಯುತ ನಾಗರಿಕರಾಗಿ ಬದುಕುತ್ತಿದ್ದಾರೆ. ಶಿಕ್ಷಣ ಉದ್ಯೋಗ ಸಾಧನ ಮಾತ್ರವಲ್ಲ, ಒಳ್ಳೆಯ ನಾಗರಿಕರನ್ನು ಸೃಷ್ಟಿಸುವ ಮಾಧ್ಯಮವೂ ಹೌದು ಎಂಬ ನೆಲೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ಸಮಾಧಾನವಿದೆ.
ಆಧ್ಯಾತ್ಮಿಕ ಸಾಧನೆ ಗುರುವಿನ ಮೂಲಕ ಸಾಧ್ಯ ಎನ್ನುತ್ತಾರೆ. ಎಲ್ಲರ ಆಶಯ ಅಭಿರುಚಿಗೆ ತಕ್ಕಂತೆ ಗುರು ಸಿಗುತ್ತಾರಾ?
ಗುರುಗಳು ಸಿಗುವುದಿಲ್ಲ, ನಾವು ಹುಡುಕಿಕೊಳ್ಳಬೇಕು. ನಮ್ಮ ಹುಡುಕಾಟದ ಹಾದಿಯಲ್ಲಿ ಅಂತಹ ಗುರುಗಳು ಅಕಸ್ಮಾತ್ ಎಂಬಂತೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನೇರವಾಗಿ ಅಲ್ಲದಿದ್ದರೂ ಅಪರೋಕ್ಷವಾಗಿ ನಮಗೆ ಅಂಥವರು ಗುರುಗಳಾಗಿಬಿಡುತ್ತಾರೆ. “ಏಕಲವ್ಯನ ಮಾದರಿ’ ಇದ್ದೇ ಇದೆಯಲ್ಲ! ಆದರೆ ಹೆಬ್ಬೆರಳು ಕೇಳದ ಹಾಗೆ ಅಥವಾ ನಾವು ನೀಡದ ಹಾಗೆ ಎಚ್ಚರ ವಹಿಸಬೇಕಷ್ಟೆ! ಆಧ್ಯಾತ್ಮಿಕ ಸಾಧನೆಗೆ ಮಾತ್ರವಲ್ಲ ಎಲ್ಲದಕ್ಕೂ ಇದು ಅನ್ವಯವಾಗುತ್ತದೆ.
ಹಿಂದೆ ಗುರುಗಳು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುತ್ತಿದ್ದರು. ಇಂದು ಶಿಕ್ಷಕರಿಗೇ ವಿದ್ಯಾರ್ಥಿಗಳು ಶಿಕ್ಷೆ ಕೊಡುವ ಮಾತುಗಳನ್ನಾಡುತ್ತಿದ್ದಾರೆ. ಈ ವಿಪರ್ಯಾಸಕ್ಕೆ ಹೇಗೆ ಸ್ಪಂದಿಸುವಿರಿ?
ಹಿಂದೆ ಗುರುಗಳು ಶಿಕ್ಷೆ ನೀಡುತ್ತಿದ್ದರು ಎಂಬುದು ತಪ್ಪು ಪರಿಕಲ್ಪನೆ. ನಿಜವಾದ ಗುರು ಯಾವ ಕಾಲದಲ್ಲಿಯೂ ಶಿಕ್ಷೆ ನೀಡುವುದಿಲ್ಲ, ನಿಜವಾದ ವಿದ್ಯಾರ್ಥಿ ಯಾವುದನ್ನೂ ಶಿಕ್ಷೆ ಎಂದು ಭಾವಿಸುವುದಿಲ್ಲ. ವಾಸ್ತವವೇನೆಂದರೆ, ನಿಜವಾದ ಗುರು ವೈಯಕ್ತಿಕ ರಾಗದ್ವೇಷಗಳಿಂದ ಮುಕ್ತನಾಗಿದ್ದು ಕಲಿಸುವುದರಲ್ಲಿ ನಿಷ್ಠುರನಾಗಿರುತ್ತಾನೆ. ಪ್ರೀತಿಯಿಲ್ಲದೆ ಕಲಿಸುವುದಾಗಲೀ, ಕಲಿಯುವುದಾಗಲೀ ಸಾಧ್ಯವಿಲ್ಲ.
ನಮ್ಮ ಶಿಕ್ಷಣ ಪರಂಪರೆಯಲ್ಲಿ ಗುರುವಿನ ಬಗ್ಗೆ ಭಕ್ತಿಯ ಭಾವವಿದೆ, ಆರಾಧನೆಯ ಮನೋಭಾವವಿದೆ, ಗುರುಗಳೂ ಇದನ್ನು ನಿರೀಕ್ಷಿಸುತ್ತಾರೆ. ಆದರೆ ಪಾಶ್ಚಾತ್ಯರಲ್ಲಿ ಈ ಬಗೆಯ ಭಕ್ತಿಭಾವವಾಗಲೀ, ಆರಾಧನೆಯ ಮನೋಭಾವವಾಗಲೀ ಇಲ್ಲ. ನಾನು ಕೆಲವು ವಿದೇಶೀ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ. ಆ ಸಂದರ್ಭದಲ್ಲಿ ಅರಿವಿಗೆ ಬಂದ ಸಂಗತಿ ಇದು. ಆದರೆ ವಿದೇಶಿ ವಿದ್ಯಾರ್ಥಿಗಳು ಹೆಚ್ಚು ಸ್ವತಂತ್ರವಾಗಿರುತ್ತಾರೆ. ಶ್ರದ್ಧೆಯಿಂದ ಕಲಿಯುತ್ತಾರೆ.
ಸಂದರ್ಶನ: ನ.ರವಿಕುಮಾರ