Advertisement
ಒಮ್ಮೆ ಅವರು ಭೇಟೆ ಅರಸಿ ಯಲಹಂಕದಿಂದ ಬೆಂದಕಾಳೂರಿನ ಕಡೆಗೆ ಬರು ತ್ತಿದ್ದಾಗ, ಮಾರ್ಗ ಮಧ್ಯದಲ್ಲಿ ಮೊಲವೊಂದು ನಾಯಿ ಯನ್ನು ಓಡಿಸಿಕೊಂಡು ಹೋಗುತ್ತಿದ್ದನ್ನು ಕಂಡರು. ಆಶ್ಚರ್ಯಚಕಿತರಾದ ಗೌಡರು ಇದು “ಗಂಡು ಭೂಮಿ’ ಇರಲೇಬೇಕು ಎಂದರು. ಅಂದಿನ ವಿಜಯನಗರ ಅರಸರಾದ ರಾಜಾ ಅಚ್ಯುತರಾಯರ ಸಹಾಯದಿಂದ 1537ರಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಿಸಿ, ಬೆಂಗಳೂರು ನಗರವನ್ನು ನಿರ್ಮಿಸಿದರು.
Related Articles
Advertisement
ಬಿಜಾಪುರ ಸುಲ್ತಾನನ ಕೈವಶ: ಒಂದನೇ ಕೆಂಪೇಗೌಡ ಹಾಗೂ ಇಮ್ಮಡಿ ಕೆಂಪೇಗೌಡನ ಕೀರ್ತಿ ಸಹಿಸದ ಕೆಲವು ರಾಜರು ಬಿಜಾಪುರ ಸುಲ್ತಾನನಾಗಿದ್ದ ಮಹಮದ್ ಆದಿಲ್ ಷಾನಿಗೆ ಕೆಂಪೇಗೌಡನ ವಿರುದ್ಧ ಯುದ್ಧ ಮಾಡಿ ಸೋಲಿಸಲು ಪ್ರೇರೇಪಿಸಿದರು. ಆದಿಲ್ ಷಾ 1638ರಲ್ಲಿ ಸೇನಾಧಿಪತಿ ರಣದುಲ್ಲಾ ಖಾನನನ್ನು ಕೆಂಪೇಗೌಡನನ್ನು ಸೋಲಿಸಲು ಕಳುಹಿಸಿದನು. ಇವರಲ್ಲಿ ಕೆಲವು ಮರಾಠ ಸೇನಾಧಿಪತಿಗಳು ಸೇರಿದ್ದರು. ಅವರಲ್ಲಿ ಶಾಹಜಿರಾವ್ ಬೋಂಸ್ಲೆ ಸಹ ಒಬ್ಬರು.
(ಸೇನಾಧಿಪತಿ ಶಾಹಜಿರಾವ್ ಬೋಂಸ್ಲೆ ಛತ್ರಪತಿ ಶಿವಾಜಿಯವರ ತಂದೆ.) ಬೆಂದಕಾಳೂರು ಬಿಜಾಪುರ ಸುಲ್ತಾನನ ಕೈವಶವಾಯಿತು. ನಂತರ ಆದ ಒಪ್ಪಂದದಂತೆ ಇಮ್ಮಡಿ ಕೆಂಪೇಗೌಡರು ತನ್ನ ಸಂಸಾರ ಹಾಗೂ ಸೈನ್ಯದೊಂದಿಗೆ ಮಾಗಡಿಯಲ್ಲಿ ನೆಲೆಸಲು ಸೇನಾಧಿಪತಿ ರಣದುಲ್ಲಾ ಖಾನನು ಅವಕಾಶ ಮಾಡಿಕೊಟ್ಟನು. ಈ ಸಂದರ್ಭದಲ್ಲಿ ಆದಿಲ್ ಷಾ ಆಣತಿಯಂತೆ ಬೆಂದಕಾಳೂರನ್ನು ಆಳಲು ಶಾಹಜಿರಾವ್ ಬೋಂಸ್ಲೆಗೆ ಅವಕಾಶ ನೀಡಿದನು. ಇಲ್ಲಿಂದ ಬೆಂದಕಾಳೂರು ಮರಾಠರ ವಶವಾಯಿತು.
