Advertisement

ಪೊರಕೆಯೊಂದಿಗೆ ಮೆರವಣಿಗೆ

12:57 PM May 26, 2017 | Team Udayavani |

ದಾವಣಗೆರೆ: ಈಗಾಗಲೇ ಗುತ್ತಿಗೆ ಪದ್ಧತಿಯಡಿ ಕೆಲಸ ಮಾಡುತ್ತಿರುವರನ್ನೇ ಕಾಯಂ ಮಾಡಬೇಕು ಎಂದು ಒತ್ತಾಯಿಸಿ ಗುರುವಾರ ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕರ ಮಹಾ ಸಂಘದ ನೇತೃತ್ವದಲ್ಲಿ ಪೌರ ಕಾರ್ಮಿಕರು ಪೊರಕೆ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. 

Advertisement

ಮಹಾನಗರ ಪಾಲಿಕೆಯಿಂದ ಮೆರವಣಿಗೆ ಪ್ರಾರಂಭಿಸಿದ ಪೌರ ಕಾರ್ಮಿಕರು ಎವಿಕೆ ಕಾಲೇಜು ರಸ್ತೆ, ಚೇತನಾ ರಸ್ತೆ, ಅಂಬೇಡ್ಕರ್‌ ವೃತ್ತ, ಜಯದೇವ ವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ, ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು. 

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರು ಸ್ವತ್ಛತೆ ಕೆಲಸ ಮಾಡುತ್ತಾ ಬಂದಿದ್ದಾರೆ. ಉತ್ಛ ನ್ಯಾಯಾಲಯ ಗುತ್ತಿಗೆ ಪೌರ ಕಾರ್ಮಿಕರನ್ನ ಕಾಯಂ ಮಾಡಬೇಕು ಎಂಬ ಆದೇಶ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ವಿಧಾನ ಸಭಾ ಕಲಾಪದಲ್ಲೇ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಹೇಳಿಕೆ ನೀಡಿದ್ದರು. 

ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ, 2017ರ ಮಾರ್ಚ್‌ನಲ್ಲಿ ಎಲ್ಲರನ್ನೂ ಖಾಯಂ ಮಾಡುವ ಎಂಬ ಘೋಷಣೆ ಮಾಡಿದ್ದರು. ಆದರೆ, ಈವರೆಗೆ ಖಾಯಂಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುತ್ತಿದೆ.

ಗುತ್ತಿಗೆ ಪೌರ ಕಾರ್ಮಿಕರ ಕಾಯಂಯಾತಿ ಸಂಬಂಧ ಇತರೆ ರಾಜ್ಯದಲ್ಲಿ ಸಮಿತಿ ಮೂಲಕ ಸಮೀಕ್ಷೆ ನಡೆಸಿ, ವರದಿಯನ್ನೂ ಪಡೆದುಕೊಳ್ಳಲಾಗಿದೆ. ಇಷ್ಟಾದರೂ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡುತ್ತಿಲ್ಲ. ಖುದ್ದು ಮುಖ್ಯಮಂತ್ರಿಗಳ ಆದೇಶವನ್ನೂ ಕಡೆಗಣಿಸುತ್ತಿದ್ದಾರೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ಎಲ್ಲರನ್ನೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

Advertisement

ಕೂಡಲೇ ಗುತ್ತಿಗೆ ಪದ್ಧತಿ ರದ್ಧುಪಡಿಸಿ, ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು. ಇನ್ನು 15 ದಿನಗಳ ಒಳಗಾಗಿ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡಬೇಕು. ಇಲ್ಲದಿದ್ದಲ್ಲಿ ಜೂ. 12 ರಿಂದ ಸ್ವತ್ಛತಾ ಕೆಲಸ ಸ್ಥಗಿತಗೊಳಿಸಿ, ನಿರಂತರ ಧರಣಿ, ಪ್ರತಿಭಟನೆ ನಡೆಸಲಾಗುವುದು.

ಅಂತಿಮವಾಗಿ ವಿಧಾನ ಸೌಧಕ್ಕೂ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ 90 ಜನ ಪೌರ ಕಾರ್ಮಿಕರಿಗೆ ಕಳೆದ 6 ತಿಂಗಳಿನಿಂದ ವೇತನವನ್ನೇ ಕೊಟ್ಟಿಲ್ಲ. ಜೀವನ ಕಷ್ಟವಾಗುತ್ತಿದೆ. ಬಾಕಿ ಇರುವ ವೇತನ ಕೊಡುವ ಜೊತೆಗೆ 90 ಜನರನ್ನು ಕೆಲಸದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಎಲ್‌.ಎಂ. ಹನುಮಂತಪ್ಪ, ಉಪಾಧ್ಯಕ್ಷ ಎಲ್‌. ಎಚ್‌. ಸಾಗರ್‌, ಮುಖಂಡರಾದ ಎನ್‌. ನೀಲಗಿರಿಯಪ್ಪ, ಬಿ. ಲೋಹಿತ್‌, ಎಲ್‌. ಡಿ. ಗೋಣೆಪ್ಪ, ಕೆ.ವಿ. ಚಂದ್ರಶೇಖರ್‌, ರವಿಕುಮಾರ್‌, ಅರವಿಂದ್‌ ಕುಮಾರ್‌, ಶಿವರಾಜ್‌, ಮಾಲತೇಶ್‌, ರಾಮಚಂದ್ರಪ್ಪ, ಮುತ್ತೂರಮ್ಮ, ಮಂಜಮ್ಮ, ರೇಣುಕಮ್ಮ, ಮೂರ್ತಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next