Advertisement

Prof. H.T.POTE: ಬದುಕಿನ ನಾದವೇ ಬರಹದ ಭಾವವಾಗಬೇಕು 

01:29 PM Oct 08, 2023 | Team Udayavani |

ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಪ್ರೊ.  ಎಚ್‌.ಟಿ. ಪೋತೆಯವರು ನಮ್ಮ ನಡುವಿನ ವಿಶಿಷ್ಟ ಚಿಂತಕರು. ದಲಿತರ ಬದುಕಿನ ನೋವು- ನಲಿವನ್ನು ಬಲು ಹತ್ತಿರದಿಂದ ಕಂಡವರು.  ಪ್ರಜ್ಞೆ ಮತ್ತು ವಾಸ್ತವ ನೆಲೆಗಟ್ಟುಗಳೇ ನಮ್ಮ ಅಸ್ತಿತ್ವ ಕಟ್ಟಿಕೊಳ್ಳಲು ಇರುವ ಸಂಗತಿಗಳು ಎನ್ನುವ ಅವರು, ತಮ್ಮ ಬರವಣಿಗೆಗಿರುವ ಹಿನ್ನೆಲೆ, ಸ್ಫೂರ್ತಿ ಮತ್ತು ದಲಿತ ಸಾಹಿತ್ಯ ಲೋಕದ  ಸ್ವರೂಪ ಕುರಿತು ಮಾತಾಡಿದ್ದಾರೆ…

Advertisement

ನೀವು ಬರವಣಿಗೆ ಆರಂಭಿಸಿದಾಗ ಇದ್ದ ದಲಿತ ಸಾಹಿತ್ಯದ ಸ್ವರೂಪಕ್ಕೂ ಮತ್ತು ಈಗ ರಚನೆ ಆಗುತ್ತಿರುವ ದಲಿತ ಸಾಹಿತ್ಯದ ಸ್ವರೂಪಕ್ಕೂ ಯಾವ ಬದಲಾವಣೆಗಳನ್ನು ಕಂಡಿದ್ದೀರಿ?

ಸಾಹಿತ್ಯಕ್ಕೆ ಯಾವಾಗಲೂ ಎರಡು ಸ್ವರೂಪಗಳಿರುತ್ತವೆ. ಒಂದು ಒಳಾಕೃತಿ ಮತ್ತೂಂದು ಹೊರಾಕೃತಿ.  ಸಾಹಿತ್ಯವು ಯಾವಾಗಲೂ ಬರಹಗಾರನ ಆಯ್ಕೆಗೆ ಅನುಗುಣವಾಗಿ ರೂಪುಗೊಳ್ಳುತ್ತದೆ ಎಂಬುದನ್ನು ನಾವು ಗಮನಿಸಬೇಕು. ನಾನು ಬರವಣಿಗೆ ಆರಂಭಿಸಿದಾಗ ವಿಶೇಷವಾಗಿ ಕನ್ನಡ ದಲಿತ ಸಾಹಿತ್ಯವು ಭೌತಿಕ ಸಂವಾದಕ್ಕೆ ಹೆಚ್ಚಿನ ಒತ್ತು ನೀಡಿತ್ತು. ಆದರೆ ಈಗ ಮಾನಸಿಕ ಸಂವಾದವೂ ಮುಖ್ಯವಾಗಿದೆ. ಇದಕ್ಕೆ ಅಂದಂದಿನ ಸಮಕಾಲೀನತೆಯೇ ಕಾರಣ. ಸೃಜನಶೀಲತೆ ಎನ್ನುವುದು ಮನುಷ್ಯನ ಕ್ರಿಯಾತ್ಮಕ ಚಟುವಟಿಕೆಯಾಗಿ­ರುವುದರಿಂದ ಅದು ಕಾಲದ ಒತ್ತಾಸೆಗನು­ಗುಣವಾಗಿ ಬದಲಾಗಲೇ ಬೇಕಾಗುತ್ತದೆ.