ಬೆಂದಕಾಳೂರು 3 ಲಕ್ಷ ವರಹಗಳಿಗೆ ಮಾರಾಟ: ಮೊಗಲ್ ಚರ್ಕವರ್ತಿ ಔರಂಗಜೇಬನ 1687ರಲ್ಲಿ ಬೆಂದಕಾಳೂರು ಕೋಟೆಯನ್ನು ಸೈನಿಕರು ವಶಪಡಿಸಿಕೊಂಡರು. ನಂತರ ಅವರು ಮೈಸೂರು ಅರಸರಾದ ಚಿಕ್ಕದೇವರಾಯ ಒಡೆಯರ್ ಅವರಿಗೆ 1689ರಲ್ಲಿ ಮೂರು ಲಕ್ಷ ವರಹಗಳಿಗೆ ಮಾರಾಟ ಮಾಡಿದರು. ಮೈಸೂರು ಅರಸರ ಸೇನಾಧಿಪತಿಯಾಗಿದ್ದ ಹೈದರಲಿ 1759ರಲ್ಲಿ ಬೆಂದಕಾಳೂರನ್ನು ಅರಸರಿಂದ ಜಾಗಿರ್ ಆಗಿ ಪಡೆದು, ಸೇನಾ ನೆಲೆಯಾಗಿ ಮಾಡಿಕೊಂಡನು.
ಹೈದರಲಿ ಸತ್ತನಂತರ ಟಿಪ್ಪು ಸುಲ್ತಾನನ ಅಧಿಕಾರದಲ್ಲಿ ಮೈಸೂರು ಅರಸರ ಬಲಹೀನತೆಯನ್ನು ಗುರುತಿಸಿ ಟಿಪ್ಪು ಬೆಂದಕಾಳೂರನ್ನು ಸಂಪೂರ್ಣ ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಿ ರಾಜನಾಗಿ ಮೆರೆದನು. ಟಿಪ್ಪು ವಿರುದ್ಧ ಬ್ರಿಟಿಷರು ನಡೆಸಿದ ಸತತ ಮೂರನೇ ಮೈಸೂರು ಯುದ್ಧದಲ್ಲಿ ಬೆಂಗಳೂರನ್ನು ಲಾರ್ಡ್ ಕಾರ್ನ್ವಾಲಿಸ್ 1791 ಮಾರ್ಚ್ 21ರಂದು ವಶಪಡಿಸಿಕೊಂಡನು. ಬ್ರಿಟಿಷರ ವಿರುದ್ಧ 1799ರಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ 4ನೇ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣಿಸಿದ ನಂತರ ಬೆಂದಕಾಳೂರು ಕೋಟೆ ಹಾಗೂ ದಂಡು ಪ್ರದೇಶವೂ ಬ್ರಿಟಿಷರ ಕೈವಶವಾಯಿತು.
ಶ್ರೀರಂಗಪಟ್ಟಣದಲ್ಲಿದ್ದ ಸೇನಾ ನೆಲೆಯನ್ನು 1809ರಲ್ಲಿ ಬ್ರಿಟಿಷರು ಬೆಂಗಳೂರಿಗೆ ಬದಲಾಯಿಸಿದರು. ಬ್ರಿಟಿಷರ ಆಳ್ವಿಕೆ ಅವಧಿಯಲ್ಲಿ ಬೆಂದಕಾಳೂರು ಬೆಂಗಳೂರಾಗಿ ಬದಲಾಗಿದ್ದಲ್ಲದೆ, ನಗರ ಹೆಚ್ಚಿನ ಅಭಿವೃದ್ಧಿ ಕಂಡಿತು. ಅವುಗಳಲ್ಲಿ ದಂಡು ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದ ಆಂಗ್ಲರ ಅನುಕೂಲಕ್ಕಾಗಿ ಅಂದಿನ ವೈಸರಾಯ್ ಲಾರ್ಡ್ ಕರ್ಜನ್ 1864ರಲ್ಲಿ ಅವರ ಮೊದಲ ಪತ್ನಿ ಲೇಡಿ ಕರ್ಜನ್ ಹೆಸರಿನಲ್ಲಿ ಆಸ್ಪತ್ರೆಯನ್ನು ಕಟ್ಟಿಸಿದರು.
