Advertisement
ವಿಚಿತ್ರವೆಂದರೆ, ಲಸಿಕೆಗೆ ನೀಡಲಾಗಿದ್ದ ಅನುಮತಿ ಮೀರಿದ್ದರೂ ಕಳೆದ ಎರಡು ದಶಕಗಳಿಂದಲೂ ನಿರಂತರವಾಗಿ ಲಸಿಕೆ ಪೂರೈಸಲಾಗುತ್ತಿದ್ದುದು ಈಗ ಬೆಳಕಿಗೆ ಬಂದಿದೆ. ಆರಂಭದಲ್ಲಿ ಒಂದು ವರ್ಷಕ್ಕೆ ಮಾತ್ರ ಲಸಿಕೆಗೆ ಅನುಮತಿ ನೀಡಲಾಗಿತ್ತು. ಆದರೆ ಆ ನಂತರ ಯಾವ ಅನುಮತಿಯೂ ಇಲ್ಲದೆ 20 ವರ್ಷ ಲಸಿಕೆಯನ್ನು ಉತ್ಪಾದನೆ ಮಾಡಿ ಪೂರೈಸಲಾಗುತ್ತಿತ್ತು. ಇದೀಗ ದಿಢೀರಾಗಿ ಲಸಿಕೆ ಉತ್ಪಾದನೆಯನ್ನು ಸ್ಥಗಿತಗೊಂಡಿರುವುದು ಮಲೆನಾಡು ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
Related Articles
Advertisement
ಪರೀಕ್ಷೆ ನಡೆಯಲಿಲ್ಲ: ಎನ್‌ಐವಿ ಪುಣೆ ವಿಜ್ಞಾನಿ ಸಿ.ಎನ್.ದಂಡಾವತರೆ ಅವರಿಂದ ಫಾರ್ಮುಲಾ ಪಡೆದ ಬಳಿಕ ಎಐಎಚ್‌ವಿಬಿ ಲಸಿಕೆ ತಯಾರಿಕೆ ಆರಂಭಿಸಿತ್ತು. 2000ರಲ್ಲಿ ಒಂದು ವರ್ಷದ ಅವಧಿಗೆ ಅದು ಲೈಸೆನ್ಸ್ ಪಡೆದಿತ್ತು. ನಂತರ ಅದು ಮೂರು ಬಾರಿ ಅನುಮತಿ ಕೇಳಿ ಅರ್ಜಿ ಸಲ್ಲಿಸಿದೆ. ಆದರೆ ಒಮ್ಮೆಯೂ ಈ ಅವಧಿ ಯಲ್ಲಿ ಅದು ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿ (ಸಿಡಿ ಎಲ್) ಲಸಿಕೆ ಕ್ಷಮತೆ, ಸಾಮರ್ಥ್ಯ (ಪೂಟೆನ್ಸಿ) ಪರೀಕ್ಷೆ ನಡೆಸಲಿಲ್ಲ. ಜತೆಗೆ ಸೆಂಟ್ರಲ್ ಡ್ರಗ್ಸ್ ಸ್ಟಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ (ಸಿಡಿಎಸ್‌ಸಿಒ) ಕೂಡ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿಲ್ಲ. ಇದು ಕೂಡ ಲಸಿಕೆ ಸಾಮರ್ಥ್ಯ ಹಾದಿ ತಪ್ಪಲು ಕಾರಣಗಳಾಗಿವೆ. ಲಸಿಕೆ ಕ್ಷಮತೆ ಪರಿಶೀಲನೆಗೆ ಒಳಪಡಿಸುವುದು ಲೈಸೆನ್ಸ್ ಪಡೆದ ಸಂಸ್ಥೆ ಜವಾಬ್ದಾರಿ ಕೂಡ ಹೌದು ಎಂದು ಕೆಲ ಅಧಿಕಾರಿಗಳು ತಿಳಿಸುತ್ತಾರೆ.
