ಕೊಡಿಯಾಲ್ ಬೈಲ್ : ಇಲ್ಲಿನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಮಾತೆಯರಿಗೆ ನಡಾವಳಿ ಉತ್ಸವದ ಹಿನ್ನೆಲೆಯಲ್ಲಿ ನೂತನವಾಗಿ ಸಮರ್ಪಿಸಲಾಗುವ ಮೂರು ರಜತ ಪಲ್ಲಕ್ಕಿಗಳ ಶೋಭಾಯಾತ್ರೆ ಹಾಗೂ ಹಸುರುಹೊರೆ ಕಾಣಿಕೆ ಮೆರವಣಿಗೆ ಶ್ರೀ ಕ್ಷೇತ್ರ ಕದ್ರಿಯಿಂದ ಬುಧವಾರ ಸಂಜೆ ನಡೆಯಿತು. ಶೋಭಾಯಾತ್ರೆ ಕದ್ರಿಯಿಂದ ಮಲ್ಲಿಕ್ಕಟ್ಟೆ, ಬಂಟ್ಸ್ ಹಾಸ್ಟೆಲ್, ಪಿವಿಎಸ್ ಸರ್ಕಲ್, ಬೆಸೆಂಟ್ ಕಾಲೇಜು ಸಮೀಪದಿಂದ ಸಾಗಿ ಕುದ್ರೋಳಿ ಕ್ಷೇತ್ರಕ್ಕೆ ಸಾಗಿ ಬಂತು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕ್ಷೇತ್ರದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ಪ್ರಮುಖರು ಭಾಗವಹಿಸಿದ್ದರು. ಸುಮಂಗಲಿಯರು ಕಲಶ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಸ್ತಬ್ಧ ಚಿತ್ರ, ಕೊಂಬು, ಚೆಂಡೆ, ವಿವಿಧ ರೀತಿಯ ಬ್ಯಾಂಡ್, ವಾದ್ಯಗಳು ಯಾತ್ರೆಗೆ ಮೆರುಗು ನೀಡಿತು.
ಕುದ್ರೋಳಿ ಶ್ರೀ ಚೀರುಂಭ ಭಗವತೀ, ಶ್ರೀ ಪಾಡಂಗರ ಭಗವತೀ ಹಾಗೂ ಶ್ರೀ ಪುಲ್ಲೂರಾಳಿ ಭಗವತೀ ಮಾತೆಯರಿಗೆ ನೂತನ ತೇಗದ ಮರದ ಪಲ್ಲಕ್ಕಿಗೆ ರಜತ ಕವಚ ಅಳವಡಿಸಲಾಗಿದ್ದು, ಇದಕ್ಕೆ ಸುಮಾರು 66 ಕೆ.ಜಿ. ಬೆಳ್ಳಿ ಬಳಸಲಾಗಿದೆ.
ಎ. 6ರಿಂದ ನಡಾವಳಿ
ಎ. 6ರಿಂದ 8ರ ವರೆಗೆ ಕ್ಷೇತ್ರದಲ್ಲಿ ನಡಾವಳಿ ಉತ್ಸವ ನಡೆಯಲಿದೆ. 6ರಂದು ಬೆಳಗ್ಗೆ 9.45ಕ್ಕೆ ಭಂಡಾರ ಏರಿ ಮಧ್ಯಾಹ್ನ ಶ್ರೀ ಚೀರುಂಭ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ, ರಾತ್ರಿ 10.30ರಿಂದ ಬಲಿ ಉತ್ಸವ, ಮೂರ್ತಿ ದರ್ಶನ ನಡೆಯಲಿದೆ. ಎ. 7ರಂದು ಮಧ್ಯಾಹ್ನ 1ಕ್ಕೆ ಶ್ರೀಪಾಡಂಗರೆ ಭಗವತೀ ಕ್ಷೇತ್ರದಲ್ಲಿ ವಿಶೇಷ ಮಹಾಪೂಜೆ ರಾತ್ರಿ 10.30ಕ್ಕೆ ಭೇಟಿಕಳ ನಡೆಯಲಿದೆ.
ವೀರಸ್ತಂಭ ದರ್ಶನ, ಮೇಲೇರಿಗೆ ಅಗ್ನಿಸ್ಪರ್ಶ ನಡೆಯಲಿದೆ. ರಾತ್ರಿ 2.30ಕ್ಕೆ ಶ್ರೀ ಭಗವತೀ ಮಾತೆಯರ ಭವ್ಯ ಶೋಭಾಯಾತ್ರೆ, ಮುಂಜಾನೆ 3.30ಕ್ಕೆ ಕೆಂಡಸೇವೆ, ಮೂರ್ತಿದರ್ಶನ ನಡೆಯಲಿದೆ. ಎ. 8ರಂದು ಮಧ್ಯಾಹ್ನ 1ಕ್ಕೆ ಶ್ರೀ ಪುಲ್ಲೂರಾಳಿ ಭಗವತೀ ಕ್ಷೇತ್ರದಲ್ಲಿ ವಿಶೇಷ ಮಹಾಪೂಜೆ, ರಾತ್ರಿ 10.30ಕ್ಕೆ ಕೆಂಡಸೇವೆ, ಮೂರ್ತಿದರ್ಶನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಮೂರೂ ದಿನ ರಾತ್ರಿ 8ರಿಂದ ಕೂಟಕ್ಕಳ ಆಡಿಟೋರಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.