ಟಿಪ್ಪು ಸುಲ್ತಾನ್ ಸತ್ತ ನಂತರ ಅಧಿಕಾರ ಬ್ರಿಟಿಷರ ಕೈವಶವಾದ್ದರಿಂದ ಮೈಸೂರು ಒಡೆಯರರು ಬ್ರಿಟಿಷರ ಕೃಪಾಕಟಾಕ್ಷದಿಂದ ಮತ್ತೆ ತಮ್ಮ ಸಿಂಹಾಸನವನ್ನು ಅಲಂಕರಿಸಿದರು. 1887ರಲ್ಲಿ ಬೆಂಗಳೂರು ಅರಮನೆಯನ್ನು ಮೈಸೂರು ಅರಸರು ನಿರ್ಮಿಸಿದರು. ಆದರೂ ಬೆಂಗಳೂರು ಮಾತ್ರ ಈಸ್ಟ್ ಇಂಡಿಯಾ ಕಂಪೆನಿಯ ಅಧೀನದಲ್ಲೇ ಭಾರತಕ್ಕೆ ಸ್ವಾತಂತ್ರÂ ಬರುವತನಕ ಇತ್ತೆಂದು ಮಾಹಿತಿ ಹೇಳುತ್ತದೆ. ಆದ್ದರಿಂದಲೇ ದಂಡು ಪ್ರದೇಶದ ಹಲವಾರು ರಸ್ತೆಗಳಿಗೆ ಮಿಲಿಟರಿಗೆ ಸಂಬಂಧಿಸಿದ ಹೆಸರುಗಳಿವೆ.
ಆರ್ಟಿಲರಿ ರಸ್ತೆ, ಬ್ರಿಗೇಡ್ ರಸ್ತೆ, ಇನ್‌ಫೆಂಟ್ರಿ ರಸ್ತೆ ಮತ್ತು ಕಾವಾಲರಿ ರಸ್ತೆ ಮುಂತಾದವು. ಆಂಗ್ಲರು ವಾಸ ಮಾಡುತ್ತಿದ್ದ ದಂಡು ಪ್ರದೇಶ ಮನೆಗಳಿಗೆ (ರೆಸಿಡೆನ್ಸಿ ) ಎಂದು ಇದರಿಂದಾಗಿ ರೆಸಿಡೆನ್ಸಿ ರಸ್ತೆ ಪ್ರಚಲಿತಕ್ಕೆ ಬಂತು. ಆಂಗ್ಲೋ-ಇಂಡಿಯನ್‌ರ ಸಂಖ್ಯೆ ಹೆಚ್ಚಿದಂತೆ ರಿಚ್‌ಮಂಡ್ ಟೌನ್, ಬೆನ್ಸನ್ ಟೌನ್ ಹಾಗೂ ಕ್ಲೆವ್ ಲ್ಯಾಂಡ್ ಟೌನ್ ಮುಂತಾದವು 1883ರಲ್ಲಿ ಹುಟ್ಟಿಕೊಂಡವು. ಈ ಭಾಗ ಆಂಗ್ಲೋ-ಇಂಡಿಯನ್ ಹಾಗೂ ಬ ಹು ಭಾಷಿಗರ ವಾತಾವರಣದಿಂದ ಕೂಡಿದ ಬೆಂಗಳೂರಾಯಿತು.