ಕಥೆ ಮತ್ತು ಕಾದಂಬರಿಗಳ ಲೋಕವನ್ನು ಸೃಷ್ಟಿಸುವಾಗ ಮುಖ್ಯವಾಗಿ ನಿಮ್ಮ ಮನಸ್ಸಿನಲ್ಲಿ ಮೂಡುವ ಚಿಂತನೆಗಳು ಯಾವುವು?

ಅಲಕ್ಷಿತತೆ, ಮನುಷ್ಯ ಸಂಬಂಧಗಳು, ಬೌದ್ಧಿಕ-ಭೌತಿಕ ಬಿಕ್ಕಟ್ಟುಗಳು, ಅಸಹಾಯಕರ ಬದುಕಿಗೆ ಬೇಕಾದ ಭರವಸೆ, ನೋವು, ಅಪಮಾನ, ಹಿಂಸೆ, ಸಾಂಸ್ಕೃತಿಕ ಬದುಕಿನ ಹಲವು ವೈರುಧ್ಯಗಳು… ಇವುಗಳು ನನ್ನನ್ನು ಯಾವಾಗಲೂ ಕಾಡುತ್ತಿರುತ್ತವೆ. ಸಂಭ್ರಮಕ್ಕಿಂತ ಸಂಕಟಗಳನ್ನೇ ಹೆಚ್ಚಾಗಿ ಅನುಭವಿಸುತ್ತಿರುವ ಬದುಕುಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ತಬ್ಬಿಬ್ಟಾಗಿಸುತ್ತವೆ. ಅವುಗಳೇ ನನ್ನಲ್ಲಿ ವಿಶಿಷ್ಟವಾದ ಆಲೋಚನೆಗಳನ್ನು ಹುಟ್ಟುಹಾಕುತ್ತವೆ. ಅವುಗಳೊಂದಿಗಿನ ನನ್ನ ಮನದಾಳದ ನಿರಂತರ ಸಂಘರ್ಷ ಅಸಾಮಾನ್ಯ ಅನುಭವವನ್ನುಂಟು ಮಾಡುತ್ತದೆ. ಹಾಗಾಗಿ ನಾನು ಬದುಕಿನಲ್ಲಿಯ ತೊಡಕುಗಳು ಮುಕ್ತವಾಗಬೇಕೆಂದು ಬಯಸುತ್ತೇನೆ.

Advertisement

ನೀವು ಬರಹಗಳಲ್ಲಿ ಮತ್ತೆ ಮತ್ತೆ ಡಾ. ಬಿ. ಆರ್‌. ಅಂಬೇಡ್ಕರ್‌ ಅವರನ್ನು ನೆನೆಯುತ್ತೀರಿ. ಅಂಬೇಡ್ಕರ್‌ ಚಿಂತನೆಗಳು ನಿಮ್ಮ ಸೃಜನಶೀಲ ಬರವಣಿಗೆಗೆ ಹೇಗೆ ನೆರವಾಗಿವೆ?

ಅಂಬೇಡ್ಕರ್‌ ಅವರ ಬರಹಗಳಲ್ಲಿ ಕಾಣಿಸಿಕೊಳ್ಳುವ ವಿಶಿಷ್ಟ ಅನುಭವಗಳು, ಸಾಂಸ್ಕೃತಿಕ ಪ್ರಜ್ಞೆ ಜಾಗೃತಗೊಳಿಸಿಕೊಳ್ಳಲು -ದಾಸ್ಯದ ಸಂಕೋಲೆಯಿಂದ ಹೊರಬರಲು ಅವರು ತೋರಿಸುವ ದಾರಿಗಳು, ದೇಶ ಸ್ವಾತಂತ್ರÂಕ್ಕೂ, ವ್ಯಕ್ತಿ ಸ್ವಾತಂತ್ರÂಕ್ಕೂ ಇರುವ ಅಂತರಗಳನ್ನು ನಿರ್ವಚಿಸಿದ ರೀತಿ… ಮೊದಲಾದವು ಅಂಬೇಡ್ಕರ್‌ರನ್ನು ನೆನೆಯುವಂತೆ ಮಾಡುತ್ತವೆ. ಈ ನೆಲದ ಅಸಹಾಯಕ ಬದುಕುಗಳ ಪರಿಯನ್ನು ಅರಿಯುವುದೆಂತು ಎಂಬುದನ್ನು ಅಂಬೇಡ್ಕರ್‌ ಚಿಂತನೆಗಳು ಕಲಿಸಿವೆ. ಭಾರತೀಯ ಸಾಮಾಜಿಕ ಬದುಕನ್ನು ನಾನು ಅಂಬೇಡ್ಕರ್‌ ಎನ್ನುವ ಕನ್ನಡಿಯಲ್ಲಿ ಅಥೆìçಸಿಕೊಳ್ಳುತ್ತಿದ್ದೇನೆ. ಅಂಬೇಡ್ಕರ್‌ ಅವರ ಚಿಂತನೆಗಳು ನನ್ನನ್ನು ನಿತ್ಯ ಪರಿವರ್ತನೆಗೆ ಒಳಗು ಮಾಡುತ್ತಿವೆ ಎನ್ನಬಹುದು.

