ಮೈಸೂರು: ಕರ್ನಾಟಕ ವಿಚಾರ ವೇದಿಕೆ ಹಾಗೂ ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹೊರತಂದಿರುವ ಪ್ರೊ.ಬೆಸೂರು ಮೋಹನ್ ಪಾಳೇಗಾರ್‌ರ ಐದು ಕೃತಿಗಳು ಸೋಮವಾರ ಲೋಕಾರ್ಪಣೆಗೊಂಡಿತು.
ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಹಾರ್ಡ್ವಿಕ್ ಪ್ರೌಢಶಾಲೆಯ ಪ್ರಾರ್ಥನಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪ್ರೊ.ಬೆಸೂರು ಮೋಹನ್ ಪಾಳೇಗಾರ್ ಅವರ ಭೌತ ವಿಜ್ಞಾನದ ಹೊಸಹೊಳವು, ಯಂತ್ರ ಜಗತ್ತಿನ ವಿಸ್ಮಯ, ಯುಗ ಪ್ರವರ್ತಕ ತಂತ್ರಜ್ಞಾನ, ಮನೋಲ್ಲಾಸ ಕ್ರಿಕೆಟ್, ಕ್ರಯೋಜನಿಕ್ ತಂತ್ರಜ್ಞಾನ ಶೀರ್ಷಿಕೆಯ ಪಂಚ ಕೃತಿಗಳನ್ನು ಸಾಹಿತಿ ಡಾ.ಮಳಲಿ ವಸಂತಕುಮಾರ್ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಇದು ಆಧುನಿಕ ಕಾಲವಾಗಿದ್ದು, ಹೀಗಾಗಿ ಇಡೀ ಜಗತ್ತು ವಿಜ್ಞಾನದ ಮೇಲೆ ನಿಂತಿದೆ. ಆ ಮೂಲಕ ಎಲ್ಲವನ್ನೂ ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಇದು ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗಳನ್ನು ಹೇಳುವ ಕಾಲವಲ್ಲ.
ಹೀಗಾಗಿ ಇಂತಹ ಸಮಯದಲ್ಲಿ ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಹೊರತರುವ ಮೂಲಕ ಪ್ರೊ.ಬೆಸೂರು ಮೋಹನ್ ಪಾಳೇಗಾರ್ ಅವರು ಕನ್ನಡ ಸಾರಸ್ವತ ಲೋಕ ಹಾಗೂ ವಿಜ್ಞಾನ ಲೋಕದ ನಡುವಿನ ರಸಸೇತುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಕೊಡುಗೆ ನೀಡಿದವರಲ್ಲಿ ಬಿಎಂಶ್ರೀ ಬಿಟ್ಟರೆ, ಪ್ರೊ.ಮೋಹನ್ ಪಾಳೇಗಾರ್ ನಂತರ ಸ್ಥಾನದಲ್ಲಿ ನಿಲ್ಲುತ್ತಾರೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ನಡೆದ ದೀಪಾವಳಿ ಕವಿಗೋಷ್ಠಿಯಲ್ಲಿ ಹಲವು ಮಂದಿ ಕಾವ್ಯ ವಾಚನ ಮಾಡಿದರು. ಮಂಗಳೂರಿನ ಸಿಎಸ್‌ಐ-ಕೆಎಸ್‌ಡಿ ಬಿಷಪ್ ಮೋಹನ್ ಮನೋರಾಜ್, ವೈದ್ಯ ಹಾಗೂ ಸಾಹಿತಿ ಡಾ.ಕೆ.ಎಂ.ಗೋವಿಂದೇಗೌಡ, ನಿವೃತ್ತ ಸರ್ಕಾರಿ ಅಭಿಯೋಜಕ ಡಿ.ಜೆ.ಶಿವರಾಮ್, ಜನಪದ ವಿದ್ವಾಂಸ ಪ್ರೊ.ಜಿ.ಎಸ್.ಭಟ್ಟ, ಸಮಾಜ ಸೇವಕ ಕೆ.ರಘುರಾಂ, ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಿ.ಪ್ರಕಾಶ್, ಬಿಷಪ್ ಎನ್.ಸಿ.ಸಾರ್ಜೆಂಟ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಸ್ಯಾಂಸನ್ ಜಯಂತ ಸಾಧು ಇದ್ದರು.