ಸಿಡಿಎಲ್‌ನಲ್ಲಿ ಅಧಿಕಾರಿಗಳು: ಲಸಿಕೆ ಬಗ್ಗೆ ಮಾಹಿತಿ ಹೊರಬರುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಿದ್ದು ಐಎಎಚ್‌ವಿಬಿ ಅಧಿಕಾರಿಗಳು ಹಿಮಾಚಲ ಪ್ರದೇಶ ದಲ್ಲಿರುವ ಸಿಡಿ ಎಲ್‌ಗೆ ಭೇಟಿ ನೀಡಿ ಲಸಿಕೆಯನ್ನು ಪೊಟೆನ್ಸಿ (ಸಾಮರ್ಥ್ಯ) ಪರೀಕ್ಷೆಗೆ ಒಳಪಡಿಸಿದ್ದಾರೆ. ಅಲ್ಲಿಂದ ವರದಿ ಬರುವವರೆಗೂ ಲಸಿಕೆ ವಿತರಣೆ ನಡೆಯುವುದಿಲ್ಲ.
ಸಿಡಿಎಲ್‌ಗೆ ಗೊತ್ತೆ ಇಲ್ಲ: ಭಾರತದಲ್ಲಿ ಯಾವುದೇ ವ್ಯಾಕ್ಸಿನ್‌ಗಳು ತಯಾರಾಗಿ ಮಾರಾಟಕ್ಕೆ ಲೈಸೆನ್ಸ್ ಪಡೆದ ಮೇಲೆ ಅದನ್ನು ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿ ಯಲ್ಲಿ ಪರೀಕ್ಷೆಗೆ ಒಳಪಡಿಸಿ ಅನುಮತಿ ಪಡೆಯಬೇಕು. ಅಲ್ಲಿ ಅದು ತೇರ್ಗಡೆ ಆಗದಿದ್ದರೆ ಬಳಸುವಂತಿಲ್ಲ. 2001ರಿಂದ ಇಲ್ಲಿವರೆಗೆ ಕೆಎಫ್‌ಡಿ ಲಸಿಕೆ ಪರೀಕ್ಷೆಗೆ ಒಳಪಡಿಸಿಲ್ಲ. ಈ ಬಗ್ಗೆ ಆರ್‌ಟಿಐ ದಾಖಲೆ ದೃಢಪಡಿಸಿದೆ.
ಲೈಸೆನ್ಸ್ ಕಿತಾಪತಿ 2000ರಲ್ಲಿ ಒಂದು ವರ್ಷದ ಅವಧಿಗೆ ಅನುಮತಿ ಪಡೆದಿದ್ದ ಐಎಎಚ್‌ವಿಬಿ ಮಧ್ಯದಲ್ಲಿ ಆಗಾಗ್ಗೆ ಅನುಮತಿಗೆ ಅರ್ಜಿ ಸಲ್ಲಿಸಿತ್ತು. ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. 2017ರಲ್ಲಿ ಮತ್ತೆ ಅರ್ಜಿ ಸಲ್ಲಿಸಿತ್ತು. ಅನುಮತಿ ನೀಡಿದ ಪಟ್ಟಿಯಲ್ಲಿ ಕೆಎಫ್‌ಡಿ ಲಸಿಕೆಯನ್ನು ಅದು ಕೈಬಿಟ್ಟಿತ್ತು. ಇದು ಪೂರ್ವಾನ್ವಯ ಆಗುವಂತೆ ಅನುಮತಿ ರದ್ದಾಗಿತ್ತು. ಈಗ 2022ರಲ್ಲಿ ಲಸಿಕೆ ಉತ್ಪಾದನೆಯನ್ನು ಈ ಸಂಸ್ಥೆ ಕೈಬಿಟ್ಟಿದೆ.
ಕೊನೆ ಬ್ಯಾಚ್‌ನ ಲಸಿಕೆ 50 ಸಾವಿರ ವಯಲ್ಸ್ ಇದೆ. ಅದನ್ನು ಪೊಟೆನ್ಸಿ ಟೆಸ್ಟ್‌ಗೆ ತಮ್ಮ ತಂಡ ಸಿಡಿಎಲ್‌ಗೆ ಹೋಗಿದೆ. ಅಲ್ಲಿಂದ ವರದಿ ಬಂದ ಕೂಡಲೇ ಲಸಿಕೆ ವಿತರಣೆ ಮಾಡಲಿದ್ದೇವೆ. ಲಸಿಕೆ ಸಾಮರ್ಥ್ಯ ಕುಸಿದಿದೆ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ. ಅದನ್ನು ಸಿಡಿಎಲ್‌ನವರೇ ಹೇಳಬೇಕು. ● ಡಿ.ರಂದೀಪ್, ಆರೋಗ್ಯ ಇಲಾಖೆ ಆಯುಕ್ತರು
-●ಶರತ್ ಭದ್ರಾವತಿ