ದಲಿತ ಸಾಹಿತ್ಯದಲ್ಲಿ ಪುರುಷರ ಪ್ರಾಬಲ್ಯವೇ ಅಧಿಕವಾಗಿರುವಂತೆ ತೋರುತ್ತದೆ. ದಲಿತ ಲೇಖಕಿಯರು ಕತೆ ಮತ್ತು ಕಾದಂಬರಿ ಪ್ರಕಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತಿಲ್ಲ, ಯಾಕೆ?

ನೀವು ಹೇಳುತ್ತಿರುವುದು ನಿಜ. ಎಪ್ಪತ್ತು-ಎಂಬತ್ತರ ದಶಕದಲ್ಲಿ ದಲಿತ ಮಹಿಳೆಯರಲ್ಲಿದ್ದ ಅಧಿಕ ಪ್ರಮಾಣದ ಅನಕ್ಷರತೆಯೇ ಇದಕ್ಕೆ ಕಾರಣ. ಆದರೆ ಕಳೆದ ಕೊನೆಯ ದಶಕದಲ್ಲಿ ದಲಿತ ಲೇಖಕಿಯರ ಪಾಲ್ಗೊಳ್ಳುವಿಕೆ ಅನೂಹ್ಯ ರೀತಿಯಲ್ಲಿ ಹೆಚ್ಚಾಯಿತು. ಅದಕ್ಕೆ ಹೊಸ ಶಿಕ್ಷಣ ಮತ್ತು ಹೊಸಕಾಲದ ಬರಹಗಳ ಓದು ಕಾರಣ. ಹೀಗಾಗಿ ಇಂದು ಅನೇಕ ಲೇಖಕಿಯರು ನಿರ್ಭೀತಿಯಿಂದ ಬರೆಯುತ್ತಿದ್ದಾರೆ. ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಆದಾಗ್ಯೂ ಈ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ. ದಲಿತ ಮಹಿಳಾ ಬದುಕೆಂದರೆ ಕುದಿವ ಕುಲುಮೆಯಂತಹದ್ದು. ಅಲ್ಲಿ ಬೆಂದು-ನೊಂದದೆಲ್ಲವೂ ಕಥನ ಸ್ವರೂಪ ಪಡೆಯಬೇಕಾದ ಅಗತ್ಯವಿದೆ.

ಇಂದಿನ ದಲಿತ ಸಾಹಿತ್ಯದ ಭಾಷೆಯ ಕುರಿತು ನಿಮ್ಮ ಅನಿಸಿಕೆಗಳೇನು?

