Advertisement

ವಿಧಾನ ಪರಿಷತ್‌ ಸ್ಥಾನ ಅನಿರೀಕ್ಷಿತ: ಹರೀಶ್‌ ಕುಮಾರ್‌

04:45 PM Jun 06, 2018 | Team Udayavani |

ಮಂಗಳೂರು: “ವಿಧಾನ ಪರಿಷತ್‌ ಸ್ಥಾನ ನನಗೆ ಅನಿರೀಕ್ಷಿತ. ಪಕ್ಷ ಗುರುತಿಸಿ ನನಗೆ ಈ ಅವಕಾಶವನ್ನು ನೀಡಿದೆ’ ಎಂದು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಕೆ. ಹರೀಶ್‌ ಕುಮಾರ್‌ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ವಿಧಾನ ಪರಿಷತ್‌ ಸ್ಥಾನಕ್ಕೆ ಕಾಂಗ್ರೆಸ್‌ ಪಕ್ಷದೊಳಗೆ ಘಟಾನುಘಟಿ ನಾಯಕರಿಂದ ಪ್ರಬಲ ಪೈಪೋಟಿಯಿದ್ದರೂ ಟಿಕೆಟ್‌ ಆಕಾಂಕ್ಷಿಗಳ ರೇಸ್‌ನಲ್ಲಿ ಹೆಚ್ಚು ಸುದ್ದಿಯಲ್ಲಿಲ್ಲದ ಹರೀಶ್‌ ಕುಮಾರ್‌ ಪಕ್ಷದ ಅಭ್ಯರ್ಥಿಯಾಗಿ ಅನಿರೀಕ್ಷಿತವಾಗಿ ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಮಂಗಳವಾರ ಪ್ರಥಮ ಭೇಟಿಯ ಸಂದರ್ಭದಲ್ಲಿ ಉದಯವಾಣಿ ಜತೆ ಅವರು ಮಾತನಾಡಿದರು.

ವಿಧಾನ ಪರಿಷತ್‌ ಸ್ಥಾನಕ್ಕೆ ಅನಿರೀಕ್ಷಿತವಾಗಿತ್ತು. ಪಕ್ಷ ನಿಷ್ಠೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷನಾಗಿ ಕಳೆದ 10 ತಿಂಗಳಿನಿಂದ ನನ್ನ ಕಾರ್ಯ ನಿರ್ವಹಣೆಯನ್ನು ಗುರುತಿಸಿ ಈ ಸ್ಥಾನ ನೀಡಿದೆ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ಚುನಾವಣಾ ಪೂರ್ವದಲ್ಲಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಪ್ರಮುಖ ನಾಯಕರು, ಪದಾಧಿಕಾರಿಗಳ ಜತೆ ಸಂವಾದ ನಡೆಸಿದ್ದರು. ಈ ಸಂದರ್ಭ ಪಕ್ಷಕ್ಕಾಗಿ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ರಾಹುಲ್‌ ವಿಧಾನಪರಿಷತ್‌ನಲ್ಲಿ ಒಂದು ಸ್ಥಾನವನ್ನು ಜಿಲ್ಲಾಧ್ಯಕ್ಷರಿಗೆ ನೀಡಬೇಕು ಎಂಬ ಸೂಚನೆಯನ್ನು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ನನಗೆ ಈ ಸ್ಥಾನವನ್ನು ನೀಡಿದೆ ಎಂದು ನಾನು ಭಾವಿಸುತ್ತೇನೆ ಎಂದರು.

ಪ್ರಾಮಾಣಿಕತೆಗೆ ಸಂದ ಗೌರವ
ನನಗೆ ದೊರೆತಿರುವ ವಿಧಾನಪರಿಷತ್‌ ಸ್ಥಾನ ಪಕ್ಷದ ನಿಷ್ಠಾವಂತ, ಪ್ರಾಮಾಣಿಕ ಕಾರ್ಯಕರ್ತರಿಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಪಕ್ಷಕ್ಕೆ ನಿಷ್ಠರಾಗಿ ಪ್ರಾಮಾಣಿಕತೆಯಿಂದ ದುಡಿದರೆ ಪಕ್ಷ ಒಂದಲ್ಲ ಒಂದು ದಿನ ಅವರ ಸೇವೆಯನ್ನು ಗುರುತಿಸುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಅವಕಾಶಕ್ಕಾಗಿ ತಾಳ್ಮೆ, ಸಹನೆಯಿಂದ ಕಾಯಬೇಕು ಎಂದು ಹರೀಶ್‌ ಕುಮಾರ್‌ ತಿಳಿಸಿದರು.

Advertisement

ಜವಾಬ್ದಾರಿ ಹೆಚ್ಚಿದೆ
“ದ.ಕ. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಈ ರೀತಿಯ ಹಿನ್ನಡೆ ಅನಿರೀಕ್ಷಿತವಾಗಿತ್ತು.  ಈ ಕಾಲ ಘಟ್ಟದಲ್ಲಿ ಪಕ್ಷ ನನಗೆ ವಿಧಾನ ಪರಿಷತ್‌ ಸ್ಥಾನದ ಜವಾಬ್ದಾರಿ ನೀಡಿದೆ.

ಜಿಲ್ಲಾಧ್ಯಕ್ಷತೆಯ ಜತೆಗೆ ನನ್ನ ಹೊಣೆಗಾರಿಕೆ ಇನ್ನಷ್ಟು ಹೆಚ್ಚಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು ಸಿದ್ಧಗೊಳ್ಳಬೇಕಾಗಿದೆ. ಪಕ್ಷದ ಶಾಸಕರು, ಹಿರಿಯ ನಾಯಕರು, ಪದಾಧಿಕಾರಿಗಳ ಜತೆ
ಚರ್ಚಿಸಿ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಕೆಲಸ ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ನಾನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವನಾದುದರಿಂದ ಈ ಜಿಲ್ಲೆಯ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸರಕಾರದ ಗಮನ ಸೆಳೆದು ಪರಿಹಾರ ಕಂಡುಕೊಳ್ಳಲು, ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ವಿಧಾನಪರಿಷತ್‌ ಸದಸ್ಯ ಸ್ಥಾನ ಇನ್ನಷ್ಟು ಶಕ್ತಿ ನೀಡಿದೆ. ಪಕ್ಷ ಸಂಘಟನೆಗೆ ಇದೊಂದು ಅವಕಾಶ. ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಸದೃಢವಾಗಿ ಕಟ್ಟುವಲ್ಲಿ ಶ್ರಮಿಸುತ್ತೇನೆ ಎಂದು ಹರೀಶ್‌ ಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next