Advertisement

ಐಟಿ ಕಂಪೆನಿಗಳು ಸರಕಾರಿ ಶಾಲೆ ದತ್ತು ಪಡೆಯಲಿ : ಪ್ರೊ|ಎಂ.ಆರ್‌. ದೊರೆಸ್ವಾಮಿ ಅಭಿಮತ

11:48 PM Dec 19, 2020 | sudhir |

ಬೆಂಗಳೂರು: ಜನಪ್ರತಿ ನಿಧಿಗಳು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಕುರಿತು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇದೇ ರೀತಿ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸರಕಾರಿ ಶಾಲೆಗಳ ದತ್ತು ಕಾರ್ಯಕ್ಕೆ ಬಳುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ| ಎಂ. ಆರ್‌. ದೊರೆಸ್ವಾಮಿ ಸಲಹೆ ನೀಡಿದರು.

Advertisement

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು ಎಂಬ ಬೇಡಿಕೆಗೆ ಬಹುತೇಕರು ಉತ್ತಮವಾಗಿ ಸ್ಪಂದಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಸಂಸ್ಥೆಗಳು ಈವರೆಗೆ 1,442 ಶಾಲೆಗಳನ್ನು ದತ್ತು ತೆಗೆದುಕೊಂಡಿವೆ. ಇವರ ಜತೆಯಲ್ಲಿ ಬೆಂಗಳೂರಿನ ದೊಡ್ಡ ಐಟಿ ಕಂಪೆನಿಗಳು ಕೂಡ ಶಾಲೆಗಳನ್ನು ದತ್ತು ಪಡೆಯಬಹುದು. ಪ್ರಮುಖ 200 ಐಟಿ ಕಂಪೆನಿಗಳು ತಲಾ 100 ಶಾಲೆ ದತ್ತು ಪಡೆದರೆ 20,000 ಶಾಲೆಗಳು ಅಭಿವೃದ್ಧಿಯಾಗಲಿವೆ. ಈ ನಿಟ್ಟಿನಲ್ಲಿ ಸರಕಾರ ಶೀಘ್ರ ಐಟಿ ಮುಖ್ಯಸ್ಥರ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

3 ವರ್ಷಗಳಲ್ಲಿ 35 ಸಾವಿರ ಶಾಲೆ ದತ್ತು ಯೋಜನೆ
ರಾಜ್ಯದಲ್ಲಿ 48 ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳಿದ್ದು, ಈ ಪೈಕಿ ಶೇ. 20ರಷ್ಟು ಉತ್ತಮ ಸ್ಥಿತಿಯಲ್ಲಿವೆ. ಸೌಕರ್ಯ ವಂಚಿತ ಸುಮಾರು 1,442 ಶಾಲೆಗಳನ್ನು ಜನಪ್ರತಿನಿಧಿಗಳು ದತ್ತು ಪಡೆದುಕೊಂಡಿದ್ದಾರೆ. ಉಳಿದಂತೆ ಐಟಿ ಕಂಪೆನಿಗಳು 20 ಸಾವಿರ, ರಾಜ್ಯದ ವೈದ್ಯಕೀಯ ಕಾಲೇಜುಗಳು ಮತ್ತು ಎಂಜಿನಿಯರಿಂಗ್‌ ಕಾಲೇಜುಗಳು ತಲಾ 1 ಸಾವಿರ, ಇತರ ಖಾಸಗಿ ವಿವಿಗಳು ಮತ್ತು ಕಾಲೇಜುಗಳು 9 ಸಾವಿರ, ದೊಡ್ಡ ಉದ್ಯಮಿಗಳು 4 ಸಾವಿರ ಸಹಿತ ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 35 ಸಾವಿರ ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಳ್ಳುವಂತೆ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದರು.

ನನ್ನ ಶಾಲೆ, ನನ್ನ ಕೊಡುಗೆ
ಶಾಲೆಯ ಹಳೆಯ ವಿದ್ಯಾರ್ಥಿಗಳು, ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಆ ಊರಿನ ಶ್ರೀಮಂತರು, ಉದ್ಯಮಿಗಳು ಮತ್ತು ಆಸಕ್ತರು “ನನ್ನ ಶಾಲೆ, ನನ್ನ ಕೊಡುಗೆ’ ಕಾರ್ಯಕ್ರಮದಡಿ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಓದಿರುವ ಶಾಲೆಗಳು ಮತ್ತು ಶತಮಾನ ಪೂರೈಸಿರುವ ಶಾಲೆಗಳನ್ನು ಸರಕಾರ ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸಬೇಕು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next