ಭಾಷೆಗೆ ನಿರ್ದಿಷ್ಟವಾದ ಸಾಮಾಜಿಕ-ಸಾಂಸ್ಕೃತಿಕ ಚೌಕಟ್ಟಿಲ್ಲವಾದರೂ ಅದು ಕ್ರಿಯೆಗೆ, ಸಂವಹನಕ್ಕೆ ಮತ್ತು ಪರಿಣಾಮಕ್ಕೆ ತಕ್ಕಂತೆ ಒಂದು ನಿರ್ದಿಷ್ಟತೆಯನ್ನು ಪಡೆದುಕೊಳ್ಳುತ್ತದೆ. ಅಂತೆಯೇ ದಲಿತ ಸಾಹಿತ್ಯದ ಭಾಷೆಯೂ ಸಹ ಇತರೆ ಸಾಹಿತ್ಯಕ್ಕಿಂತ ಭಿನ್ನವಾಗಿದೆ. ಭಾಷೆಯಲ್ಲಿ ಈ ಭಿನ್ನತೆ ಕಾಣಿಸಿಕೊಳ್ಳಲಿಕ್ಕೆ ಮುಖ್ಯ ಕಾರಣ, ಆ ಸಾಹಿತ್ಯವು ಹಿಡಿದಿದ್ದ, ಹಿಡಿಯುತ್ತಿರುವ, ಹಿಡಿಯಬಹುದಾದ ಜಾಡು. ಅದೊಂದು ದುರ್ಗಮ ಕಾಡಿನಲ್ಲಿ ರೂಪಿಸಿಕೊಂಡ ನಡಿಗೆಯ ಜಾಡು. ಹಾಗಾಗಿ ಅದು ಅತ್ಯಂತ ಸಹಜತೆಯಿಂದ ಕೂಡಿರುತ್ತದೆ. ಅದಕ್ಕೆ ನಯ-ನಾಜೂಕಿನ ಅಗತ್ಯವಿಲ್ಲ. ತನ್ನ ಭಾವಲೋಕದ ಅಭಿವ್ಯಕ್ತಿಗಾಗಿ ಆಯ್ದುಕೊಂಡಿರುವ ಯಾವುದೇ ಭಾಷೆಯನ್ನು ವಿಭಜಿಸಿ ನೋಡಬಾರದು. ದಲಿತ ಸಾಹಿತ್ಯದ ಭಾಷೆಯು ಕಚ್ಚಾರೂಪದಲ್ಲಿ ಇರುವುದರಿಂದ ಅಥೆìçಸಲು ಕೆಲ ತೊಂದರೆಗಳಾಬಹುದು. ಅದು ಹಸಿದವರ ಅಂತರಾಳದ ಭಾಷೆ, ಅಂತರಾರ್ಥದ ಭಾಷೆ.

ದಲಿತ ಸಾಹಿತ್ಯ ಬೆಳೆದಂತೆ ದಲಿತ ವಿಮರ್ಶೆ ಬೆಳೆಯಲಿಲ್ಲ. ಎರಡೂ ಸಮ ಪ್ರಮಾಣದಲ್ಲಿ ಬೆಳೆಯ­ಬೇಕೆಂದೇನೂ ಇಲ್ಲ. ಹಾಗಂತ ವಿಮರ್ಶೆಯ ಅಗತ್ಯವಿಲ್ಲ ಎನ್ನಲೂ ಆಗುವುದಿಲ್ಲ. ಕನ್ನಡದ ಸಂದರ್ಭದಲ್ಲಿ ಏನಾಗಿದೆಯೆಂದರೆ, ದಲಿತ ಸಾಹಿತ್ಯವು ಸರಳವಾದ ರೇಖಾತ್ಮಕ ಸೂತ್ರವನ್ನು ಹೆಚ್ಚು ಅನುಸರಿಸಿದೆ. ಬಹುಶಃ ಈ ಕಾರಣಕ್ಕಾಗಿಯೇ ಅದರ ವಿಮಶಾì ವಲಯವು ಹೆಚ್ಚು ವಿಸ್ತಾರಗೊಳ್ಳುವುದಕ್ಕೆ ಸಾಧ್ಯವಾಗಲಿಲ್ಲವೆನಿಸುತ್ತದೆ.

ವಾರದ ಅತಿಥಿ:

ಪ್ರೊ. ಎಚ್‌. ಟಿ. ಪೋತೆ

ನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next