ಸ್ಮಾರ್ಟ್ ಸಿಟಿಯತ್ತ ಬೆಂಗಳೂರು: ಅಂದು ಕೇವಲ 4 ವಾರ್ಡ್‌ಗಳಿದ್ದ ಬೆಂಗಳೂರು ನಗರ ಬೆಳೆದಂತೆ ನಗರ ಪಾಲಿಕೆಯಾಗಿ ನಂತರ ಉದ್ಯಮಗಳು, ಬೃಹತ್ ಕೈಗಾರಿಕೆಗಳು ಆಕ್ರಮಿಸಿಕೊಂಡು ಮಹಾನಗರ ಪಾಲಿಕೆಯಾಯ್ತು. ಇಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದಲ್ಲಿ ಪ್ರಪಂಚದ ಇತರ ರಾಷ್ಟ್ರಗಳು ಬೆಕ್ಕಸ ಬೆರಗಾಗುವಂತೆ ಮಾಡಿ, 198 ವಾರ್ಡ್‌ಗಳೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ರೂಪುಗೊಂಡಿದೆ. ವಿಶ್ವದಲ್ಲೇ 2ನೇ ಅತಿ ದೊಡ್ಡ ನಗರ ಎಂಬ ಖ್ಯಾತಿ ಗಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳು, ಮೇಲ್‌ರಸ್ತೆ, ಕೆಳರಸ್ತೆ ಗಳು (ಫ್ಲೆ$çಓವರ್ ಗಳು, ಅಂಡರ್‌ಪಾಸ್‌ಗಳು), ವರ್ತುಲ ರಸ್ತೆಗಳು ಬರುತ್ತವೆ. ಜನದಟ್ಟಣೆ ಹಾಗೂ ವಾಹನದಟ್ಟಣೆ ಹೆಚ್ಚಿದಂತೆ ರಸ್ತೆ ವಿಸ್ತರಣೆ, ಗ್ರೇಡ್ ಸೆಪರೆಟರ್, ಸರ್ಫೆಸ್ ಪಾಸ್, ಎಲೆವೆಟೆಡ್ ಕಾರಿಡಾರ್, ಐಟಿ, ಬಿಟಿ ರಸ್ತೆಗಳು, ಮೆಟ್ರೋ ರೈಲು ಹಾಗೂ ಮಳೆ ಕೊಯ್ಲು, ಕೊಳಚೆ ನಿರ್ಮೂಲನೆ, ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ, ಉದ್ಯಾನವ ಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿ, ಜಿರೋ ಗಾರ್ಬೆಜ್, ಸಾರ್ವಜನಿಕ ಆರೋಗ್ಯ ರಕ್ಷಣೆ, ನಾಗರಿಕ ಸೌಲಭ್ಯ, ಪರಿಸರ ರಕ್ಷಣೆ ಮುಂತಾದ ಕಾರ್ಯಗಳು ನಡೆಯುತ್ತಿವೆ.
ಇ-ಗರ್ವನ್ಸ್ ನಂತಹ ಆಧುನಿಕ ಪದ್ಧತಿ ಅನುಸರಿಸಿ ಡಿಜಿಟಲ್ ಯುಗದತ್ತ ಮುನ್ನಡೆಯುತ್ತಾ ಬಿಬಿಎಂಪಿ ಕಾರ್ಯನಿರ್ವಹಿಸುತ್ತಿದೆ. ಇಂದಿನ ಬೆಂಗಳೂರಿನಲ್ಲಿ ಹೈಟೆಕ್ ಆಸ್ಪತ್ರೆಗಳು, ಶಾಲಾ- ಕಾಲೇಜು, ವಿಶ್ವಮಾನ್ಯ ತಂತ್ರಜ್ಞಾನ ಸಂಸ್ಥೆಗಳು, ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಪಾರ್ಕ್ ಗಳು, ಲೇಕ್‌ಗಳು, ಬಾರ್-ಪಬ್‌ಗಳು, ಬೃಹತ್ ಮಾರುಕಟ್ಟೆ ಗಳು, ವಿಮಾನ ನಿಲ್ದಾಣ, ಮೆಟ್ರೋ ರೈಲು ಎಲ್ಲವೂ ಇದ್ದು ಸ್ಮಾರ್ಟ್ ಸಿಟಿಯಾಗುವತ್ತ ಮುನ್ನಡೆದಿದೆ.
ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆ: ರಾಜ್ಯ ಸರ್ಕಾರ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ರಾಜ್ಯ ಮಟ್ಟದಲ್ಲಿ ಆಚರಿಸುವ ಮಹತ್ವದ ತೀರ್ಮಾನ ಕೈಗೊಂಡಿದ್ದು ಅದರಂತೆ ಜೂ. 27ರಂದು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೆಂಪೇಗೌಡ ಜಯಂತಿ ವಿಜೃಂಭಣೆಯಿಂದ ನಡೆಯಲಿದೆ. ಕೆಂಪೇಗೌಡರ ಹುಟ್ಟೂರು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದ್ದು, ಅದರ ಮೂಲಕ ಕೆಂಪೇಗೌಡರ ಜೀವನ ಹಾಗೂ ಅವರ ಕೆಲಸ ಕಾರ್ಯಕಗಳ ಬಗ್ಗೆ ಸಂಶೋಧನೆನೆ, ಪುಸ್ತಕ ಪ್ರಕಟಣೆ ಹಾಗೂ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗುತ್ತಿದೆ.
ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರನ್ನು ಸ್ಮರಿಸಿ ಅವರು ಸಾಧನೆಗಳನ್ನು ಜನರಿಗೆ ತಲುಪಿಸಲು ಮತ್ತು ನಗರ ನಿರ್ಮಾಣದಲ್ಲಿ ಅವರಿಗಿದ್ದ ಆಶಯವನ್ನು ಮುಂದಿನ ಪೀಳಿಗೆಗೆ ಮುಟ್ಟಿಸಲು ಪ್ರಾಧಿಕಾರದ ವತಿಯಿಂದ ಕೆಂಪೇಗೌಡರು ನಿರ್ಮಿಸಿದ್ದ ಕೆರೆಗಳು, ಶಾಸನಗಳು, ಗುಡಿ ಗೋಪುರ ಸಂರಕ್ಷಣೆ ಮತ್ತು ಜೀರ್ಣೋದ್ಧಾರ ಮಾಡುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗಿದೆ. ನಾಡಪ್ರಭು ಕೆಂಪೇಗೌಡರ ಅಧ್ಯಯವ ಕೇಂದ್ರ ಸ್ಥಾಪಿಸುವ ಉದ್ದೇಶವೂ ಇದೆ.
ಬೆಂಗಳೂರು ಕೇಂದ್ರ ಭಾಗದಲ್ಲಿ ಕೆಂಪೇಗೌಡರ ಭವನ ನಿರ್ಮಾಣ, ಕೆಂಪೇಗೌಡರು ಮತ್ತು ಅವರ ವಂಶಸ್ಥರು ಆಳ್ವಿಕೆ ನಡೆಸಿರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಗುಡಿಗೋಪುರ, ಕೋಟೆಗಳು, ಶಿಲಾಶಾಸನ, ಕೆರೆಗಳನ್ನು ಸಂರಕ್ಷಿಸಿ ಅಭಿವದ್ಧಿ ಪಡಿಸುವ ಗುರಿ ಹಾಕಿಕೊಳ್ಳಲಾಗಿದೆ. ಮಾಗಡಿ ಬಳಿಯ ತಿಪ್ಪಸಂದ್ರ ಹ್ಯಾಂಡ್‌ಪೋಟ್ಸ್ ಮತ್ತು ಕೆಂಚನಹಳ್ಳಿ ನಡುವೆ ಇರುವ ಕೆಂಪಾಪುರ ಗ್ರಾಮದಲ್ಲಿ ಕೆಂಪೇಗೌಡರ ಸಮಾಧಿ ಇದೆ ಎಂದು ಸಂಶೋಧಕರು ಗುರುತಿಸಿದ್ದು, ಕರ್ನಾಟಕ ಇತಿಹಾಸ ಅಕಾಡೆಮಿಯೂ ಇದನ್ನು ಒಪ್ಪಿದೆ. ಈ ಸ್ಥಳವನ್ನು ಸರ್ವರಿಗೂ ಒಪ್ಪುವ ರೀತಿಯಲ್ಲಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡರ ಹೆಸರಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಕೆಂಪೇಗೌಡರ ಹೆಸರು ಬೆಂಗಳೂರು ಅಭಿವೃದ್ಧಿಯೊಂದಿಗೆ ಬೆಸೆದುಕೊಂಡಿದೆ. ಈಗಾಗಲೇ ನಗರದ ಪ್ರಮುಖ ಬಸ್ ನಿಲ್ದಾಣ ಮೆಜೆಸ್ಟಿಕ್ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕೆಂಪೇಗೌಡರ ಹೆಸರು ಇಡಲಾಗಿದೆ. ಇದೀಗ ಬೆಂಗಳೂರು ವಿವಿಗೂ ಕೆಂಪೇಗೌಡರ ಹೆಸರಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
* ಗೋಪಾಲ್ ತಿಮ್ಮಯ್ಯ