ಕೊಪ್ಪಳ: ವಿವಿಧ ಇಲಾಖೆಗಳ ಮೂಲಕ ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೀಘ್ರ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿವಿಧ ಇಲಾಖೆಗಳ ಮೂಲಕ ನೀಡುವ ಸೌಲಭ್ಯಗಳ ಕುರಿತು ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಡಾ| ಅಂಬೇಡ್ಕರ್ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮಗಳು ಪರಿಶಿಷ್ಟ ಜಾತಿ, ವರ್ಗದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಪವಾಗಿ ಅನುಷ್ಠಾನಗೊಳಿಸಬೇಕು. ಎಸ್‌ಸಿಪಿ, ಟಿಎಸ್‌ಪಿ ಯೋಜನೆಗಳಡಿ ನೀಡುವ ವಿವಿಧ ಯೋಜನೆಗಳ ಸೌಲಭ್ಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿಲ್ಲ. ಆಯೋಗಗಳು ಭೇಟಿ ನೀಡಿದಾಗ ಏನು ಉತ್ತರಿಸುವಿರಿ? ಗಂಗಾ ಕಲ್ಯಾಣ ಯೋಜನೆಯಡಿ 2016-17ನೇ ಸಾಲಿನ ಫಲಾನುಭವಿಗಳಿಗೆ ಈ ವರ್ಷ ಸೌಲಭ್ಯ ಕಲ್ಪಿಸಲಾಗುತ್ತಿರುವುದು ಕಂಡುಬಂದಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಇಷ್ಟು ವಿಳಂಬವಾಗಬಾರದು. 2017-18 ಮತ್ತು 2018-19ನೇ ಸಾಲಿನಲ್ಲಿ ಯಾವುದೇ ಆಯ್ಕೆ ಪ್ರಕ್ರಿಯೆ ಉಳಿಯುವಂತಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಿ ತ್ವರಿತವಾಗಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಒದಗಿಸಬೇಕು.
ಈ ಕುರಿತು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರದ ಸೌಲಭ್ಯಕ್ಕೆ ಆಯ್ಕೆ ಮಾಡುವ ಫಲಾನುಭವಿಗಳ ಆಧಾರ್ ಕಾರ್ಡ್‌ನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ರಸ್ತೆ ದುರಸ್ತಿ, ಶೌಚಾಲಯ, ಶಾಲಾ ಗೋಡೆ ಹೀಗೆ ಇನ್ನೂ ಅನೇಕ ಸಾರ್ವಜನಿಕ ಸಮಸ್ಯೆಗಳ ಕುರಿತ ದಿನ ಪತ್ರಿಕೆಗಳಲ್ಲಿ ಬರುವ ವರದಿಗಳಿಗೆ ಸಂಬಂಧಿಸಿ ಅಧಿಕಾರಿಗಳು ಯಾವುದೇ ಉತ್ತರ ನೀಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಒ ರಘುನಂದನ ಮೂರ್ತಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಾ ಜೈನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ. ಕಲ್ಲೇಶ, ಜಂಟಿ ಕೃಷಿ ನಿರ್ದೇಶಕಿ ಶಬಾನ ಎಂ. ಶೇಖ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಈರಣ್ಣ ಪಂಚಾಳ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಜಿ. ನಾಡಗೀರ, ಜಿಲ್ಲಾ ಕಾರ್ಮಿಕ ನಿರೀಕ್ಷಕ ಹೊನ್ನಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.